ಚಿತ್ರಾಪುರ: ಪಟ್ಟಣ ಸೇರಿ ನಿನ್ನೆ ರಾತ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಸಹಿತ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನದಲ್ಲಿನ ಈ ದಿಢೀರ್ ಮತ್ತು ತೀವ್ರ ಬದಲಾವಣೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾನಿಯಾಗಿದ್ದು, ಸ್ಥಳೀಯ ಮೂಲಸೌಕರ್ಯ ಮತ್ತು ದೈನಂದಿನ ಚಟುವಟಿಕೆಗಳಿಗೆ ವ್ಯತ್ಯಯ ಉಂಟಾಗಿದೆ.
ಈ ಅಕಾಲಿಕ ಬಿರುಗಾಳಿ ಮತ್ತು ಮಳೆಯಿಂದಾಗಿ ಇಲ್ಲಿನ ಓರಿಯಂಟ್ ಸಿಮೆಂಟ್ ಕಾರ್ಖಾನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಾರ್ಖಾನೆಯ ಆವರಣದಲ್ಲಿರುವ ಕೆಲವು ಸಹಾಯಕ ಸೌಕರ್ಯಗಳಿಗೆ ಹಾನಿಯಾಗಿದ್ದು, ದೈನಂದಿನ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ನಿರಂತರ ಮಳೆಯಿಂದಾಗಿ ಕಾರ್ಖಾನೆ ಆವರಣದಲ್ಲಿ ನೀರು ನಿಂತು ಜಲಾವೃತಗೊಂಡಿದ್ದು, ಬಿರುಗಾಳಿಯ ಅಬ್ಬರಕ್ಕೆ ಕಾರ್ಯನಿರ್ವಹಣೆಯಲ್ಲಿ ಭಾರೀ ಸವಾಲುಗಳು ಎದುರಾಗಿವೆ.
ಬಿರುಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಕೃಷಿ ಜಮೀನುಗಳು ಮಳೆಗೆ ಸಿಲುಕಿ ಹಾನಿಗೊಳಗಾಗಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
"ಅದೃಷ್ಟವಶಾತ್ ಈ ಪ್ರಕೃತಿ ವಿಕೋಪದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ಪುನರ್‌ಸ್ಥಾಪನಾ ಕಾರ್ಯಗಳು ಭರದಿಂದ ಸಾಗುತ್ತಿವೆ," ಎಂದು ಅದಾನಿ ಸಿಮೆಂಟ್‌ನ ಮುಖ್ಯ ಕಾರ್ಖಾನೆ ವ್ಯವಸ್ಥಾಪಕರಾದ ಅಜಯ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ