ಚಿತ್ತಾಪುರ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ "ಸಿ.ಎಂ ಕಪ್ 2026" ಅನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಹಾಕಿ ಜಾದೂಗಾರ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಜ್ಯೋತಿ ಹಿಡಿದು ಬಂದ ವಿದ್ಯಾರ್ಥಿಗಳು ಅದನ್ನು ವೇದಿಕೆಯಲ್ಲಿದ್ದ ಗಣ್ಯರಿಗೆ ಗೌರವಪೂರ್ವಕವಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರ ರೆಡ್ಡಿ, "ಕ್ರೀಡೆಗಳು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಉತ್ತಮ ವೇದಿಕೆಯಾಗಿವೆ. ಕ್ರೀಡಾಪಟುಗಳು ಸತತ ಪರಿಶ್ರಮದಿಂದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ತರಬೇಕು" ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ನಂತರ ಮಾತನಾಡಿದ ಶಿಕ್ಷಣ ಸಂಯೋಜಕ ಶಿವಶರಣಪ್ಪ ಮಂಠಾಳೆ, "ಪ್ರತಿಯೊಬ್ಬರೂ ಜೀವನದಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಕ್ಷೇತ್ರದಲ್ಲೂ ಉತ್ತಮ ಭವಿಷ್ಯ ಕಂಡುಕೊಳ್ಳಲು ದಸರಾ ಕ್ರೀಡಾಕೂಟದಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು" ಎಂದು ಕರೆ ನೀಡಿದರು. ಇದೇ ವೇಳೆ ಕ್ರೀಡಾಂಗಣದ ವ್ಯವಸ್ಥಾಪಕರಾದ ಮರೆಯಪ್ಪ ಅವರು ಕ್ರೀಡಾಕೂಟದ ಯಶಸ್ಸಿಗಾಗಿ ಹಾಗೂ ಕ್ರೀಡಾಂಗಣದ ನಿರ್ವಹಣೆಗೆ ಪಡುತ್ತಿರುವ ನಿರಂತರ ಶ್ರಮವನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ನಿಂಗಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಣಿಸಿಂಗ ಚವ್ಹಾಣ್, ತಾಲೂಕು ಕ್ರೀಡಾಂಗಣ ಮೇಲ್ವಿಚಾರಕ ಮರೆಯಪ್ಪ ಬೊಮ್ಮನಹಳ್ಳಿಕರ್, ಶಿಕ್ಷಕರಾದ ವೆಂಕಟಪ್ಪ, ಮಸ್ತಾನ್ ಪಟೇಲ್, ವೀರಭದ್ರಪ್ಪ ಗುರುಮಿಟ್ಕಲ್, ಶಿವಕುಮಾರ್ ಉಡುಗಿ, ರಾಣಪ್ಪ ಸಂಗನ, ವೀರಭದ್ರಪ್ಪ ಪಾಟೀಲ್, ಸತ್ತಯ್ಯ ಗುತ್ತೇದಾರ್, ಪೊಲೀಸ್ ಸಿಬ್ಬಂದಿ ಮಶಾಖ್ ಸೇರಿದಂತೆ ತಾಲೂಕಿನ ಹಲವು ದೈಹಿಕ ಶಿಕ್ಷಕರು ಭಾಗವಹಿಸಿದ್ದರು.