ಚಿತ್ತಾಪುರ: ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು, ಇದು ಶಿಕ್ಷಣ ಇಲಾಖೆಯ ಅಡಿಯಲ್ಲೇ ಮುಂದುವರಿಯಬೇಕು ಅಡುಗೆ ಸಿಬ್ಬಂದಿ ನೌಕರರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ ಎಂದು ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಶ್ರೀಮತಿ ಮಹಾದೇವಿ ನಿಂಬಾಳ ಸರ್ಕಾರಕ್ಕೆ ತಾಕೀತು ಮಾಡಿದರು.
ಪಟ್ಟಣದ ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ವತಿಯಿಂದ ಜಂಟಿಯಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸಲ್ಲಿಸಿ ಮಾತನಾಡಿದ ಅವರು ಬಿಸಿಯೂಟ ನೌಕರರು ಹಲವು ವರ್ಷಗಳಿಂದ ಅತ್ಯಂತ ಕಡಿಮೆ ವೇತನಕ್ಕೆ ಶ್ರಮಿಸುತ್ತಿದ್ದಾರೆ. ಸರ್ಕಾರವು ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳಾದ ನೌಕರರು ಕಾಯಂ ಆಗುವ ತನಕ 'ಸಮಾನ ಕೆಲಸಕ್ಕೆ ಸಮಾನ ವೇತನ' ನೀಡಬೇಕು,ನಿವೃತ್ತಿ ಹೊಂದಿದ ನೌಕರರಿಗೆ ₹2 ಲಕ್ಷ ಇಡುಗಂಟು ಹಾಗೂ ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದರೆ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು,
ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದಂತೆ ₹6,000 ವೇತನ ಹೆಚ್ಚಳವನ್ನು ಜಾರಿಗೊಳಿಸಬೇಕು.
ಮಕ್ಕಳ ಹಾಜರಾತಿ ಕಡಿಮೆಯಾದ ಕಾರಣಕ್ಕೆ ನೌಕರರನ್ನು ಕೆಲಸದಿಂದ ತೆಗೆಯಬಾರದು ಬದಲಾಗಿ ಹತ್ತಿರದ ಶಾಲೆಗಳಿಗೆ ನಿಯೋಜಿಸಬೇಕು, ಬೇಸಿಗೆ ಮತ್ತು ದಸರಾ ರಜೆ ಅವಧಿಯ ವೇತನವನ್ನು ಕಡ್ಡಾಯವಾಗಿ ಪಾವತಿಸಬೇಕು.ಕೆಲಸದ ಸ್ಥಳದಲ್ಲಿ ನೌಕರರಿಗೆ ನೀಡಲಾಗುತ್ತಿರುವ ಮಾನಸಿಕ ಕಿರುಕುಳವನ್ನು ನಿಲ್ಲಿಸಬೇಕು,ಚುನಾವಣೆ ಕರ್ತವ್ಯ ನಿರ್ವಹಿಸಿದ ನೌಕರರಿಗೆ ದಿನಭತ್ಯೆ ನೀಡಬೇಕು ಮತ್ತು ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಮುಕ್ತಾ ಚಂದಾ, ತಾಲೂಕಾಧ್ಯಕ್ಷೆ ಶ್ರೀಮತಿ ಸುವರ್ಣಾ ಶಾಂಪೂರಹಳ್ಳಿ, ಉಪಾಧ್ಯಕ್ಷೆ ಶ್ರೀಮತಿ ಸುನೀತಾ ಕುಂಬಾರ, ಶ್ರೀಮತಿ ಶಾಹೀನ್ ಬೇಗಂ, ಶ್ರೀಮತಿ ವೈಶಾಲಿ ಕೊಂಕನಳ್ಳಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ರಮೇಶ ಕವಡೆ, ಉದಯಕುಮಾರ್ ಸಾಗರ, ಶಿವಮೂರ್ತಿ ಪಾಮನೂರ, ನಾಗೇಂದ್ರ ಬುರ್ಲಿ, ನವಾಬ್ ಮುನ್ನಿ, ಭೀಮರಾಯ ಕಂಚೂರ, ಶ್ರೀಮತಿ ಕಲ್ಪನಾ ಕಲ್ಲಕ್, ಶ್ರೀಮತಿ ಶರಣಮ್ಮ ಕಾಶಿ, ಶ್ರೀಮತಿ ಸಿದ್ದಮ್ಮ ಎಡಗಿ, ಶ್ರೀಮತಿ ಬಸಮ್ಮ ಮರಗಮ್ಮಗುಡಿ, ಶ್ರೀಮತಿ ಸುಲೋಚನಾ, ಶ್ರೀಮತಿ ಅನಸೂಯಾ ನಂದೂರ, ಶ್ರೀಮತಿ ದೀಪಿಕಾ, ಶ್ರೀಮತಿ ರತ್ನಮ್ಮ ಸೇರಿದಂತೆ ಇತರರು ಇದ್ದರು.