ಗುರು ಇಂಡೇನ್ ಗ್ಯಾಸ್ ಏಜೆನ್ಸಿ ಅವ್ಯವಸ್ಥೆ; ಗ್ರಾಹಕರ ಆಕ್ರೋಶ.

ಚಿತ್ತಾಪುರ: ಪಟ್ಟಣದ ಗುರು ಇಂಡೇನ್ ಗ್ಯಾಸ್ ಏಜೆನ್ಸಿಯ ಕಳಪೆ ಸೇವೆ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದ ವಿರುದ್ಧ ಗ್ರಾಹಕರು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾಸ್ ಬುಕ್ಕಿಂಗ್ ಮಾಡಿ 15 ದಿನ ಕಳೆದರೂ ಸಿಲಿಂಡರ್ ಪೂರೈಕೆಯಾಗದ ಹಿನ್ನೆಲೆಯಲ್ಲಿ, ಸಾರ್ವಜನಿಕರು ದಿನವಿಡೀ ಗೋಡೌನ್ ಮುಂದೆ ಕಾದು ಪರದಾಡುವಂತಾಯಿತು.

ಪಟ್ಟಣದ ಒಂಟಿ ಕಮಾನ್ ಹತ್ತಿರವಿರುವ ಗ್ಯಾಸ್ ಗೋಡೌನ್ ಮುಂದೆ ಬೆಳಿಗ್ಗೆಯಿಂದಲೇ ನೂರಾರು ಗ್ರಾಹಕರು ಖಾಲಿ ಸಿಲಿಂಡರ್‌ಗಳೊಂದಿಗೆ ಜಮಾಯಿಸಿದ್ದರು. 43 ಡಿಗ್ರಿ ಸುಡುವ ಬಿಸಿಲನ್ನೂ ಲೆಕ್ಕಿಸದೆ, ಹಣಿಕೆರಾ ತಾಂಡಾ ಹಾಗೂ ಭಂಕಲಗಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ರಾತ್ರಿಯಾದರೂ ಸಿಲಿಂಡರ್ ಸಿಗದೆ ಪರದಾಡಿದರು.

"ನಾನು ದೃಷ್ಟಿಹೀನನಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಕಾಯುತ್ತಿದ್ದೇನೆ. ಟೋಕನ್ ನೀಡಿ ಮಧ್ಯಾಹ್ನ ಬರುತ್ತದೆ ಎಂದು ಹೇಳಿದವರು ಈಗ ರಾತ್ರಿಯಾದರೂ ವಿತರಿಸಿಲ್ಲ. ಇಷ್ಟು ಹೊತ್ತಿನಲ್ಲಿ ಖಾಲಿ ಸಿಲಿಂಡರ್ ಹಿಡಿದು ಊರಿಗೆ ಹೇಗೆ ಹೋಗಲಿ?" ಎಂದು ಭಂಕಲಗಿಯ ನಿವಾಸಿ ಶಾಂತಕುಮಾರ್ ರೆಡ್ಡಿ ಕಣ್ಣೀರು ಹಾಕಿದರು.

ಏಜೆನ್ಸಿಯ ಸಿಬ್ಬಂದಿಗಳು ಫೋನ್ ಕರೆ ಸ್ವೀಕರಿಸುತ್ತಿಲ್ಲ, ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಗ್ರಾಹಕರು ಕರೆ ಮಾಡಿದರೆ ಏಜೆನ್ಸಿಯ ಫೋನ್‌ಗಳು ಸ್ವಿಚ್ ಆಫ್ ಇರುತ್ತವೆ, ಮನೆಗೆ ತಲುಪಿಸುವ ಬದಲಿಗೆ "ನಾವೇ ನಿಮ್ಮ ಮನೆಗೆ ಬರಬೇಕೇ?" ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ, ಸಮಸ್ಯೆ ಬಗೆಹರಿಯದಿದ್ದರೆ ಏಜೆನ್ಸಿ ಮುಂದೆ ಕಟ್ಟಿಗೆ ತಂದು ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಸಿದ್ದಾರೆ.

ಹಿಂದೆ ಯುದ್ಧದಂತಹ ಕಠಿಣ ಕಾಲದಲ್ಲೂ ಮನೆಬಾಗಿಲಿಗೆ ಸಿಲಿಂಡರ್ ತಲುಪಿಸುತ್ತಿದ್ದ ಏಜೆನ್ಸಿ, ಈಗ ಸಾಮಾನ್ಯ ದಿನಗಳಲ್ಲೇ ವಿತರಣೆಯಲ್ಲಿ ವಿಫಲವಾಗಿದೆ ಎಂದು ಧಾರನಾಯಕ ಪಿ. ರಾಥೋಡ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಕೂಡಲೇ ಕ್ಷೇತ್ರದ ಶಾಸಕರಾದ ಗುರು ಇಂಡೇನ್ ಗ್ಯಾಸ್ ಏಜೆನ್ಸಿ ಅವ್ಯವಸ್ಥೆ; ಗ್ರಾಹಕರ ಆಕ್ರೋಶ. ಅವರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಗುರು ಇಂಡೇನ್ ಗ್ಯಾಸ್ ಏಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮನೆಮನೆಗೆ ಸರಿಯಾದ ವಿತರಣೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم