ಗುರುವಾರ, ಮಾರ್ಚ್ 5, 2026

ಕಾಳಿಕಾ ದೇವಿ ಚರಿತ್ರೆ ಪ್ರವಚನ ಮಹಾಮಂಗಳ: ಭಕ್ತಿ-ಸಂಸ್ಕಾರದ ಬದುಕು ರೂಪಿಸಿಕೊಳ್ಳಲು ಕರೆ.

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಸುಕ್ಷೇತ್ರದ ಕಂಚಗಾರ ಹಳ್ಳದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 22ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಕಾಳಿಕಾ ದೇವಿ ಚರಿತ್ರೆ ಪ್ರವಚನ ಕಾರ್ಯಕ್ರಮದ ಮಹಾಮಂಗಳ ಮಂಗಳವಾರ ಅತ್ಯಂತ ವೈಭವದಿಂದ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು, "ಕಾಳಿಕಾ ದೇವಿಯು ತನ್ನನ್ನು ನಂಬಿದ ಭಕ್ತರನ್ನು ಹರಸುವ ಹಾಗೂ ಪೀಡಿಸುವವರಿಂದ ಕಾಪಾಡುವ ಮಹಾನ್ ಶಕ್ತಿಯಾಗಿದ್ದಾಳೆ. ಈ ಭಾಗದಲ್ಲಿ ಮಲ್ಲಯ್ಯ ಸ್ವಾಮಿಗಳು ಇಂತಹ ಪುರಾಣ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನೀಯ. ಯುವಕರು ವ್ಯಸನಗಳಿಗೆ ಬಲಿಯಾಗದೆ, ಇಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದಿಗ್ಗಾಂವ ಗ್ರಾಮದ ಯುವಕರ ಸೇವೆ ಅಪಾರವಾಗಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಮಳಖೇಡ ದರ್ಗಾದ ಸೈಯದ್ ಮುಸ್ತಫಾ ಖಾದ್ರಿ ಮಾತನಾಡಿ, "ಹುಟ್ಟು ಸಾವಿನ ನಡುವಿನ ಅನಿಶ್ಚಿತ ಬದುಕನ್ನು ಮನುಷ್ಯ ಪವಿತ್ರವಾಗಿ ಕಳೆಯಬೇಕು. ಇಂದಿನ ಪೋಷಕರು ಮಕ್ಕಳಿಗೆ ಮೊಬೈಲ್‌ನಿಂದ ದೂರವಿಟ್ಟು ಉತ್ತಮ ಸಂಸ್ಕಾರ ಮತ್ತು ವಿದ್ಯಾಭ್ಯಾಸ ನೀಡಬೇಕು," ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, "ವಿಶ್ವದ ಹಲವು ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಕವಿಯಲು ಅಲ್ಲಿ ಸರಿಯಾದ ಗುರು ಮಾರ್ಗದರ್ಶನ ಇಲ್ಲದಿರುವುದೇ ಕಾರಣ. ಭಾರತದಲ್ಲಿ ಗುರುಗಳು ಮತ್ತು ಮಠಾಧೀಶರ ಮಾರ್ಗದರ್ಶನದಿಂದಾಗಿ ಶಾಂತಿ ನೆಮ್ಮದಿ ನೆಲೆಸಿದೆ. ತಂದೆ-ತಾಯಿ ಮತ್ತು ಗುರುಗಳ ಮೇಲೆ ಭಕ್ತಿ ಇದ್ದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ," ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಮಲ್ಲಯ್ಯ ಸ್ವಾಮಿಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಪಾಳಾ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು ಕಾಳಿಕಾ ದೇವಿ ಚರಿತ್ರೆ ಕುರಿತು ಪ್ರವಚನ ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದ ಮಲ್ಲಯ್ಯಸ್ವಾಮಿ ಸ್ಥಾವರಮಠ ವಹಿಸಿದ್ದರು.

ವೇದಿಕೆಯಲ್ಲಿ ತೆಂಗಳಿ ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯರು, ತೊಟ್ನಳ್ಳಿ ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯರು, ಶ್ರೀನಿವಾಸ ಸರಡಗಿ, ಶ್ರೀ ಅಪ್ಪಾರಾವದೇವಿ ಮುತ್ಯಾ, ರಾಜಶೇಖರ್ ಪುರಾಣಿಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಜರುಗಿತು.ಅಭೀಶ್ರೀ ವಿಜಯಕುಮಾರ್ ಮತ್ತು ಶಿವನಂದಿ ಸ್ಥಾವರಮಠ ಅವರಿಂದ ಭರತನಾಟ್ಯ, ವಿನೋದಕುಮಾರ ದಸ್ತಾಪೂರ ಅವರಿಂದ ಸಂಗೀತ ಸೇವೆ ಹಾಗೂ ಷಣ್ಮುಖಯ್ಯ ಸ್ವಾಮಿ ಮಠಪತಿ ಅವರಿಂದ ತಬಲಾ ಸೇವೆ ನಡೆಯಿತು.ಸಂಜೆ ಪುರವಂತರ ಆಟ ಮತ್ತು ಮಂಗಳ ವಾದ್ಯಗಳೊಂದಿಗೆ ಭವ್ಯ ಪಲ್ಲಕ್ಕಿ ಉತ್ಸವ ಜರುಗಿತು.

ಕಾರ್ಯಕ್ರಮದಲ್ಲಿ ಶರಣಯ್ಯ ಸ್ವಾಮಿ ಸ್ಥಾವರಮಠ ಸ್ವಾಗತಿಸಿದರು, ಶಂಭುಲಿಂಗ ಸಂಗಾವಿ ನಿರೂಪಿಸಿದರು. ಗ್ರಾಮದ ಹಿರಿಯರು, ಯುವಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬಂಜಾರ ಸಮಾಜದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ.

ಚಿತ್ತಾಪುರ: ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಮನೆಗಳ ಹಕ...