ಸರ್ಕಾರಿ ಶಾಲೆಗಳ ಖಾಸಗೀಕರಣ, ವಿಲೀನಕ್ಕೆ ಎಎಪಿ ತೀವ್ರ ವಿರೋಧ: ಜಗದೀಶ ಸಾಗರ್

ಚಿತ್ತಾಪುರ: ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಹಾಗೂ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಕೆಪಿಎಸ ಮ್ಯಾಗ್ನೆಟ ಶಾಲೆಗಳೊಂದಿಗೆ ವಿಲೀನಗೊಳಿಸುವ ಸರ್ಕಾರದ ನೀತಿಗೆ ಆಮ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೀಶ ಸಾಗರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಆಮ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು. ಈ ಮೂಲಕ ಸರ್ಕಾರವು ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.

ದತ್ತು ಪಡೆದ ಸರ್ಕಾರಿ ಶಾಲೆಗಳ ಹೆಸರಿನೊಂದಿಗೆ ಖಾಸಗಿ ಸಂಸ್ಥೆ ಅಥವಾ ಕಾರ್ಪೊರೇಟ್ ಕಂಪನಿಗಳ ಹೆಸರನ್ನು ಸೇರಿಸಲು ಅನುಮತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ ಈ ನಿರ್ಧಾರವು ಸರ್ಕಾರಿ ಶಾಲೆಗಳ ಸಾರ್ವಜನಿಕ ಅಸ್ಮಿತೆಯನ್ನು ಕುಗ್ಗಿಸುತ್ತದೆ ಮತ್ತು ಶಾಲೆಗಳು ಕಂಪನಿಗಳ ಜಾಹೀರಾತು ಫಲಕಗಳಾಗಿ ಬದಲಾಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಮುಂದಿನ ದಿನಗಳಲ್ಲಿ 'ನಮ್ಮ ನಡೆ ಹಳ್ಳಿಗಳ ಸರ್ಕಾರಿ ಶಾಲೆಗಳ ಕಡೆ' ಎಂಬ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡಪ್ಪ ಮಲಖೇಡ್ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೊಂದಿಗೆ ವಿಲೀನಗೊಳಿಸುವುದರಿಂದ ಗ್ರಾಮೀಣ ಭಾಗದ ಸಾವಿರಾರು ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ ಎಂದು ಅವರು ತಿಳಿಸಿದರು. ಶಾಲೆಗಳು 5 ರಿಂದ 10 ಕಿ.ಮೀ ದೂರಕ್ಕೆ ಸ್ಥಳಾಂತರಗೊಂಡರೆ ಬಡ ಮಕ್ಕಳು ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಈ ನೀತಿಯಿಂದ ಖಾಸಗಿ ಶಾಲೆಗಳಿಗೆ ಅನುಕೂಲವಾಗುತ್ತದೆಯೇ ಹೊರತು, ಬಡ ಮಕ್ಕಳ ಭವಿಷ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ  ಎಎಪಿ ಯುವ ಘಟಕ ಜಿಲ್ಲಾ ಅಧ್ಯಕ್ಷ  ಪರಮೇಶ್ವರ ಮತ್ತಿಮೂಡ, ಎಎಪಿ ಶಹಾಬಾದ ತಾಲೂಕ ಅಧ್ಯಕ್ಷರು ಶೀವಯೋಗಿ ಪೂಜಾರಿ, ಚಿತ್ತಾಪೂರ ನಗರ ಅಧ್ಯಕ್ಷರು ನೂರೋದ್ದಿನ್ ಹೀರಾಪೂರ ಇತರರು ಇದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು