ಚಿತ್ತಾಪುರ: ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇಲ್ಲಿನ ಮುಸ್ಲಿಂ ಸಮುದಾಯದ ಕುಟುಂಬವೊಂದು ಪಟ್ಟಣದ ಗೋಶಾಲೆಗೆ ಮೇವು ಮತ್ತು ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆಗೆ ಅಪೂರ್ವ ಉದಾಹರಣೆಯಾಗಿ ಮೂಡಿಬಂದಿದೆ.
ಪಟ್ಟಣದ ಮುಸ್ಲಿಂ ಸಮುದಾಯದ ಪ್ರಮುಖರಾದ ಸೈಯದ್ ಜಾಫರ್ ಉಲ್ ಹಾಸನ್ ಅವರು ತಮ್ಮ ತಂದೆ ಸೈಯದ್ ಆಫೀಸ್ ಫುಲ್ ಹಸನ್, ತಾಯಿ ಸೈದಾ ಕೌಸರ್ ಆಫೀಸ್ ಹಾಗೂ ಸಹೋದರಿ ಸೆಮಿನ ಬೇಗಂ ಅವರ ಪವಿತ್ರ ಸ್ಮರಣಾರ್ಥವಾಗಿ ಪಟ್ಟಣದ ಗೋಶಾಲೆಗೆ ಭೇಟಿ ನೀಡಿ, ಗೋವುಗಳ ಹಸಿವು ನೀಗಿಸಲು ಒಂದು ಟ್ರ್ಯಾಕ್ಟರ್ ಕಣಕಿ (ಒಣಮೇವು) ಹಾಗೂ ಗೋವುಗಳ ಇತರ ಮೇವಿನ ಖರ್ಚಿಗಾಗಿ ೨೫. (ಇಪ್ಪತ್ತೈದು ಸಾವಿರ) ರೂಪಾಯಿಗಳ ನಗದು ದೇಣಿಗೆಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಕಾಂಬಳೆಶ್ವರ ಮಠದ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮುಸ್ಲಿಂ ಕುಟುಂಬದ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
"ಇವತ್ತಿನ ಆಧುನಿಕ ದಿನಗಳಲ್ಲಿ ಹಬ್ಬ ಹರಿದಿನಗಳ ಹೆಸರಿನಲ್ಲಿ ಮೂಕಪ್ರಾಣಿಗಳಾದ ಗೋವುಗಳನ್ನು ಕಡಿಯುವುದನ್ನು, ಹಿಂಸಿಸುವುದನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಆದರೆ, ಇಂದಿನ ಬಕ್ರೀದ್ ಹಬ್ಬದ ಪವಿತ್ರ ದಿನದಂದು ಮುಸ್ಲಿಂ ಸಮುದಾಯದ ಸೈಯದ್ ಜಾಫರ್ ಉಲ್ ಹಾಸನ್ ಅವರ ಕುಟುಂಬವು ತಮ್ಮ ಹಿರಿಯರ ಸ್ಮರಣಾರ್ಥವಾಗಿ ಚಿತ್ತಾಪುರದ ಗೋಶಾಲೆಗೆ ಬಂದು ಗೋವುಗಳ ರಕ್ಷಣೆಗೆ ಧಾವಿಸಿರುವುದು, ಅವುಗಳಿಗೆ ಮೇವು ಮತ್ತು ಸಹಾಯ ಹಸ್ತ ಚಾಚಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಇಂದಿನ ಸಮಾಜಕ್ಕೆ ಅತ್ಯಂತ ಮಾದರಿಯಾಗಿದೆ," ಎಂದು ಶ್ರೀಗಳು ನುಡಿದರು.
ಮುಂದುವರಿದು ಮಾತನಾಡಿದ ಶ್ರೀಗಳು, "ಧರ್ಮ ಯಾವುದಾದರೂ ಮಾನವೀಯತೆ ಮತ್ತು ಪ್ರಾಣಿ ದಯೆ ಎಲ್ಲಕ್ಕಿಂತ ದೊಡ್ಡದು. ಸಮಾಜದಲ್ಲಿ ಇಂತಹ ಸೌಹಾರ್ದಯುತ ಚಿಂತನೆಗಳು ಹೆಚ್ಚಾಗಬೇಕು. ಗೋವುಗಳನ್ನು ಕಡಿಯುವ ಕೈಗಳ ಮಧ್ಯೆ, ಗೋವುಗಳನ್ನು ಕಾಯುವ ಮತ್ತು ಅವುಗಳ ಹಸಿವು ನೀಗಿಸುವ ಇಂತಹ ಉದಾತ್ತ ಮನಸ್ಸುಗಳನ್ನು ನಾವಿಂದು ನೋಡುತ್ತಿರುವುದು ಸಂತಸ ತಂದಿದೆ. ಈ ಕುಟುಂಬದ ಸತ್ಕಾರ್ಯ ಚಿತ್ತಾಪುರ ತಾಲೂಕಷ್ಟೇ ಅಲ್ಲದೆ ಇಡೀ ಸಮಾಜಕ್ಕೆ ಪ್ರೇರಣೆಯಾಗಲಿ," ಎಂದು ಹರಸಿದರು.
ಈ ಅಪೂರ್ವ ಸೌಹಾರ್ದತೆಯ ಸಂದರ್ಭದಲ್ಲಿ ಗೋಶಾಲೆ ಅಧ್ಯಕ್ಷರಾದ ರಮೇಶ್ ಬೊಮ್ಮನಹಳ್ಳಿ, ಪ್ರಮುಖರಾದ ಧನರಾಜ್ ದೇಶಪಾಂಡೆ, ಮಲ್ಲಿಕಾರ್ಜುನ್ ರೆಡ್ಡಿ ಇಜಾರ, ಶ್ರೀಮತಿ ಲಕ್ಷ್ಮಿ ಮಟ್ಟಿ, ನಟರಾಜ್ ಶಿಲ್ಪಿ, ಮಂಜುನಾಥ್ ಶಾಸ್ತ್ರಿ, ಗೋಪಾಲಕರಾದ ಚನ್ನಬಸಪ್ಪ, ಆಕಾಶ್ ಸೇರಿದಂತೆ ಇತರ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಜಾಫರ್ ಉಲ್ ಹಾಸನ್ ಕುಟುಂಬದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ