ಚಿತ್ತಾಪೂರ: ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕೈಗೆತ್ತಿಕೊಂಡ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಅತ್ಯಂತ ಕಳಪೆಯಿಂದ ಕೂಡಿದ್ದು, ಸಾರ್ವಜನಿಕರ ಹಣ ನೀರು ಪಾಲಾಗುತ್ತಿದೆ ಎಂದು ಮೋಗಲಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿಪಿ/ಟಿಎಸ್‌ಪಿ) ಯೋಜನೆಯಡಿ ಒಟ್ಟು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಮೋಗಲಾ ಗ್ರಾಮದ ಎಸ್‌ಸಿಪಿ ಓಣಿಯಲ್ಲಿ ಸಮಗ್ರ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಪ್ರಸ್ತುತ ಕೆಲವೆಡೆ ಅರ್ಧಕ್ಕೆ ರಸ್ತೆ ಬಿಟ್ಟು ಕಾಮಗಾರಿ ನಿಲ್ಲಿಸಲಾಗಿದೆ. ಹಲವೆಡೆ ಚರಂಡಿಯನ್ನೇ ನಿರ್ಮಿಸಿಲ್ಲ. ಈ ಕುರಿತು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ, "ಅವರು ಬೇಡ ಅಂತಾರೆ, ಇವರು ಬೇಡ ಅಂತಾರೆ" ಎಂದು ಹೊಣೆಗೇಡಿತನದ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ನಿರ್ಮಿಸಲಾಗಿರುವ ರಸ್ತೆಯೂ ಕೂಡ ಕನಿಷ್ಠ ಗುಣಮಟ್ಟವಿಲ್ಲದೆ ಈಗಾಗಲೇ ಬಿರುಕು ಬಿಟ್ಟಿದೆ.
ಅಷ್ಟೇ ಅಲ್ಲದೆ, ಜಿಲ್ಲಾ ಪಂಚಾಯತ್ ಹಾಗೂ ಪಿಆರ್‌ಇಡಿ (PRED) ಯೋಜನೆಯಡಿ 1 ಕೋಟಿ 15 ಲಕ್ಷ ರೂಪಾಯಿಗಳ ಬೃಹತ್ ಮೊತ್ತದಲ್ಲಿ ಗ್ರಾಮದ ಸಾಮಾನ್ಯ ಓಣಿಯಲ್ಲಿ ಕೈಗೊಂಡ ಸಮಗ್ರ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರಸ್ತೆ ನಿರ್ಮಾಣವಾಗಿ ತಿಂಗಳು ಕಳೆಯುವ ಮುನ್ನವೇ ರಸ್ತೆಗಳು ಅಲ್ಲಲ್ಲಿ ಬಿರುಕು ಬಿಡುತ್ತಿದ್ದು, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಶಾಮೀಲಾತಿಗೆ ಸಾಕ್ಷಿಯಾಗಿದೆ. ಹಲವು ಭಾಗಗಳಲ್ಲಿ ಚರಂಡಿ ನಿರ್ಮಾಣವನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಡಲಾಗಿದೆ.
"ಗ್ರಾಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳು ಕನಿಷ್ಠ ಗುಣಮಟ್ಟವನ್ನೂ ಕಾಯ್ದುಕೊಂಡಿಲ್ಲ. ಅನುದಾನವನ್ನು ತಮಗಿಷ್ಟ ಬಂದಂತೆ ಬಳಸಿ ಸಾರ್ವಜನಿಕರಿಗೆ ಮೋಸ ಮಾಡಲಾಗಿದೆ" ಎಂದು ಗ್ರಾಮಸ್ಥರಾದ ಶರಣಬಸಪ್ಪ ಎಸ್. ಕೊಡಂಗಲಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಹಲವು ಭಾಗಗಳಲ್ಲಿ ಚರಂಡಿ ನಿರ್ಮಾಣವನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟಿರುವುದರಿಂದ, ಚರಂಡಿಯ ಗಲೀಜು ನೀರು ನೇರವಾಗಿ ಹೊಸದಾಗಿ ನಿರ್ಮಿಸಲಾದ ಸಿಸಿ ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದಾಗಿ ರಸ್ತೆಯು ಪಾಚಿ ಹಿಡಿದು ಅತ್ಯಂತ ನಯವಾಗಿದ್ದು, ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ವಯಸ್ಸಾದವರು ಹಾಗೂ ಚಿಕ್ಕ ಮಕ್ಕಳು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಳ್ಳುವ ಆತಂಕ ಎದುರಾಗಿದೆ.
ಈ ಕುರಿತು ಈಗಾಗಲೇ ಸಂಬಂಧಪಟ್ಟ ಹಿರಿಯ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಈ ಕಾಮಗಾರಿಗೆ ಸಂಬಂಧಿಸಿದ ಹಣದ ಬಿಲ್ ತಡೆಹಿಡಿದು, ಇಡೀ ಕಾಮಗಾರಿಯ ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ದೇವಪ್ಪ ದೂಡ್ಡಮನಿ, ಎಸ್ಡಿಎಂಸಿ ಅಧ್ಯಕ್ಷ ಕಲ್ಯಾಣಿ ಮಳಖೇಡಕರ್, ಮಾಜಿ ಗ್ರಾಪಂ ಸದಸ್ಯ ಬನ್ನೇಶ ಸುಲೆಗಾಂವ್, ಮಲ್ಲೇಶಿ ಕೆಂಪನೂರ, ಸಂಜು ದೂಡ್ಡಮನಿ, ರವಿ ವಗ್ಗೂರ, ಶಂಭುಲಿಂಗ ಜಂಬಿಗಿ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.