ಚಿತ್ತಾಪುರ: ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಅಸಂವಿಧಾನಿಕ ಪದಗಳಿಂದ ನಿಂದಿಸಿರುವುದನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ತೀವ್ರವಾಗಿ ಖಂಡಿಸಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯ ಕುರಿತು ಈಗಾಗಲೇ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭಿವೃದ್ಧಿಗೆ ಮೀಸಲಿದ್ದ 39 ಸಾವಿರ ಕೋಟಿ ರೂಪಾಯಿ ಅನುದಾನ ದುರ್ಬಳಕೆಯಾಗಿದೆ ಎಂದು ರಾಜಕುಮಾರ್ ಪಾಟೀಲ್ ತೇಲ್ಕೂರ್ ಪತ್ರಿಕಾ ಹೇಳಿಕೆ ನೀಡಿದ್ದರು. ಇದನ್ನು ಸಹಿಸದ ಸಚಿವರ ಬೆಂಬಲಿಗ ಚಂದ್ರಶೇಖರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ತೇಲ್ಕೂರ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅಶ್ಲೀಲ ಹಾಗೂ ಕೆಟ್ಟ ಪದಗಳನ್ನು ಬಳಸಿ ಕಾಮೆಂಟ್ ಮಾಡಿದ್ದಾನೆ ಎಂದು ಬೆಣ್ಣೂರಕರ್ ದೂರಿದರು.
ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ದಲಿತರ ಅಭಿವೃದ್ಧಿಯ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾದರೂ ಮೌನವಾಗಿರುವುದೇಕೆ? ಈ ಕುರಿತು ಅವರು ಬಹಿರಂಗವಾಗಿ ಮಾತನಾಡಲಿ ಎಂದು ಬೆಣ್ಣೂರಕರ್ ಸವಾಲು ಹಾಕಿದರು.
ಎಲ್ಲಾ ಸಮುದಾಯಗಳನ್ನು ಸಮನಾಗಿ ಕೊಂಡೊಯ್ಯುವ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಅಥವಾ ನಿಂದಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜನಶೆಟ್ಟಿ, ನಾಗರಾಜ ಹೂಗಾರ, ಈಶ್ವರ ದೊಡ್ಡಮನಿ, ಮಲ್ಲಿಕಾರ್ಜುನ ಇಟಗಿ, ಶಿವರಾಂ ಚವ್ಹಾಣ್, ಆನಂದ ಇಂಗಿಕಲ್, ನವೀನ್ ದಂಡೋತಿ. ಸೇರಿದಂತೆ ಇತರರು ಇದ್ದರು.
"ರಾಜಕಾರಣದಲ್ಲಿ ಆರೋಗ್ಯಕರ ಟೀಕೆ ಮತ್ತು ಪ್ರಶ್ನೆಗಳಿರಲಿ. ಆದರೆ ಪ್ರಶ್ನೆ ಮಾಡಿದವರ ವಿರುದ್ಧವೇ ಅಸಂವಿಧಾನಿಕ ಪದಗಳಿಂದ ನಿಂದಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೇಲ್ಕೂರ್ ಅವರು ಸಮರ್ಥವಾಗಿ ಮಾತನಾಡುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ಈ ರೀತಿ ಗುರಿ ಮಾಡಲಾಗುತ್ತಿದೆ."
— ಬಸವರಾಜ ಬೆಣ್ಣೂರಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ