ಮೊಗಲಾ ಗ್ರಾಮ: ಬಾಗಿಲು ತೆರೆಯದ ಮಹಿಳಾ ಶೌಚಾಲಯ.

ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದಲ್ಲಿ ಎಂಡಿಎಫ್  ಯೋಜನೆಯಡಿ ಬರೋಬ್ಬರಿ ₹25 ಲಕ್ಷ ರೂಪಾಯಿ ಬೃಹತ್ ಅನುದಾನದಲ್ಲಿ ನಿರ್ಮಿಸಲಾದ ಮಹಿಳಾ ಶೌಚಾಲಯವು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ. ಶೌಚಾಲಯ ನಿರ್ಮಾಣಗೊಂಡು ವರ್ಷವೇ ಕಳೆಯುತ್ತಿದ್ದರೂ, ಇದುವರೆಗೂ ಉದ್ಘಾಟನೆಯ ಭಾಗ್ಯ ಕಾಣದೇ ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಗ್ರಾಮದ ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಈ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಕಾಮಗಾರಿ ಮುಗಿದು ತಿಂಗಳುಗಳು ಉರುಳಿದರೂ ಶೌಚಾಲಯದ ಬಾಗಿಲು ಸಾರ್ವಜನಿಕರಿಗೆ ತೆರೆದಿಲ್ಲ. ಇದರಿಂದಾಗಿ ಗ್ರಾಮದ ಮಹಿಳೆಯರು ನಿತ್ಯ ಶೌಚಕ್ಕಾಗಿ ಪರದಾಡುವಂತಾಗಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ಯೋಜನೆಯಿದ್ದರೂ, ಗ್ರಾಮಸ್ಥರಿಗೆ ಕೊನೆಗೂ ಬಹಿರಂಗ ಶೌಚಾಲಯವೇ ವರದಾನವಾಗುವಂತಾಗಿರುವುದು ದುರಂತದ ಸಂಗತಿ ಎಂದು ಗ್ರಾಮಸ್ಥರಾದ ಶರಣಬಸಪ್ಪ ಎಸ್. ಕೊಡಂಗಲಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ನಿರ್ಮಿಸಲಾಗಿರುವ ಕಟ್ಟಡದ ಮೇಲೆ ಕನಿಷ್ಠ ‘ಮಹಿಳಾ ಶೌಚಾಲಯ’ ಎಂಬ ಹೆಸರು ಅಥವಾ ಬೋರ್ಡ್‌ ಸಹ ಹಾಕಲಾಗಿಲ್ಲ. ಇದರಿಂದಾಗಿ ಇದು ಸರ್ಕಾರಿ ಶೌಚಾಲಯವೋ ಅಥವಾ ಬೇರೇನಾದರೂ ಕಟ್ಟಡವೋ ಎಂಬ ಗೊಂದಲ ಹಾಗೂ ಅನುಮಾನಗಳು ಗ್ರಾಮಸ್ಥರಲ್ಲಿ ಕಾಡುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕ ಆಸ್ತಿಗೆ ಕನಿಷ್ಠ ಹೆಸರು ಬರೆಸದ ಪಂಚಾಯತ್ ಸಿಬ್ಬಂದಿಯ ಕಾರ್ಯವೈಖರಿಗೆ ಸಾರ್ವಜನಿಕರು ತೀವ್ರ ಕಿಡಿಕಾರಿದ್ದಾರೆ.

ಈ ಕುರಿತು ಜೆ ಟಿವಿ ಕನ್ನಡ ವರದಿಗಾರ ಪ್ರಶ್ನಿಸಿದ್ದಕ್ಕೆ ಮಾತನಾಡಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಾ ಇಳಿಗೇರ ಅವರು, "ಎಂಡಿಎಫ್ ಅನುದಾನದಡಿ ₹25 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣವಾಗಿರುವುದು ನಿಜ. ಆದರೆ, ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯವರು ಶೌಚಾಲಯದ ಹಸ್ತಾಂತರವನ್ನು ಗ್ರಾಮ ಪಂಚಾಯಿತಿಗೆ ತಡವಾಗಿ ಮಾಡಿದ್ದರಿಂದ ಈ ವಿಳಂಬವಾಗಿದೆ. ಈಗ ವಿಷಯ ಗಮನಕ್ಕೆ ಬಂದಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಇನ್ನು ಎರಡೇ ದಿನಗಳಲ್ಲಿ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿ ಮಹಿಳೆಯರ ಬಳಕೆಗೆ ಮುಕ್ತಗೊಳಿಸಲಾಗುವುದು. ಅಲ್ಲದೆ, ಇದರ ನಿರಂತರ ನಿರ್ವಹಣೆಗಾಗಿ ಸ್ಥಳೀಯ ಸ್ವಸಹಾಯ ಸಂಘದ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳು ನೀಡಿರುವ ಭರವಸೆಯಂತೆ ಎರಡು ದಿನಗಳಲ್ಲಿ ಶೌಚಾಲಯ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆಯೇ ಅಥವಾ ಇದು ಬರಿ ಭರವಸೆಯಾಗಿಯೇ ಉಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم