ಪಕ್ಷಕ್ಕಾಗಿ ದುಡಿದ ಬಸವರಾಜ ಪೂಜಾರಿಯವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ: ಭಾಗಪ್ಪ ದೊರೆ ಒತ್ತಾಯ.

ಚಿತ್ತಾಪುರ: ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿರುವ ಮೊಗಲಾ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ಬೀರಣ್ಣ ಪೂಜಾರಿ ಅವರಿಗೆ ರಾಜ್ಯದ ಯಾವುದಾದರೂ ಒಂದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರ ಸುದೀರ್ಘ ಸೇವೆಗೆ ಸೂಕ್ತ ಗೌರವ ನೀಡಬೇಕೆಂದು ಮೊಗಲಾ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಭಾಗಪ್ಪ ದೊರೆ ಅವರು ರಾಜ್ಯ ಸರ್ಕಾರಕ್ಕೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಪ್ರಬಲವಾಗಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಯುವ ಮುಖಂಡ ಭಾಗಪ್ಪ ದೊರೆ, "ಬಸವರಾಜ ಪೂಜಾರಿಯವರು ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹಾಗೂ ನಾಯಕರಾಗಿ ಸೇವೆಯಲ್ಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸೇರಿದಂತೆ ಪ್ರತಿಯೊಂದು ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಿದ ಶ್ರಮಿಕ ನಾಯಕ ಅವರು," ಎಂದು ಹೇಳಿದರು.

"ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡುಬಡವರಿಗೆ, ಶೋಷಿತರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುವಲ್ಲಿ ಬಸವರಾಜ ಪೂಜಾರಿ ಅವರು ಸದಾ ಮುಂಚೂಣಿಯಲ್ಲಿರುತ್ತಾರೆ. ದಶಕಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದರೂ ಪಕ್ಷದಿಂದ ಅವರಿಗೆ ಇದುವರೆಗೆ ಯಾವುದೇ ಅಧಿಕೃತ ಸ್ಥಾನಮಾನ ಅಥವಾ ಸೂಕ್ತ ಗೌರವ ಸಿಕ್ಕಿಲ್ಲ. ಪಕ್ಷಕ್ಕಾಗಿ ಇಷ್ಟೊಂದು ತ್ಯಾಗ ಮತ್ತು ಶ್ರಮ ವಹಿಸಿದ ನಾಯಕರಿಗೆ ಈಗ ಕಾಲ ಬಂದಿದೆ," ಎಂದು ಅವರು ಅಭಿಪ್ರಾಯಪಟ್ಟರು.

ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಹಾಗೂ ಒತ್ತಾಯ:
"ಚಿತ್ತಾಪುರ ಕ್ಷೇತ್ರದ ರೂವಾರಿ, ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರನ್ನು ಎಂದಿಗೂ ಕೈಬಿಟ್ಟಿಲ್ಲ. ಬಸವರಾಜ ಪೂಜಾರಿ ಅವರ ನಿಷ್ಠೆ, ಸುದೀರ್ಘ ಸೇವೆ ಮತ್ತು ಪಕ್ಷ ಸಂಘಟನೆಯನ್ನು ಪರಿಗಣಿಸಿ, ಮುಂಬರುವ ದಿನಗಳಲ್ಲಿ ಭರ್ತಿಯಾಗಲಿರುವ ರಾಜ್ಯದ ಯಾವುದಾದರೂ ಒಂದು ಪ್ರಮುಖ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಿ ಗೌರವಿಸಬೇಕು. ಇದು ಮೊಗಲಾ ಗ್ರಾಮ ಹಾಗೂ ಇಡೀ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆಯಾಗಿದೆ," ಎಂದು ಯುವ ಮುಖಂಡ ಭಾಗಪ್ಪ ದೊರೆ ಒತ್ತಾಯಿಸಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು