ನಾಗಾವಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ತಕ್ಷಣ ಆರಂಭಿಸಿ: ಅಂಬರೀಶ್ ಒತ್ತಾಯ.

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಮೂಲ ರೂಪದ ಗರ್ಭಗುಡಿ ಹಾಗೂ ಅಕ್ಕಪಕ್ಕದ ಕೊಠಡಿಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯು ಮೊದಲನೇ ಹಂತದಲ್ಲಿ ₹1 ಕೋಟಿ 84 ಲಕ್ಷ ಅನುದಾನ ಮಂಜೂರು ಮಾಡಿದ್ದು, ಜಾತ್ರೆ ಮುಗಿದ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಹಸೀಲ್ದಾರ್ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಯ್ಯ ಹಿರೇಮಠ ತಿಳಿಸಿದ್ದಾರೆ. ಆದರೆ, ಪ್ರತಿ ವರ್ಷ ಬರಿ ಭರವಸೆ ನೀಡದೆ ಈ ಬಾರಿ ಕಾಮಗಾರಿಯನ್ನು ಅತ್ಯಂತ ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಅಂಬರೀಶ್ ಬೋವಿ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ನಾಗಾವಿ ಪ್ರದೇಶದಲ್ಲಿ ನಶಿಸಿಹೋಗುತ್ತಿರುವ ಅಪಾರ ಶಾಸನ ಸಂಪತ್ತು, ಪ್ರಾಚೀನ ಜ್ಞಾನ ಭಂಡಾರ ಹಾಗೂ ಗ್ರಾಮೀಣ ಕಲಾಕೃತಿಗಳನ್ನು ಬೆಳಕಿಗೆ ತರಲು ಹಾಗೂ ಮುಂದಿನ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ನೀಡಲು ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾಳಜಿ ವಹಿಸಿ 'ನಾಗಾವಿ ಉತ್ಸವ' ನಡೆಸುವುದು ಅತ್ಯಗತ್ಯ," ಎಂದಿದ್ದಾರೆ.

ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ತಾಲೂಕು ಆಡಳಿತವು ಈ ಕೆಳಗಿನ ಮೂಲಸೌಕರ್ಯಗಳನ್ನು ತುರ್ತಾಗಿ ದೇವಸ್ಥಾನಕ್ಕೆ ಹೋಗಲು ಮತ್ತು ಬರಲು ಪ್ರತ್ಯೇಕ ರಸ್ತೆ (ಒನ್‌ವೇ ವ್ಯವಸ್ಥೆ) ನಿರ್ಮಿಸಿ, ಸಿಸಿ ರಸ್ತೆ ಮಾಡಿಸಬೇಕು. ರಸ್ತೆಯ ಮಧ್ಯದಲ್ಲಿ ದೇವಸ್ಥಾನದವರೆಗೆ ಸಾಲಾಗಿ ಬೀದಿ ದೀಪದ ಕಂಬಗಳನ್ನು ಅಳವಡಿಸಬೇಕು. ದೂರದೂರುಗಳಿಂದ ಬರುವ ಭಕ್ತರಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ ಹಾಗೂ ಸ್ನಾನದ ಕೊಠಡಿಗಳನ್ನು ನಿರ್ಮಿಸಬೇಕು.

ಕ್ಷೇತ್ರದ ಸುದೀರ್ಘ ಇತಿಹಾಸ ಹಾಗೂ ಭಕ್ತರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಮತ್ತು ಸರ್ಕಾರವು ಕೇವಲ ಕಾಗದದ ಮೇಲಷ್ಟೇ ಯೋಜನೆಗಳನ್ನು ಇಡದೆ, ಪ್ರತ್ಯಕ್ಷವಾಗಿ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಹಂಪಿ, ಬಾದಾಮಿ ಹಾಗೂ ಮಾನ್ಯಖೇಡ ಉತ್ಸವಗಳ ಮಾದರಿಯಲ್ಲಿಯೇ ನಾಗಾವಿ ಕ್ಷೇತ್ರಕ್ಕೂ ಸರ್ಕಾರದ ವತಿಯಿಂದ 'ನಾಗಾವಿ ಉತ್ಸವ' ಆಯೋಜಿಸಬೇಕು ಎಂದು ಸ್ಥಳೀಯ ಆಗ್ರಹವಾಗಿದೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم