ಮೋದಿಯ ವಿದೇಶಾಂಗ ನೀತಿಯಿಂದ ದೇಶದ ಗೌರವಕ್ಕೆ ಧಕ್ಕೆ: ಖರ್ಗೆ ವಾಗ್ದಾಳಿ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹದಗೆಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಟೀಕಿಸಿದರು.

ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರದ ₹1,069 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು "ಮೋದಿಯವರು ಅಮೆರಿಕದ ಗುಲಾಮನಂತೆ ವರ್ತಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಅನುಮತಿಗಾಗಿ ಕಾಯುವ ಸ್ಥಿತಿ ಬಂದಿದೆ. ಟ್ರಂಪ್‌ ಅವರೊಂದಿಗೆ ಸ್ನೇಹ ಮಾಡಿಕೊಂಡು ದೇಶದ ಹಿತಾಸಕ್ತಿಯನ್ನು ಗಿರಿವಿ ಇಟ್ಟಿದ್ದಾರೆ. ನೆಹರೂ ಅವರ ಕಾಲದ 'ಅಲಿಪ್ತ ನೀತಿ' ವಿಶ್ವಶಾಂತಿಗೆ ಪೂರಕವಾಗಿತ್ತು. ಆದರೆ ಈಗಿನ ಮೋದಿಯವರ ನಡೆಯಿಂದ ವಿಶ್ವಶಾಂತಿ ಕದಡುತ್ತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, 371(ಜೆ) ಜಾರಿಗೆ ಬಿಜೆಪಿ ಅಂದು ಅಡ್ಡಿಪಡಿಸಿತ್ತು ಎಂದು ಸ್ಮರಿಸಿದ ಅವರು, ಈ ಸೌಲಭ್ಯದಿಂದ ಇಂದು ಬಡ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟು ಪಡೆಯುತ್ತಿದ್ದಾರೆ ಎಂದರು.
 
ನೀರಾವರಿ ಹಾಗೂ ಉದ್ಯೋಗದ ಭರವಸೆ: ಡಿಸಿಎಂ, ಡಿಕೆಶಿ ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಮಲ್ಲಿಕಾರ್ಜುನ ಖರ್ಗೆ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 400ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ನಾವು 'ನೀರಾವರಿ ಗ್ಯಾರಂಟಿ' ನೀಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲು 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದ್ದು, ಕಲ್ಯಾಣ ಕರ್ನಾಟಕಕ್ಕೆ 330 ಶಾಲೆಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು" ಎಂದು ತಿಳಿಸಿದರು.
ಗ್ಯಾಸ್ ಬೆಲೆ ಏರಿಕೆ ಪ್ರಿಯಾಂಕ್ ಖರ್ಗೆ ಕಿಡಿ
ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಇಂದು ವಿಶ್ವ ಮಹಿಳಾ ದಿನ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಸಿ ಜನರಿಗೆ 'ಅಚ್ಛೇ ದಿನ್' ಉಡುಗೊರೆ ನೀಡಿದೆ. ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಅವರಿಗೆ ಮರಳಿಸುತ್ತಿರುವುದನ್ನು ಸಹಿಸದೆ ಬಿಜೆಪಿ ಟೀಕಿಸುತ್ತಿದೆ. ಚಿತ್ತಾಪುರದ ಪ್ರತಿಯೊಂದು ಹಳ್ಳಿಗೆ ಸರಾಸರಿ ₹1 ಕೋಟಿಗೂ ಅಧಿಕ ಅನುದಾನ ನೀಡಲಾಗುತ್ತಿದೆ. ನಾನು ಈ ಮಣ್ಣಿನ ಮೊಮ್ಮಗನಾಗಿ ನಿಮ್ಮ ಸೇವೆ ಮಾಡುತ್ತಿದ್ದೇನೆ. ಜನರ ಆಶೀರ್ವಾದ ಇರುವವರೆಗೆ ನನಗೆ ಯಾರ ಭಯವೂ ಇಲ್ಲ" ಎಂದು ಗುಡುಗಿದರು.

ಕಾರ್ಯಕ್ರಮದ ಮುಖ್ಯಾಂಶಗಳು:
•ಕ್ಷೇತ್ರದಲ್ಲಿ ₹1,069 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
•ಕಲಬುರಗಿ ಜಿಲ್ಲೆಯ 15.50 ಲಕ್ಷ ರೈತರಿಗೆ ₹2,590 ಕೋಟಿ ಪರಿಹಾರ ವಿತರಣೆ.
•ಚಿತ್ತಾಪುರಕ್ಕೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ 2,000 ಮನೆಗಳ ಮಂಜೂರಾತಿ.

ವೇದಿಕೆಯಲ್ಲಿ ಡಾ. ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ಶ್ರೀಮತಿ ಖನಿಜ ಫಾತಿಮಾ, ಎಂ ವೈ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಡಾ ಚಂದ್ರಶೇಖರ್ ಪಾಟೀಲ್, ತಿಪ್ಪಣಪ್ಪ ಕಮಕನೂರು, ಬಿ ಆರ್ ಪಾಟೀಲ್, ಬಾಬುರಾವ್ ಚಿಂಚನಸೂರ, ಜಗದೇವ ಗುತ್ತೇದಾರ್, ಸಯ್ಯದ್ ಮೊಹಮ್ಮದ್ ಅಲಿ ಹುಸೇನ್, ದೇವೇಂದ್ರಪ್ಪ ಮರತೂರು, ಅರುಣ್ ಕುಮಾರ್ ಪಾಟೀಲ್, ಸೈಯದ್ ಮಹಿಮೂದ್ ಚಿಸ್ತಿ ಸಾಹೇಬ್, ಪ್ರವೀಣ್ ಹರವಾಳ, ಶ್ರೀಮತಿ ಚಂದ್ರಿಕಾ ಪರಮೇಶ್ವರಿ, ಅಧಿಕಾರಿಗಳಾದ ಜಿಲ್ಲಾಧಿಕಾರಿ  ಫೌಜಿಯ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸುಲು, ಎಸಿ ಪ್ರಭುರಾಜ್, ತಹಸಿಲ್ದಾರ್ ನಾಗಯ್ಯ ಹಿರೇಮಠ ಡಿವೈಎಸ್ಪಿ ಶಂಕರಗೌಡ ಪಾಟೀಲ್. ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم