ಬುಧವಾರ, ಮಾರ್ಚ್ 18, 2026

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಎಸ್‌ಡಿಎಂಸಿ ಅಧ್ಯಕ್ಷ

ಚಿತ್ತಾಪುರ: ಮಾರ್ಚ್,18 ಇಂದಿನಿಂದ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಬರೆಯಲು ಚಿತ್ತಾಪುರ ಕೇಂದ್ರಕ್ಕೆ ತೆರಳುವ ಭಾಗೋಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ, ಶಾಲೆಯ ಎಸ್.ಡಿ.ಎಂ.ಸಿ (SDMC) ಅಧ್ಯಕ್ಷರಾದ ದೇವಿಂದ್ರ ಡೋಣಗಾಂವ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತೆರಳಲು ಯಾವುದೇ ರೀತಿಯ ಸಾರಿಗೆ ತೊಂದರೆಯಾಗಬಾರದು ಮತ್ತು ಮಕ್ಕಳು ಸುರಕ್ಷಿತವಾಗಿ ಹೋಗಿ ಬರಬೇಕು ಎಂಬ ಸದುದ್ದೇಶದಿಂದ, ಖಾಸಗಿ ಕ್ರಷರ್ ವಾಹನದ ಅನುಕೂಲ ಮಾಡಿಕೊಟ್ಟಿದ್ದಾರೆ. ಇವರ ಈ ವಿದ್ಯಾರ್ಥಿಪರ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗಣ್ಯರ ಶುಭ ಹಾರೈಕೆ:
ಪರೀಕ್ಷೆಗೆ ತೆರಳುವ ಮುನ್ನ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಊರಿನ ಗಣ್ಯರು ಉಪಸ್ಥಿತರಿದ್ದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಹಾಂತಗೌಡ ಪಾಟೀಲ್ ಹಾಗೂ ಚಿತ್ತಾಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶರಣಗೌಡ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಜೇಂದ್ರಪ್ಪ ಆರಣಕಲ್, ಶರಣಬಸಪ್ಪ ಬೆಂಕಿ, ದೇವಿಂದ್ರ ನಾಟಿಕಾರ್, ರಮೇಶ್ ನೀಲಕಂಠ, ಮಲ್ಲಿಕಾರ್ಜುನ್ ಏರಿ, ಮಹಾಂತಪ್ಪ ಹಾಸಬಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ ಎಂದು ಹಾರೈಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಭಾರೀ ಮಳೆ, ಗುಡುಗು-ಮಿಂಚಿನ ಆರ್ಭಟ: ಜನಜೀವನ ಅಸ್ತವ್ಯಸ್ತ, ಓರಿಯಂಟ್ ಸಿಮೆಂಟ್ ಕಾರ್ಖಾನೆಗೆ ಹಾನಿ.

​ಚಿತ್ರಾಪುರ: ಪಟ್ಟಣ ಸೇರಿ ನಿನ್ನೆ ರಾತ್ರಿ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಸಹಿತ ವರುಣನ ಆರ್ಭಟಕ್ಕೆ ಜನಜೀವನ ಸ...