ಚಿತ್ತಾಪುರ: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಡಿದ ಅವಮಾನವನ್ನು ಖಂಡಿಸಿ, ಆಗಸ್ಟ್ 18 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶತಮಾನದ ಇತಿಹಾಸ ಹೊಂದಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ದಲಿತರು ಎನ್ನುವ ಕಾರಣಕ್ಕೆ, ಅವರು ರಾಮಲೀಲಾ ಮೈದಾನದಲ್ಲಿ ಭಾಗವಹಿಸಿದ ಸ್ಥಳವನ್ನು ಆರ್‌ಎಸ್‌ಎಸ್, ವಿಎಚ್‌ಪಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿಕೊಂಡು ಗಂಗಾಜಲದ ಮೂಲಕ 'ಶುದ್ಧೀಕರಣ' ಮಾಡಿರುವುದು ಸ್ವತಂತ್ರ ಭಾರತದ ನಾಗರಿಕ ಸಮಾಜದಲ್ಲಿ ಮಾಡಿದ ದೊಡ್ಡ ಅವಮಾನವಾಗಿದೆ. ಇದನ್ನು ಬಲವಾಗಿ ಖಂಡಿಸಲಾಗುವುದು" ಎಂದರು.
"ನಮಗೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ಇನ್ನು ಕೆಲ ಪಟ್ಟಭದ್ರ ಹಿತಾಸಕ್ತಿಯವರು ಮನುಸ್ಮೃತಿ ಸಂಸ್ಕೃತಿಯಿಂದ ಹೊರಬರದಿರುವುದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಘಟನೆ ನಡೆದು ಇಷ್ಟು ದಿನಗಳು ಕಳೆದರೂ ಇಂತಹ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಮ್ಮನಿರುವುದು ನೋಡಿದರೆ ಇದೆಲ್ಲದಕ್ಕೂ ಅವರ ಕುಮ್ಮಕ್ಕೇ ಕಾರಣವಾಗಿರಬಹುದು" ಎಂದು ಶಂಕೆ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಖ್ತಾರ್ ಪಟೇಲ್ ಮಾತನಾಡಿ, "ದೇಶದ ಹಿರಿಯ ಹಾಗೂ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಮಲೀಲಾ ಮೈದಾನದಲ್ಲಿ ಮಾಡಿರುವ ಅವಮಾನವು ದೇಶದ ಜನತೆ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಇದನ್ನು ಖಂಡಿಸಿ ಸಮಾನ ಮನಸ್ಕರು ಕೂಡಿಕೊಂಡು ರಸ್ತೆ ತಡೆ ಪ್ರತಿಭಟನೆಯನ್ನು ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು" ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಯುವ ಅಧ್ಯಕ್ಷ ದೇವೇಂದ್ರ ಯಾಬಾಳ, ಪ್ರಮುಖರಾದ ನಾಗರೆಡ್ಡಿ ಗೋಪಸೇನ್, ರಸೂಲ್ ಮುಸ್ತಫಾ, ಈರಪ್ಪ ಭೋವಿ, ಸಂಜಯ ಬುಳಕರ್, ಮಲ್ಲಿಕಾರ್ಜುನ ಮುಡಬೂಳಕರ್, ದೇವೇಂದ್ರ ಕುಮಸಿ, ನಾಗಯ್ಯ ಗುತ್ತೇದಾರ, ಭೀಮಸಿಂಗ ಚವ್ಹಾಣ, ನಜೀರ್ ಆಡಕಿ, ಸೈಯದ್ ಸೇರ್, ಭಗವಂತ ಕಟಕೆ, ಸುಭಾಷ್ ಕಲ್ಮರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.