ಚಿತ್ತಾಪುರ: ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಕ್ಷಣವೇ ತಿರಸ್ಕರಿಸುವಂತೆ ಆಗ್ರಹಿಸಿ ಹಾಗೂ ಹಳೆಯ ಮೀಸಲಾತಿ ನಿಯಮದಂತೆಯೇ ತ್ವರಿತ ನೇಮಕಾತಿ ನಡೆಸುವಂತೆ ಒತ್ತಾಯಿಸಿ, ಮಾರ್ಚ್ 24ರಂದು (ಮಂಗಳವಾರ) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಬೆಂಗಳೂರು ಚಲೋ' ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ರಿ) ಹಾಗೂ ಬಂಜಾರ, ಭೋವಿ, ಕೊರಚ, ಕೊರಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ ಈ ಹೋರಾಟದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಡಿ. ಚವ್ಹಾಣ, "ನಾಗಮೋಹನ್ ದಾಸ್ ಆಯೋಗದ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ಸಮಗ್ರ ಸಮೀಕ್ಷೆಯಿಲ್ಲದೆ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಒಳ ಮೀಸಲಾತಿ ರೋಸ್ಟರ್ ಹಂಚಿಕೆಯನ್ನು ನಮ್ಮ ಸಮುದಾಯಗಳು ತೀವ್ರವಾಗಿ ವಿರೋಧಿಸುತ್ತವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಮಾರ್ಚ್ 24ರಂದು ನಡೆಯುವ ಈ ಹೋರಾಟವು ಭೋವಿ, ಬಂಜಾರ, ಕೊರಮ, ಕೊರಚ, ಛಲವಾದಿ, ಚರ್ಮಕಾರ ಸೇರಿದಂತೆ ವಿವಿಧ ಸೂಕ್ಷ್ಮ ಜಾತಿಗಳ ಅಸ್ತಿತ್ವದ ಪ್ರಶ್ನೆಯಾಗಿದೆ. ಸಮುದಾಯದ ಸಂತ ಮಹಾತ್ಮರ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ಪ್ರತಿಭಟನೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಚಿತ್ತಾಪುರ ತಾಲೂಕು ಮತ್ತು ಸುತ್ತಮುತ್ತಲಿನ ಭಾಗಗಳಿಂದಲೇ ಸುಮಾರು 5000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಸಮುದಾಯದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು" ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಹೇಶ್ ಕಾಶಿ, ಪ್ರಮುಖರಾದ ಗೋಪಾಲ ಡಿ. ರಾಠೋಡ್, ವಿಠ್ಠಲ್ ಕಟೀಮನಿ, ಮರಿಯಪ್ಪ ಭಜಂತ್ರಿ, ಪ್ರವೀಣ್ ಪವಾರ್, ದೇವಿದಾಶ್ ಚವ್ಹಾಣ, ಶ್ರೀಕಾಂತ್ ರಾಠೋಡ್, ವಿಜಯ ಪವಾರ್, ಮಹದೇವ ಭಜಂತ್ರಿ, ದೀಪಕ್ ಜಾಧವ್ ಹಾಗೂ ಜಗದೀಶ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ