ನಾಗಾವಿ ದಸರಾ ವೈಭವ': 10 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು

ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 20 ರವರೆಗೆ 'ನಾಗಾವಿ ದಸರಾ ವೈಭವ'ದ ಪ್ರಥಮ ವರ್ಷದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ರಾಜಪ್ಪ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಶುಕ್ರವಾರ ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ದೇವಿಯ ಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಲಿದೆ. ಈ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಪಟ್ಟಣದ ಸಾರ್ವಜನಿಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು

ಅಕ್ಟೋಬರ್ 10: ಸಂಜೆ 4.35ಕ್ಕೆ ವಾದ್ಯಮೇಳಗಳೊಂದಿಗೆ ಶ್ರೀ ಅಕ್ಕಮಹಾದೇವಿ ದೇವಸ್ಥಾನದಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ದೇವಿಯ ಮೂರ್ತಿ ಮೆರವಣಿಗೆ. ಅಕ್ಟೋಬರ್ 11: ಬೆಳಿಗ್ಗೆ 6 ಗಂಟೆಗೆ ಸನಾತನ ಭಾರತೀಯ ಪದ್ಧತಿಯಂತೆ ಪ್ರಧಾನ ಅರ್ಚಕ ವೇ.ಮೂ ಶ್ರೀ ಮಂಜುನಾಥ ಶಾಸ್ತ್ರಿಗಳು ಹಾಗೂ ತಂಡದವರಿಂದ ಘಟಸ್ಥಾಪನೆ ಮತ್ತು ಅಖಂಡ ದೀಪಾರಾಧನೆ. ಅಕ್ಟೋಬರ್ 12: ಸಂಜೆ 6 ಗಂಟೆಗೆ ಕುಂಕುಮಾರ್ಚನೆ, ನಂತರ ಮಾತೆಯರಿಂದ 'ದಾಂಡಿಯಾ' ಮತ್ತು ಸಂಜೆ 7.15ಕ್ಕೆ ಚಿತ್ತಾಪುರ ಪಟ್ಟಣದ ಕಲಾವಿದರಿಂದ 'ಭರತನಾಟ್ಯ ಪ್ರದರ್ಶನ'. ಅಕ್ಟೋಬರ್ 13: ಸಂಜೆ 7.15ಕ್ಕೆ ರೇಣುಕ ಬಸವ ವೈದಿಕ ಬಳಗದಿಂದ ಕಾಶಿಯ ಪ್ರಸಿದ್ಧ ಗಂಗಾ ಆರತಿ ಶೈಲಿಯಲ್ಲಿ ದೇವಿಗೆ 'ವಿಶೇಷ ಮಹಾಆರತಿ'.ಅಕ್ಟೋಬರ್ 14: ಸಂಜೆ 7.15ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಚಿತ್ತಾಪುರ ಇವರ ಸಂಯುಕ್ತಾಶ್ರಯದಲ್ಲಿ 'ದಸರಾ ಕವಿಗೋಷ್ಠಿ'. ಅಕ್ಟೋಬರ್ 15: ಸಂಜೆ 7.15ರಿಂದ ನಾಗಾವಿ ನಾಡು ಯುವಕರ ಸಂಯುಕ್ತಾಶ್ರಯದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ('ದಸರಾ ಕ್ರೀಡಾಕೂಟ'). ಅಕ್ಟೋಬರ್ 16: ಸಂಜೆ 7.15ಕ್ಕೆ ಚಿತ್ರನಟ ಹಾಗೂ ಹಿರಿಯ ಸಾಹಿತಿ ಮಹಿಪಾಲ್ ರೆಡ್ಡಿ ಮುನ್ನೂರ ಸೇಡಂ ಇವರ ಸಾರಥ್ಯದಲ್ಲಿ 'ಚಿತ್ತಾಪುರ ತಾಲೂಕಿನ ಆದರ್ಶ ದಂಪತಿಗಳು' ಕಾರ್ಯಕ್ರಮ. ಅಕ್ಟೋಬರ್ 17: ಸಂಜೆ 7.15ಕ್ಕೆ ಗಾಯಕಿ ಎಸ್. ಜಾನಕಿ ಅವರ ನೆನಪಿಗಾಗಿ ಕಲಾವಿದ ಮೆಲೋಡೀಸ್ ಕಲಬುರಗಿ ಚಿನ್ನವೀರ ಬೆಳಗುಂಫಾ ಅವರ ಸಾರಥ್ಯದಲ್ಲಿ 'ಗಾನಯಾನ ರಸಮಂಜರಿ'. ಅಕ್ಟೋಬರ್ 18: ಸಂಜೆ 7.15ಕ್ಕೆ ಗದಗ ಜಿಲ್ಲೆಯ ಖ್ಯಾತ ಜಾನಪದ ಕಲಾವಿದರಿಂದ 'ಜೋಗತಿ ನೃತ್ಯ ಪ್ರದರ್ಶನ' ಮತ್ತು ವೈವಿಧ್ಯಮಯ ಕಲಾತಂಡದಿಂದ 'ಜೀವನ ಬೆಳಕು ಜೀವನ ಜ್ಯೋತಿ'. ಅಕ್ಟೋಬರ್ 19: ಸಂಜೆ 7.15ಕ್ಕೆ ಸ್ಥಳೀಯ ಪ್ರತಿಭಾವಂತ ಕಲಾವಿದರಿಗಾಗಿ 'ವಾಯ್ಸ್ ಆಫ್ ಚಿತ್ತಾಪುರ'. ಅಕ್ಟೋಬರ್ 20: ಸಂಜೆ 4.15ಕ್ಕೆ ವಿಜಯದಶಮಿ ಪ್ರಯುಕ್ತ 'ಸೀಮೋಲ್ಲಂಘನ ಕಾರ್ಯಕ್ರಮ' ನಡೆಯಲಿದೆ.

ಪ್ರತಿದಿನ ಸಂಜೆ ನಡೆಯುವ ಕುಂಕುಮಾರ್ಚನೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಮೊದಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿದಿನದ ಕಾರ್ಯಕ್ರಮಗಳಲ್ಲೂ ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ.

ಈ ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಾಗರಾಜ ಭಂಕಲಗಿ, ವಿಶ್ವಾರಾಧ್ಯ ಪಾಟೀಲ ಕರದಾಳ, ಮಂಜುನಾಥ ಶಾಸ್ತ್ರಿ, ಚಂದ್ರಶೇಖರ ಉಟಗೂರ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಶ್ರೀಧರ್ ವಾರದ್, ಅನಿಲ ವಡ್ಡಡಗಿ, ದೀಪಕ್ ಹೊಸ್ತುರಕರ್, ಕೋಟೇಶ್ವರ ರೇಷ್ಮಿ, ನಾಗೇಶ್ ಲೋಮಟೆ, ವಿಜಯಕುಮಾರ್ ಯಾಗಾಪುರ, ಬಸಲಿಂಗಪ್ಪ ಸಜ್ಜನ್, ಯಲ್ಲಾಲಿಂಗ ಸುಲ್ತಾನಪುರ, ಅಂಬರೀಷ್ ಸುಲೇಗಾಂವ, ಅಂಬರೀಷ್ ಭೋವಿ, ಮೇಘರಾಜ ಗುತ್ತೇದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم