ಮಂಗಳವಾರ, ಮಾರ್ಚ್ 10, 2026

ವೆಂಕಟೇಶ ನಗರದಲ್ಲಿ ನೀರಿಗಾಗಿ ಹಾಹಾಕಾರ: ಪುರಸಭೆಗೆ ನಾಗರಿಕರ ಮುತ್ತಿಗೆ.

​ಚಿತ್ತಾಪುರ: ಪಟ್ಟಣದ ವೆಂಕಟೇಶ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ನಿವಾಸಿಗಳು ಮಂಗಳವಾರ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

​ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
​ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿ ದೇವಪ್ಪ ನಂದೂರಕರ್, "ನಮ್ಮ ವಾರ್ಡಿನ ನೀರಿನ ಸಮಸ್ಯೆಯ ಬಗ್ಗೆ ಪುರಸಭೆ ವ್ಯವಸ್ಥಾಪಕರಿಗೆ, ನೀರು ಬಿಡುವವರಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ಎರಡು-ಮೂರು ಬಾರಿ ಲಿಖಿತ ಮನವಿ ನೀಡಿದ್ದರೂ ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಯುತ್ತಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

​ "ತಿಳುವಳಿಕೆಯುಳ್ಳ ನಾವು ಸಮಸ್ಯೆ ಸರಿಯಾಗಬಹುದು ಎಂದು ತಾಳ್ಮೆಯಿಂದ ಕಾಯುತ್ತಿದ್ದೆವು. ಆದರೆ ಈಗ ತಾಳ್ಮೆ ಮೀರಿದೆ. ದಿನ ಬಿಟ್ಟು ದಿನ ಹಣ ತೆತ್ತು ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ಬದುಕು ಸಾಗಿಸುವಂತಾಗಿದೆ. ಇದು ನೀರು ಸರಬರಾಜು ಮಾಡುವವರಿಗೂ ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಇದುವರೆಗೆ ನಮಗೆ ಕೇವಲ 'ಮಂತ್ರದಿಂದ ಮಾವಿನಕಾಯಿ ಉದುರಿಸುವ' ಕೆಲಸ ಮಾಡಲಾಗುತ್ತಿದೆಯೇ ಹೊರತು, ನಲ್ಲಿಗೆ ನೀರು ಬಿಡುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ," ಎಂದು ಅವರು ಹರಿಹಾಯ್ದರು.

​ಸಮಸ್ಯೆ ತಕ್ಷಣವೇ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಕುಟುಂಬದ ಸಮೇತ ಪುರಸಭೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ. "ನಮ್ಮ ಕುಟುಂಬಗಳನ್ನು ಬೀದಿಗೆ ತರಬೇಡಿ, ನಮಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಿ," ಎಂದು ನಿವಾಸಿಗಳು ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ನಿವಾಸಿಗಳಾದ ಮೋನಯ್ಯ ಪಂಚಾಳ, ಹಮೀದ್‌ (ರಿಗಲ್ ಟೇಲರ್), ಸಾಬಣ್ಣ ಕಲಬುರಗಿ, ಹಣಮಂತ ಆಚಾರಿ, ಉದಯಕುಮಾರ ಇಂಗಳೆ, ರಾಘವೇಂದ್ರ ದ್ಯಾವರಳ್ಳಿ, ರೂಪಾ ಪೂಜಾರಿ, ಬೇಬಿ ಗುತ್ತೇದಾರ, ಪ್ರಭಾವತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವೆಂಕಟೇಶ ನಗರದಲ್ಲಿ ನೀರಿಗಾಗಿ ಹಾಹಾಕಾರ: ಪುರಸಭೆಗೆ ನಾಗರಿಕರ ಮುತ್ತಿಗೆ.

​ಚಿತ್ತಾಪುರ: ಪಟ್ಟಣದ ವೆಂಕಟೇಶ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ...