ಡಿಜಿಟಲ್ ಲಂಚಾವತಾರ: ಯುಪಿಐ ಮೂಲಕ ₹15 ಸಾವಿರ ಲಂಚ ಪಡೆದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ!

ಚಿತ್ತಾಪುರ: ತಂತ್ರಜ್ಞಾನ ಬೆಳೆದಂತೆ ಲಂಚ ಪಡೆಯುವ ದಾರಿಯನ್ನೂ ಡಿಜಿಟಲೈಸ್ ಮಾಡಿಕೊಂಡಿದ್ದ ಭ್ರಷ್ಟ ಅಧಿಕಾರಿಯೊಬ್ಬರು ಈಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ. ಯುಪಿಐ (UPI) ಮೂಲಕ ಲಂಚದ ಹಣ ಪಡೆದ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮ ಪಂಚಾಯಿತಿಯ ಕರ ವಸೂಲಿಗಾರ (ಬಿಲ್ ಕಲೆಕ್ಟರ್) ಸಂತೋಷ ರಾಠೋಡ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದಿರುವ ಆರೋಪಿ.

ಕರದಾಳ ಪಂಚಾಯಿತಿ ವ್ಯಾಪ್ತಿಯ ಹನ್ನಿಕೇರಿ ಗ್ರಾಮದ ರಾಮನಾಯಕ ತಾಂಡಾ ನಿವಾಸಿಯಾದ ಸವಿತಾ ಎಂಬುವವರಿಗೆ ಸರ್ಕಾರದ ‘ಡಾ. ಬಿ.ಆರ್. ಅಂಬೇಡ್ಕ‌ರ್ ನಿವಾಸ ಯೋಜನೆ’ಯಡಿ ಮನೆ ಮಂಜೂರಾಗಿತ್ತು. ಈ ಮನೆ ನಿರ್ಮಾಣದ 3ನೇ ಹಾಗೂ 4ನೇ ಕಂತಿನ ಬಿಲ್ ಹಣವನ್ನು ಬಿಡುಗಡೆ ಮಾಡಲು ಬಿಲ್ ಕಲೆಕ್ಟರ್ ಸಂತೋಷ ರಾಠೋಡ ₹22,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಬಡವರ ಹಕ್ಕಿನ ಹಣಕ್ಕೆ ಲಂಚ ಕೇಳಿದ ಅಧಿಕಾರಿಯ ನಡೆಗೆ ಬೇಸತ್ತ ಸಿಖಂದರ್‌ ಎಂಬುವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯ ಪ್ರಕಾರ, ಬೇಡಿಕೆ ಇಟ್ಟಿದ್ದ ಲಂಚದ ಮೊತ್ತದಲ್ಲಿ ಮೊದಲ ಕಂತಾಗಿ ₹15,000 ಹಣವನ್ನು ಸಂತೋಷ್ ರಾಠೋಡ ಯುಪಿಐ (ಡಿಜಿಟಲ್ ಪೇಮೆಂಟ್) ಮೂಲಕ ಪಡೆದುಕೊಳ್ಳುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆತನನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ಸದ್ಯ ಲೋಕಾಯುಕ್ತ ಪೊಲೀಸರು ಆರೋಪಿ ಸಂತೋಷ ರಾಠೋಡನನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸರ್ಕಾರಿ ಕೆಲಸಗಳಿಗಾಗಿ ಡಿಜಿಟಲ್ ರೂಪದಲ್ಲಿ ಲಂಚ ಪಡೆದು ಸಿಕ್ಕಿಬಿದ್ದಿರುವ ಈ ಘಟನೆ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು