ಚಿತ್ತಾಪುರ: ಬಣ್ಣಗಳ ಹಬ್ಬ ಹೋಳಿಯನ್ನು ಪಟ್ಟಣದಾದ್ಯಂತ ಬುಧವಾರ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಹಾಗೂ ಆಶ್ರಯ ಕಾಲೋನಿ, ಬಸ್ ನಿಲ್ದಾಣ, ಬಹರಪೇಟ್, ಹೀಗೆ ಪ್ರತಿ ನಗರ ಸೇರಿದಂತೆ ವಿವಿಧೆಡೆ ಯುವಕರು ಮತ್ತು ಮಕ್ಕಳು ಪರಸ್ಪರ ಬಣ್ಣ ಹಚ್ಚುವ ಮೂಲಕ ಹಬ್ಬದ ಮಜಾ ಸವಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾಯಿಸಿ ಯುವಕರು, ಒಬ್ಬರಿಗೊಬ್ಬರು ಗುಲಾಲ್ ಹಾಗೂ ವಿವಿಧ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದರು. ಜಾತಿ-ಮತದ ಭೇದ ಮರೆತು ಗೆಳೆಯರೆಲ್ಲರೂ ಒಂದಾಗಿ ಹೋಳಿ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದರು.
ಆಶ್ರಯ ಕಾಲೋನಿಯಲ್ಲಿ ಚಿಕ್ಕ ಮಕ್ಕಳ ಹೋಳಿ ಆಚರಣೆ ಕಳೆಗಟ್ಟಿತ್ತು. ಕೈಯಲ್ಲಿ ಪಿಚಕಾರಿ ಹಿಡಿದು ಬೀದಿ ಬೀದಿಗಳಲ್ಲಿ ಓಡುತ್ತಾ, ಒಬ್ಬರ ಮೇಲೊಬ್ಬರು ಬಣ್ಣದ ನೀರು ಎರಚುತ್ತಾ ಮಕ್ಕಳು ಸಂಭ್ರಮಿಸಿದರು. ಮಕ್ಕಳ ಈ ನಿಷ್ಕಲ್ಮಶ ನಗು ಮತ್ತು ಬಣ್ಣದಾಟ ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ ಕಾಶಿ ಅವರು, "ಹೋಳಿ ಹಬ್ಬವು ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕಿ, ಜೀವನದಲ್ಲಿ ಹೊಸ ಬಣ್ಣಗಳನ್ನು ತುಂಬಿಕೊಳ್ಳುವ ಸಂಕೇತವಾಗಿದೆ. ಯುವಕರು ಮತ್ತು ಮಕ್ಕಳು ಪ್ರೀತಿ-ವಿಶ್ವಾಸದಿಂದ ಹಬ್ಬ ಆಚರಿಸುತ್ತಿರುವುದು ಸಂತಸದ ವಿಷಯ. ಈ ಬಣ್ಣಗಳ ಹಬ್ಬವು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಹೋದರತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿ" ಎಂದು ಹಾರೈಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯುವಕರ ಗುಂಪುಗಳು 'ಹೋಳಿ ಹಬ್ಬದ ಶುಭಾಶಯ' ಕೋರುತ್ತಾ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು. ಶಾಂತಿಯುತ ಆಚರಣೆಗಾಗಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಯಲ್ಲಪ್ಪ ಎಸ್ ಕಾಶಿ, ಜಗದೇವ ಕುಂಬಾರ, ಪೃಥ್ವಿರಾಜ್ ಸಾಗರ, ಈರು ಪವಾರ್, ವಿನೋದ್ ಗುತ್ತೇದಾರ್, ನಾಗೇಶ್ ಕಾಶಿ, ಅನೀಲ್ ಚವ್ಹಾಣ್, ರಮೇಶ್ ರಾಠೋಡ್, ಶಿವು ಚಿಕ್ಕಾ, ಸುನಿಲ್ ಕಾಶಿ, ರಮೇಶ್ ಕಾಳನೂರ, ಅಂಬಣ್ಣ ಕಾಶಿ, ಕುಪೇಂದ್ರ ಚವ್ಹಾಣ್, ಯಲ್ಲಪ್ಪ ಎಚ್ ಕಾಶಿ, ಚಂದ್ರು ನಾಟಿಕಾರ್, ಸುನಿಲ್ ಎಂ ಕಾಶಿ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ