ನಿಷ್ಠೆ, ಪ್ರಾಮಾಣಿಕತೆಯ ಸೇವೆಯಿಂದ ಮಾತ್ರ ಸರ್ಕಾರಿ ಶಾಲೆಗಳ ಏಳಿಗೆ ಸಾಧ್ಯ: ಬಿಇಒ ಶಶಿಧರ್ ಬಿರಾದರ

ಚಿತ್ತಾಪುರ: ಶಿಕ್ಷಕರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಿದರೆ ಮಾತ್ರ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಏಳಿಗೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಶಶಿಧರ್ ಬಿರಾದರ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಕೆಳಗೇರಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಹಾವನೂರು ಅವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಜಿಲ್ಲೆ ಹಾಗೂ ತಾಲೂಕಿನ ಈ ವರ್ಷದ ಅತ್ಯುತ್ತಮ ಫಲಿತಾಂಶಕ್ಕಾಗಿ ಶ್ರಮಿಸಿರುವ ಶಿಕ್ಷಕರ ಕಾರ್ಯ ವೈಖರಿಯನ್ನು ಇದೇ ವೇಳೆ ಬಿಇಒ ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, "ಬದ್ಧತೆ, ಸಮಯ ಪಾಲನೆ, ಕ್ರಿಯಾಶೀಲತೆ ಹಾಗೂ ಅಪಾರ ಜ್ಞಾನ ಶಿಕ್ಷಕರಲ್ಲಿರಬೇಕಾದ ಮುಖ್ಯ ಗುಣಗಳು. ಶಾಲೆ ಜ್ಞಾನದ ದೇಗುಲವಿದ್ದಂತೆ. ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾದಾಗ ಶಿಕ್ಷಕರ ಹಾಗೂ ಶಾಲೆಯ ಗೌರವ-ಘನತೆ ತಾನಾಗಿಯೇ ಹೆಚ್ಚುತ್ತದೆ" ಎಂದರು.

ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ದೇವಿಂದ್ರಪ್ಪ ಹಾವನೂರು ಅವರು ತಮ್ಮ ಸುದೀರ್ಘ ವೃತ್ತಿ ಜೀವನದ ಸವಿಗನಸು ಹಾಗೂ ಅನಿಸಿಕೆಗಳನ್ನು ಸಭೆಯ ಮುಂದೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಉಪಾಧ್ಯಕ್ಷೆ ಸ್ವರ್ಣಲತಾ ರೆಡ್ಡಿ ದುಗನೂರ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಐಕೂರ, ಸಹ ಕಾರ್ಯದರ್ಶಿ ನಿರ್ಮಲಾದೇವಿ, ಖಜಾಂಚಿ ಮಹಾಂತೇಶ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ, ಕಾಳಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ್, ಕೋಶದಕ್ಷ ಮಹಾಂತೇಶ್ ಪ್ರಸನ್ನ, ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕ್ಷೇತ್ರ ಸಮನ್ವಯಾಧಿಕಾರಿ ಆದಪ್ಪ ಸಜ್ಜನ್, ಮುಖಂಡರಾದ ಅಂಬಣ್ಣ ಘಂಟಿ, ಸಾಬಣ್ಣ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಆದಪ್ಪ ಬಗಲಿ ಕಾರ್ಯಕ್ರಮ ನಿರೂಪಿಸಿದರು, ಸುನೀಲ್ ಧರಣಿ ವಂದನಾರ್ಪಣೆ ಮಾಡಿದರು. ಶಿಕ್ಷಕಿ ಶಿವಲೀಲಾ ಕಲಗುರ್ಕಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم