ಆರ್‌ಎಸ್ಎಸ್ ಜಪ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಅಧ್ಯಕ್ಷ ಟಾಂಗ್.

​ಚಿತ್ತಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಪ್ಪತ್ನಾಲ್ಕು ತಾಸು ಆರ್‌.ಎಸ್.ಎಸ್ ವಿರುದ್ಧ ಜಪ ಮಾಡುವುದನ್ನು ಬಿಟ್ಟು, ಸ್ವಕ್ಷೇತ್ರ ಚಿತ್ತಾಪುರದ ಅಭಿವೃದ್ಧಿಯ ಕಡೆ ಗಮನ ಹರಿಸಲಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿರುಗೇಟು ನೀಡಿದ್ದಾರೆ.

​ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಲವು ಪ್ರಮುಖ ಕಾಮಗಾರಿಗಳು ಅನುದಾನವಿಲ್ಲದೆ ಸ್ಥಗಿತಗೊಂಡಿವೆ. ಇನ್ನು ಕೆಲವು ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು, ಸರ್ಕಾರದ ಹಣ ದುರುಪಯೋಗವಾಗುತ್ತಿದ್ದರೂ ಸಚಿವರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.

​​ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ 30 ಕೋಟಿ ರೂ. ಅನುದಾನ ಅನುಮೋದನೆಗೊಂಡಿದ್ದರೂ ಕಾಮಗಾರಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಹೋಗುವ ಬದಲು ನೇರವಾಗಿ ಕಾಗಿಣಾ ನದಿಗೆ ಸೇರುತ್ತಿದೆ. ಇದರಿಂದಾಗಿ ಇಡೀ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ​2025-26ನೇ ಸಾಲಿನ ಅಮೃತ ಯೋಜನೆಯಡಿ 24x7 ಕುಡಿಯುವ ನೀರು ಪೂರೈಕೆಗಾಗಿ 47 ಕೋಟಿ ರೂ. ಮಂಜೂರಾಗಿತ್ತು. ಆದರೆ ಬಿಹಾರ ಮೂಲದ ಏಜೆನ್ಸಿಯೊಂದು ಎಲ್ಲಾ ವಾರ್ಡ್‌ಗಳಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು, ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟು ಹೋಗಿದೆ. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರೂ ಇಲ್ಲದೆ, ಇತ್ತ ರಸ್ತೆಗಳೂ ಹಾಳಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಕೆಕೆಆರ್‌ಡಿಬಿಯ 45 ಲಕ್ಷ ರೂ. ಅನುದಾನದಲ್ಲಿ ಶಿವರಾವ್ ಪಾಟೀಲ ಮನೆಯಿಂದ ಜನತಾ ವೃತ್ತದವರೆಗಿನ ರಸ್ತೆ ಕಾಮಗಾರಿ 3 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪರಿಶಿಷ್ಟ ಜಾತಿಯ ಜನಸಂಖ್ಯೆ ಇಲ್ಲದ ಏರಿಯಾದಲ್ಲಿ ನಿಯಮ ಉಲ್ಲಂಘಿಸಿ ಈ ಕಾಮಗಾರಿ ಕೈಗೊಳ್ಳುವ ಮೂಲಕ ಹಣ ದುರುಪಯೋಗ ಮಾಡಲಾಗಿದೆ.

​ನಗರೋತ್ಥಾನ 4ನೇ ಹಂತದ 5 ಕೋಟಿ ರೂ. ವೆಚ್ಚದ ಚಿತ್ತಾವಲಿ ವೃತ್ತದಿಂದ ಹೊಸ ಕೋರ್ಟ್‌ವರೆಗಿನ ರಸ್ತೆ, ಬಸವ ನಗರದ ಬ್ರಿಜ್ ಕಾಮಗಾರಿ ಹಾಗೂ ಸ್ಟೇಷನ್ ತಾಂಡಾದ ಬಿಟಿ ರಸ್ತೆ ಕಾಮಗಾರಿಗಳು ಇನ್ನೂ ನೆನೆಗುದಿಯಲ್ಲಿವೆ. ​"ಸರ್ಕಾರದ ಬಳಿ ಹಣವಿಲ್ಲದ ಕಾರಣಕ್ಕೆ ಕ್ಷೇತ್ರಕ್ಕೆ ಮಂಜೂರಾಗಿರುವ ಹಣಕಾಸು ಯೋಜನೆಗಳು ಮೂಲೆ ಸೇರಿವೆ," ಎಂದು ಆರೋಪಿಸಿದ ಸಜ್ಜನ್‌ಶೆಟ್ಟಿ ಅವರು ಅಂಕಿ-ಅಂಶಗಳನ್ನು ಬಿಚ್ಚಿಟ್ಟರು.  2.32 ಕೋಟಿ ರೂ. ಕ್ರಿಯಾಯೋಜನೆಯಲ್ಲಿ ಕೇವಲ ಶೇ. 70ರಷ್ಟು ಕಾಮಗಾರಿ ಮುಗಿದಿದ್ದು, ಉಳಿದ ಶೇ. 30ರಷ್ಟು ಕೆಲಸ ಹಣವಿಲ್ಲದೆ ನಿಂತಿದೆ. ಗುತ್ತಿಗೆದಾರನಿಗೂ ಕೇವಲ ಶೇ. 50ರಷ್ಟು ಮಾತ್ರ ಬಿಲ್ ಪಾವತಿಯಾಗಿದೆ. 2.37 ಕೋಟಿ ರೂ. ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದ್ದರೂ, ಇದುವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. 4 ಕೋಟಿಗೂ ಅಧಿಕ ಅನುದಾನ ಹಂಚಿಕೆಯಾಗಿದ್ದರೂ, ಸರ್ಕಾರ ಇದುವರೆಗೆ ಯಾವುದೇ ಕ್ರಿಯಾಯೋಜನೆ ರೂಪಿಸಿಲ್ಲ. ​ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನದಿಂದಾಗಿ ಇಡೀ ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅವರು ದೂರಿದರು.

​ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಭಂಕಲಗಿ, ರಮೇಶ್‌ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶಾಮಣ್ಣ ಮೇಧಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್ ಹಾಗೂ ನಗರ ಯುವ ಅಧ್ಯಕ್ಷ ಸಂಗಮೇಶ ಪಾಟೀಲ ಸೇರಿದಂತೆ ಪ್ರಮುಖರು ಇದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು