ಚಿತ್ತಾಪೂರ: ಇಂದಿನ ದಿನಗಳಲ್ಲಿ ನಾವು ನೀರನ್ನು ಅತಿಯಾಗಿ ಪೋಲು ಮಾಡುತ್ತಿದ್ದೇವೆ. ಮನುಷ್ಯ ಒಂದು ದಿನ ಊಟವಿಲ್ಲದೆ ಬದುಕಬಲ್ಲ, ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ್ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ 'ವಿಶ್ವ ಜಲ ದಿನಾಚರಣೆ' ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇವಲ ನೀರು ಉಳಿಸುವುದು ಮಾತ್ರವಲ್ಲ, ನೀರು ಮಲಿನವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಕಲುಷಿತ ನೀರನ್ನು ಸೇವಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಶುದ್ಧ ನೀರಿನ ಬಳಕೆ ಅನಿವಾರ್ಯ" ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿಶನ್ ಮಾಡಲಗಿ ಮಾತನಾಡಿ "ನೀರು ಪ್ರಕೃತಿ ನಮಗೆ ನೀಡಿದ ಉಡುಗೊರೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಈ ಕಾಲದಲ್ಲಿ ಜಲಮೂಲಗಳ ರಕ್ಷಣೆ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ನಮ್ಮ ಜವಾಬ್ದಾರಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನಾದ್ಯಂತ ಸಾರ್ವಜನಿಕರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.
ನ್ಯಾಯವಾದಿಗಳಾದ ಎ,ಎಂ ಅವಂಟಿ ರವರು ವಿಶ್ವಜಲ ದಿನಾಚರಣೆ ಕುರಿತು ಕಾನೂನು ಮಾಹಿತಿ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಅಪ್ಪರ ಜಿಲ್ಲಾ ಸರ್ಕಾರಿ ವಕೀಲರಾದ ಶ್ರೀಮತಿ ವಿ ಆರ್ ಕಾಂತ, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಮತಿ ಅಂಜನಾದೇವಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ