ಶಿಕ್ಷಕ ಸಿದ್ದಲಿಂಗ ಬಾಳಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’ ಘೋಷಣೆ

ಚಿತ್ತಾಪುರ: ವಿಭಿನ್ನ ಪ್ರಯೋಗಗಳ ಮೂಲಕ ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುವುದರ ಜೊತೆಗೆ, ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕಾರಣರಾಗಿರುವ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಕ್ರಿಯಾಶೀಲ ಸಮಾಜವಿಜ್ಞಾನ ಶಿಕ್ಷಕ ಸಿದ್ದಲಿಂಗ ಬಾಳಿ ಅವರಿಗೆ ಈ ವರ್ಷದ ಪ್ರತಿಷ್ಠಿತ "ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ" ಘೋಷಣೆಯಾಗಿದೆ.

ಧಾರವಾಡದ ಚೇತನ ಪ್ರತಿಷ್ಠಾನ ಹಾಗೂ ಆರ್ಯಭಟ ಎಜುಕೇಷನ್ ಟ್ರಸ್ಟ್ ವತಿಯಿಂದ ಜೂನ್ 21 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಅದ್ಧೂರಿ ಸಮ್ಮೇಳನದಲ್ಲಿ ಶಿಕ್ಷಕ ಸಿದ್ದಲಿಂಗ ಬಾಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚೇತನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಚಂದ್ರಶೇಖರ ಮಾಡಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಗೆ ಬರುವ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದಲಿಂಗ ಬಾಳಿ ಅವರು, ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ನಿರಂತರ ನೂತನ ಪ್ರಯೋಗಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಇವರ ವಿಭಿನ್ನ ಬೋಧನಾ ಶೈಲಿ ಹಾಗೂ ಶಾಲಾ ಪ್ರಗತಿಯ ಶ್ರಮದಿಂದಾಗಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಿದೆ. ಇವರ ಈ ಸುದೀರ್ಘ ಹಾಗೂ ಕ್ರಿಯಾಶೀಲ ಸೇವೆಯನ್ನು ಗುರುತಿಸಿ ಈ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿಕ್ಷಕ ಸಿದ್ದಲಿಂಗ ಬಾಳಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದಕ್ಕೆ ಶಾಲೆಯ ಆಡಳಿತ ಮಂಡಳಿ, ಸಹೋದ್ಯೋಗಿ ಶಿಕ್ಷಕ ವೃಂದ, ರಾವೂರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ಬಳಗ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು