ಸಚಿವರ ಕೈಗೊಂಬೆಯಾದ ತಹಸೀಲ್ದಾರ: ಸಜ್ಜನಶೆಟ್ಟಿ.
ಚಿತ್ತಾಪುರ: ಭೀಮ ನಡಿಗೆ ಪಥಸಂಚಲನಕ್ಕೆ
ಎರೆಡೆರಡು ಬಾರಿ ಅನುಮತಿ ನೀಡುವ ಮೂಲಕ ತಹಸೀಲ್ದಾರ್ ತಮ್ಮ ಮನಬಂದಂತೆ ವರ್ತಿಸಿದ್ದು, ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ಎಸ್ ಪಥ ಸಂಚಲನಕ್ಕೆ ತಾಲೂಕು ಕಂದಾಯ ವ್ಯಾಪ್ತಿಯಲ್ಲಿ ಇರುವವರಿಗೆ ಹಾಗೂ 350 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು, ಸಂಚಲನಕ್ಕೆ ಬರುವವರ ಐಡಿ ಕಾರ್ಡ್ ಪರಿಶೀಲನೆ ನಡೆಸಿ ಬ್ಯಾರಿಕೇಡ್ ಹಾಕಿ ನಾಕಾಬಂಧ ಹಾಕಿ, ಪಥ ಸಂಚಲನ ಫೇಲ್ ಮಾಡುವ ಉದ್ದೇಶದಿಂದ ಪೊಲೀಸರು ತುಂಬಾ ತೊಂದರೆ ನೀಡಿದ್ದರು. ಆದರೆ ಭೀಮ ನಡಿಗೆ ಪಥಸಂಚಲನಕ್ಕೆ ಯಾವುದೇ ಬ್ಯಾರಿಕೇಡ್ ಹಾಕಿಲ್ಲ, ಯಾರನ್ನು ತಪಾಸಣೆ ನಡೆಸಲಿಲ್ಲ ಮತ್ತು ಇಂತಿಷ್ಟೇ ಜನರು ಭಾಗವಹಿಸಬೇಕು ಅಂತ ಹೇಳಿಲ್ಲ ಮತ್ತು ಸಮಯ ಪರಿಪಾಲನೆ ಮಾಡಿಲ್ಲ ಹೀಗಾಗಿ ಇಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿ ಕಾನೂನು ತಮಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾರೆ ಎಂದು ದೂರಿದರು.
ಆರ್.ಎಸ್ಎಸ್ ಪಥ ಸಂಚಲನ ಸಮಯದಲ್ಲಿ ನಾವು ಪಥ ಸಂಚಲನ ಮಾಡುತ್ತೇವೆ ಎಂದು ಹೇಳಿದ ಸಂಘಟನೆಗಳೇ ಬೇರೆ, ಈಗ ಮಾಡಿದವರೇ ಬೇರೆನೇ ಎಂದು ಕುಟುಕಿದರು. ಶಾಂತಿಪ್ರಿಯ ಚಿತ್ತಾಪುರದಲ್ಲಿ ಇಷ್ಟೊಂದು ಗದ್ದಲ, ಅಶಾಂತಿ ವಾತಾವರಣ ನಿರ್ಮಾಣವಾಗುವುದಕ್ಕೆ ಕಾರಣ ಯಾರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ ಕಾನೂನು ಎಲ್ಲರಿಗೂ ಒಂದೇ ಇರುವಾಗ ಇಲ್ಲಿಯ ತಹಸೀಲ್ದಾರ್ ಸೇರಿದಂತೆ ತಾಲೂಕು ಆಡಳಿತ ಆರ್.ಎಸ್ಎಸ್ ಪಥ ಸಂಚಲನಕ್ಕೆ ಒಂದು ಕಾನೂನು, ಭೀಮ ನಡಿಗೆ ಪಥಸಂಚಲನಕ್ಕೆ ಇನ್ನೊಂದು ಕಾನೂನು ಮಾಡಿ ಕಾನೂನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ತಾಲೂಕಿನ ಕಂದಾಯ ವ್ಯಾಪ್ತಿಯಲ್ಲಿ ಇರುವವರಿಗೆ ಮಾತ್ರ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶ ಇದೆ ಎಂದು ಆದೇಶ ಹೊರಡಿಸಿದ್ದ ತಹಸೀಲ್ದಾರ್ ಬೆಳಿಗ್ಗೆ ಬೇರೆ ಜಿಲ್ಲೆಯವರಿಗೂ ಅವಕಾಶ ಇದೆ ಎಂದು ಮತ್ತೊಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದರು.
2015 ರಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ಜಾರಿಗೆ ತಂದಿದ್ದೇ ಪ್ರಧಾನಿ ಮೋದಿ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನಿಸಿದೆ ಆದರೆ ಬಿಜೆಪಿ ಗೌರವಿಸಿದೆ ಎಂದರು. ಸಂವಿಧಾನದ 108 ತಿದ್ದುಪಡಿಗಳಲ್ಲಿ ಕಾಂಗ್ರೆಸ್ 100 ತಿದ್ದುಪಡಿ ಮಾಡಿದೆ ಆದರೆ ಬಿಜೆಪಿ ಬರೀ 8 ತಿದ್ದುಪಡಿ ಮಾಡಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ ಹೀಗಾಗಿ ನಮ್ಮದು ಭೀಮ ನಡಿಗೆ ಪಥಸಂಚಲನಕ್ಕೆ ವಿರೋಧ ಇರಲಿಲ್ಲ, ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಪಥ ಸಂಚಲನ ಮಾಡಿರುವುದಕ್ಕೆ ನಾವು ಸ್ವಾಗತಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಭಂಕಲಗಿ, ಸುರೇಶ್ ಬೆನಕನಳ್ಳಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೂಗಾರ, ಶಿವರಾಮ್ ಚವ್ಹಾಣ, ರಾಜು ದೊರೆ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ