ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಹಾಗೂ ಶಿವರಾಮ್ ರಾಜಗುರು ಅವರ ಪುಣ್ಯತಿಥಿ ಪ್ರಯುಕ್ತ ‘ಬಲಿದಾನ ದಿನ’ವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಕ್ರಾಂತಿವೀರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, "ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದಿಂದ ನಗುನಗುತ್ತಲೇ ಸಾವಿನ ಕುಣಿಕೆ ಏರಿದ ಕೆಚ್ಚೆದೆಯ ವೀರರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ ಅವರು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಲೇಬೇಕೆಂಬ ಛಲದಿಂದ ಅವರು ನಡೆಸಿದ ಕ್ರಾಂತಿಕಾರಿ ಹೋರಾಟ ಇಂದಿನ ಯುವಜನತೆಗೆ ಪ್ರೇರಣೆ" ಎಂದು ಬಣ್ಣಿಸಿದರು.
"1929ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದ ಕಾರಣಕ್ಕಾಗಿ ಅವರನ್ನು ಬಂಧಿಸಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. 1931ರ ಈ ದಿನ ಭಾರತೀಯರ ಪಾಲಿಗೆ ಕರಾಳ ದಿನ. ದೇಶಕ್ಕಾಗಿ ನೇಣುಗಂಬವೇರಿದಾಗ ಸುಖದೇವ್ ಹಾಗೂ ಭಗತ್ ಸಿಂಗ್ ಅವರಿಗೆ ಕೇವಲ 23 ವರ್ಷ, ರಾಜಗುರು ಅವರಿಗೆ 22 ವರ್ಷ ವಯಸ್ಸಾಗಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ತಾಯ್ನಾಡಿಗಾಗಿ ತಮ್ಮ ಉಸಿರು ಚೆಲ್ಲಿದ ಇಂತಹ ಮಹಾನ್ ಆದರ್ಶವಂತರ ನಾಡಿನಲ್ಲಿರುವ ನಾವು, ಅವರ ಆಶಯದಂತೆ ಭವ್ಯ ಭಾರತದ ಹಿರಿಮೆಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು" ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪ್ರಮುಖರಾದ ಶರಣಗೌಡ ಚಾಮನೂರ, ಹರಿ ಗಲಾಂಡೆ, ಕಿಶನ ಜಾಧವ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಉಮಾಭಾಯಿ ಗೌಳಿ, ದೇವಕ್ಕಿ ಪೂಜಾರಿ, ಬಸವರಾಜ ಇಂಗಳಗಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ