(ಜೆ,ಟಿವಿ ನ್ಯೂಸ್)
ಚಿತ್ತಾಪುರ: ತಾಲೂಕಿನ ಕಮರವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಬಗ್ಗೆ ಪಂಚಾಯತ್ ಆಡಳಿತ ವರ್ಗ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಸಿ ಕಸ ಮತ್ತು ಒಣ ಕಸ ವಿಂಗಡಣೆಗಾಗಿ ಸುಮಾರು 2-3 ವರ್ಷಗಳ ಹಿಂದೆಯೇ ಸರ್ಕಾರದಿಂದ ಬಕೇಟ್‌ಗಳು ಮಂಜೂರಾಗಿದ್ದರೂ, ಅವುಗಳನ್ನು ಇದುವರೆಗೆ ಹಂಚಿಕೆ ಮಾಡದೆ ಪಂಚಾಯತ್‌ನಲ್ಲಿಯೇ ಕೊಳೆಯಲು ಬಿಡಲಾಗಿತ್ತು. ಇದೀಗ ಇದ್ದಕ್ಕಿದ್ದಂತೆ ವಿತರಣೆ ಆರಂಭಿಸಿರುವುದನ್ನು ಗ್ರಾಮಸ್ಥರಾದ ಮಲ್ಲಿನಾಥ ಮಡಿವಾಳ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಬ್ಬಂದಿಗಳು, "ನಮಗೆ ಏನೂ ಕೇಳಬೇಡಿ, ಮೇಲಾಧಿಕಾರಿಗಳು ಹಂಚಲು ಹೇಳಿದ್ದಾರೆ, ಹಂಚುತ್ತಿದ್ದೇವೆ" ಎಂದು ಉಡಾಫೆಯ ಉತ್ತರ ನೀಡುವ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ.
ಊರಿನಲ್ಲಿ ಕಸ ಸಂಗ್ರಹಿಸಲು ನಿಗದಿತ ವಾಹನವಿದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಜನರ ಪ್ರಮುಖ ದೂರು.ಅಧಿಕೃತ ಚಾಲಕಿ, ಶ್ರೀಮತಿ ರೇಶ್ಮೆ (ವಿನೋದ್ ಚವ್ಹಾಣ್ ಪತ್ನಿ) ವಾಸ್ತವ ಸ್ಥಿತಿ, ಚಾಲಕಿ ಕೆಲಸಕ್ಕೆ ಬರುತ್ತಿಲ್ಲ, ಅವರ ಬದಲಿಗೆ ಪತಿ ವಿನೋದ್ ತಂದೆ ಹರಿಸಿಂಗ್ ಚವ್ಹಾಣ್ ವಾಹನ ಚಾಲನೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, "ನಮ್ಮನ್ನು ಕೇಳಬೇಡಿ, ಮೇಲಾಧಿಕಾರಿಗಳನ್ನು ಕೇಳಿ" ಎನ್ನುವ ಸಿದ್ಧ ಉತ್ತರ ಸಿಗುತ್ತಿದೆ. ವಿಶೇಷವೆಂದರೆ, ಹರಿಸಿಂಗ್ ಚವ್ಹಾಣ್ ಅವರ ತಾಯಿಯೇ ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವುದರಿಂದಲೇ ಈ ರೀತಿಯ ಸ್ವಜನಪಕ್ಷಪಾತ ನಡೆಯುತ್ತಿದೆ ಎಂದು ಸಾರ್ವಜನಿಕರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರಾದ ಸಿದ್ದಲಿಂಗಯ್ಯ ಸ್ವಾಮಿ, ಮಲ್ಲು ಗೌಡ ಮಾಲಿ ಪಾಟೀಲ್, ಆನಂದಗೌಡ ಪೋಲಿಸ್ ಪಾಟೀಲ್, ಶರಣು ಕುಸನೂರ, ಶರಣು ಇಂಧೂರು ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ