ಚಿತ್ತಾಪುರ: ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ, ತಿಪ್ಪಣ್ಣಪ್ಪ ಕಮಕನೂರ ಅವರ ರಾಜೀನಾಮೆಯಿಂದ ತೆರವಾಗಿರುವ ಖಾಲಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ, ಹಿರಿಯ ಕಲ್ಯಾಣ ಕರ್ನಾಟಕದ ನಾಯಕ ಭೀಮಣ್ಣ ಸಾಲಿ ಅವರಿಗೆ ನಾಮನಿರ್ದೇಶನ ಮಾಡಬೇಕು ಎಂದು ತಾಲೂಕು ಕೋಲಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರಮುಖ ಕೇಂದ್ರವಾದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಕೋಲಿ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡರುಗಳು ಪಾಲ್ಗೊಂಡು ಭೀಮಣ್ಣ ಸಾಲಿ ಅವರ ರಾಜಕೀಯ ಹೋರಾಟ ಮತ್ತು ಅರ್ಹತೆಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿ, ಈ ಬಾರಿ ಚಿತ್ತಾಪುರ ತಾಲೂಕಿಗೆ ಹಾಗೂ ಕೋಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಲೇಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಿದ ಹಿರಿಯ ಮುಖಂಡ ಬಸವರಾಜ ಚಿನ್ನಮಳ್ಳಿ ಅವರು, "ಭೀಮಣ್ಣ ಸಾಲಿ ಅವರು ಕೇವಲ ನಾಯಕರಲ್ಲ, ಅವರು ಕಳೆದ 1976 ರಿಂದ ಇಂದಿನವರೆಗೆ ಸತತ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಪಕ್ಷದ ಸಂಘಟನೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ತಳಮಟ್ಟದ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅವರು ಪಕ್ಷದ ಸಾಮಾನ್ಯ ಸದಸ್ಯರಾಗಿ, ತಾಲೂಕು ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಹಗಲಿರುಳು ಶ್ರಮಿಸಿದ್ದಾರೆ. ಕಳೆದ 2009 ರಿಂದ ಸುದೀರ್ಘ ಅವಧಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂತಹ ಹಿರಿಯ ಜೀವದ ನಿಷ್ಠೆಯನ್ನು ಪರಿಗಣಿಸಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭೀಮಣ್ಣ ಸಾಲಿ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಲು (MLC) ತಕ್ಷಣವೇ ಅವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿದರು.
ಮತ್ತೊಬ್ಬ ಹಿರಿಯ ಮುಖಂಡ ಹಣಮಂತ ಸಂಕನೂರ ಮಾತನಾಡಿ, "ಕಳೆದ ಅರ್ಧ ಶತಮಾನದಿಂದ ಕಾಂಗ್ರೆಸ್ ತತ್ವ ಸಿದ್ಧಾಂತಗಳಲ್ಲೇ ಬದುಕುತ್ತಿರುವ ಸಾಲಿ ಅವರಿಗೆ ರಾಜಕಾರಣ ಮತ್ತು ಸಮಾಜ ಸೇವೆಯನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರು ಈ ಹಿಂದೆ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನದ ಸಮಿತಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ, ನಗರ ಆಶ್ರಯ ಸಮಿತಿ ಸದಸ್ಯರಾಗಿ ಮತ್ತು ಕೇಂದ್ರ ಸರ್ಕಾರದ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಜನಪರ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, 21 ತಿಂಗಳುಗಳ ಕಾಲ ಕೆ.ಕೆ.ಆರ್.ಟಿ.ಸಿ (KKRTC) ನಿಗಮದ ಅಧ್ಯಕ್ಷರಾಗಿ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೀರ್ತಿ ಅವರಿಗಿದೆ. ಇಂತಹ ರಾಜಕೀಯ ಮುತ್ಸದ್ದಿತನ ಮತ್ತು ಜನಪ್ರಿಯತೆ ಹೊಂದಿರುವ ನಾಯಕನಿಗೆ ಎಂಎಲ್‌ಸಿ ಸ್ಥಾನ ನೀಡುವುದು ಸೂಕ್ತ" ಎಂದರು.
ತಾಲೂಕು ಗೌರವಾಧ್ಯಕ್ಷ ರಾಮಲಿಂಗ ಬಾನರ್ ಅವರು ಮಾತನಾಡಿ, ಭೌಗೋಳಿಕ ಮತ್ತು ರಾಜಕೀಯವಾಗಿ ಚಿತ್ತಾಪುರ ದೊಡ್ಡದಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ವಿಧಾನ ಪರಿಷತ್ತಿನಲ್ಲಿ ಸೂಕ್ತ ಅವಕಾಶ ಸಿಕ್ಕಿಲ್ಲ. ಆದರೆ ನೆರೆಯ ಕಾಳಗಿ ತಾಲೂಕಿನ ಹಿಂದುಳಿದ ಇಬ್ಬರು ನಾಯಕರಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಈ ಬಾರಿ ಅತ್ಯಂತ ಹಿಂದುಳಿದ ಕೋಲಿ ಸಮಾಜದ ಹಿರಿಯ ನಾಯಕರಾದ, ಎಲ್ಲಾ ಧರ್ಮ, ಜಾತಿ, ಜನಾಂಗದವರೊಂದಿಗೆ ಸೌಹಾರ್ದಯುತ ಉತ್ತಮ ಬಾಂಧವ್ಯ ಹೊಂದಿರುವ ಭೀಮಣ್ಣ ಸಾಲಿ ಅವರಿಗೆ ಕಮಕನೂರ ಅವರ ಖಾಲಿ ಸ್ಥಾನವನ್ನು ನೀಡಬೇಕು. ಆ ಮೂಲಕ ತಾಲೂಕಿನ ಇಡೀ ಕೋಲಿ ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಮಾತನಾಡಿ, "ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿಧಾನಸಭಾ, ವಿಧಾನ ಪರಿಷತ್ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗರಿಷ್ಠ ಲೀಡ್ (ಮತಗಳು) ಸಿಗುವಂತೆ ಮಾಡಿ, ಪಕ್ಷದ ವಿಜಯ ಪತಾಕೆ ಹಾರಿಸುವಲ್ಲಿ ಸಾಲಿ ಅವರ ಪಾತ್ರ ಅನನ್ಯವಾಗಿದೆ. ತಮ್ಮ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದಿಂದ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವರು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ವಿರೋಧ ಪಕ್ಷದವರೂ ಕೂಡ ಗೌರವಿಸುವಂತೆ ನಡೆದುಕೊಂಡು ನಿಜವಾದ 'ಅಜಾತಶತ್ರು' ಎನಿಸಿಕೊಂಡಿದ್ದಾರೆ. ಈ ಎಲ್ಲಾ ಅರ್ಹತೆಗಳನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಈ ಬಾರಿ ಅವರಿಗೆ ಟಿಕೆಟ್ ನೀಡಲೇಬೇಕು" ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಕಾಂಗ್ರೆಸ್ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ, ಪ್ರಮುಖ ಮುಖಂಡರುಗಳಾದ ಶರಣಪ್ಪ ನಾಶಿ, ರಾಜೇಂದ್ರಪ್ಪ ಅರಣಕಲ್, ಭೀಮರಾಯ ಹೊತಿನಮಡಿ, ಇಂದುಶೇಖರ ಬೆಂಕಿ, ಮುನಿಯಪ್ಪ ಕೊಳ್ಳಿ, ನಾಗೇಂದ್ರ ಜೈಗಂಗಾ, ಶ್ರೀಶೈಲ್ ಇಂಗಳಗಿ, ಲಕ್ಷ್ಮೀಕಾಂತ ಸಾಲಿ, ಸಿದ್ದಣ್ಣ ನಾಲವಾರ, ವಿಶ್ವನಾಥ ಕುಂಬಾರ, ಶರಣು ಡೋಣಗಾಂವ, ಕರಣಕುಮಾರ ಅಲ್ಲೂರ, ಬಸವರಾಜ ಜಕಾತಿ, ಸಂತೋಷ ಮಳಬಾ, ಸಿದ್ದು ದಂಡೋತಿ, ಅಶೋಕ ದ್ವಾರನಳ್ಳಿ, ಹಣಮಂತ ಕಟ್ಟಿ, ಗಂಗೂ ಡಿಗ್ಗಿ, ದೇವಿಂದ್ರ ಕದ್ದರ್ಗಿ, ಬಸವರಾಜ ಮೈನಾಳಕರ್, ಮಲ್ಲು ಸಂಗಾವಿ, ಬೀಮರಾಯ ಅಂಬಾರ, ಮಲ್ಲು ಬನಪೂರ, ಮಲ್ಲು ಕೋಳಕೂರ, ಕಿಶೋರ ಬೆಳಗುಂಪಾ, ಶರಣು ಹಾಸಬಾ ಸೇರಿದಂತೆ ಕೋಲಿ ಸಮಾಜ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಸಕ್ರಿಯ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿ ಭೀಮಣ್ಣ ಸಾಲಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ