ಚಿತ್ತಾಪುರ: ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರ (ರೇಷನ್) ಅಕ್ಕಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಹಳೆಯ ಮನೆಯೊಂದರ ಮೇಲೆ ಆಹಾರ ನಿರೀಕ್ಷಕರು ಮತ್ತು ಪೊಲೀಸರು ಜಂಟಿ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಿದ ಘಟನೆ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.
ದಿನಾಂಕ 12/06/2026 ರಂದು ಮಧ್ಯಾಹ್ನ ಚಿತ್ತಾಪುರ ಪಟ್ಟಣದ ಕಂಬಳೇಶ್ವರ ಮಠದ ಹತ್ತಿರವಿರುವ ಹಳೆಯ ಮನೆಯೊಂದರಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಆಹಾರ ನಿರೀಕ್ಷಕರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆಹಾರ ಇಲಾಖೆ ಅಧಿಕಾರಿಗಳು, ಚಿತ್ತಾಪುರ ಪೊಲೀಸ್ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಜಂಟಿ ದಾಳಿ ನಡೆಸಿದರು.
ದಾಳಿಯ ವೇಳೆ ಮನೆಯಲ್ಲಿದ್ದ ಒಟ್ಟು 32 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹1,12,000/- ಎಂದು ಅಂದಾಜಿಸಲಾಗಿದೆ. ಸ್ಥಳದಲ್ಲಿದ್ದ ಆರೋಪಿಗಳಾದ ಆನಂದ ಶರಣಪ್ಪ ಕರದಾಳ (30 ವರ್ಷ) ಮತ್ತು ತನ್ವೀರ್ ಗುಲಾಮ ರಸೂಲ ಅಡಕಿ (40 ವರ್ಷ) ಎಂಬುವವರನ್ನು ವಿಚಾರಣೆ ನಡೆಸಿದಾಗ, ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಲು ತನ್ವೀರ್ ಹಣ ನೀಡುತ್ತಿದ್ದನೆಂದು ಮತ್ತು ಈ ಅಕ್ಕಿಯನ್ನು ಸ್ಟೇಷನ್ ತಾಂಡಾದ ಅಶ್ವಥ್ ತುಕಾರಾಮ ರಾಠೋಡ ಎಂಬಾತನಿಗೆ ಮಾರಾಟ ಮಾಡಲು ಜಮಾ ಮಾಡಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪ್ರಸ್ತುತ ಅಕ್ರಮ ಅಕ್ಕಿ ದಾಸ್ತಾನು ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 86/2026, 3,7. ಇಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.