ಬಿಜೆಪಿಯವರು ಆರ್.ಎಸ್.ಎಸ್ ಚಸ್ಮಾ ತೆಗೆದು ಸಂವಿಧಾನದ ಚಸ್ಮಾ ಹಾಕಿಕೊಳ್ಳಲಿ: ಮಲ್ಲಿಕಾರ್ಜುನ ಕಾಳಗಿ ತಿರುಗೇಟು

ಚಿತ್ತಾಪುರ: "ಬಿಜೆಪಿಯವರು ತಮ್ಮ ಕಣ್ಣಿಗೆ ಹಾಕಿಕೊಂಡಿರುವ ಆ‌ರ್.ಎಸ್.ಎಸ್ ಚಸ್ಮಾವನ್ನು ಮೊದಲು ತೆಗೆದು, ಸಂವಿಧಾನ ಎಂಬ ಚಸ್ಮಾ ಹಾಕಿಕೊಳ್ಳಬೇಕು" ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಆಕ್ರೋಶ ಹೊರಹಾಕಿದ್ದಾರೆ.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಸಂಘ-ಸಂಸ್ಥೆಗಳಿದ್ದರೂ ಅವು ಕಾನೂನುಬದ್ಧವಾಗಿ ನೋಂದಣಿ ಆಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ಸಚಿವರ ಅವಿರತ ಶ್ರಮದಿಂದ ಚಿತ್ತಾಪುರ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದರೂ, ಸುಖಾಸುಮ್ಮನೆ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ವಿರೋಧ ಪಕ್ಷದವರು ಲಾಂಗು ಲಗಾಮು ಇಟ್ಟುಕೊಂಡು ಮಾತನಾಡಬೇಕು" ಎಂದು ಅವರು ಎಚ್ಚರಿಸಿದರು.

"ಬಾಹರಪೇಟೆಯ ದಲಿತರ ಏರಿಯಾದಲ್ಲಿ ಮಳೆಗಾಲದ ಸಮಯದಲ್ಲಿ ರುದ್ರಭೂಮಿ ರಸ್ತೆಯಲ್ಲಿ ಮಳೆ ನೀರು ತುಂಬಿ ಅಂತಿಮ ಸಂಸ್ಕಾರಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ಹೀಗಾಗಿ ಇಲ್ಲೊಂದು ಬ್ರಿಜ್ ನಿರ್ಮಾಣ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಲಾಗಿತ್ತು. ಸಚಿವರು ತಕ್ಷಣ ಸ್ಪಂದಿಸಿ ಬ್ರಿಜ್ ಮಂಜೂರು ಮಾಡಿದ್ದಾರೆ. ಆದರೆ ದಲಿತರ ಏರಿಯಾ ಅಭಿವೃದ್ಧಿ ಆಗಬಾರದು ಎನ್ನುವ ಮನುಸ್ಮೃತಿ ಬುದ್ಧಿಯನ್ನು ಬಿಜೆಪಿಯವರು ಬಿಡಬೇಕು. ಕೇಂದ್ರ ಸರ್ಕಾರ ಹಣ ನೀಡದ ಕಾರಣ ಕೆಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ನಿಜವಾಗಿಯೂ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸೂಕ್ತ ಸಲಹೆಗಳನ್ನು ನೀಡಲಿ." 

- ಮಲ್ಲಿಕಾರ್ಜುನ ಕಾಳಗಿ

ಕಾಮಗಾರಿಗಳ ಗುಣಮಟ್ಟದ ಕುರಿತು ಮಾತನಾಡಿದ ಅವರು, "ಕಳಪೆ ಎಂದರೆ ಏನು, ಅದರ ಅರ್ಥ ಗೊತ್ತಿದೆಯೇ? ಯಾವುದೇ ಕಾಮಗಾರಿ ಇರಲಿ, ಅಲ್ಲಿ ಥರ್ಡ್ ಪಾರ್ಟಿ ತಪಾಸಣೆ ಇರುತ್ತದೆ. ಯಾವುದರ ಬಗ್ಗೆಯಾದರೂ ಮಾತನಾಡುವ ಮುನ್ನ ಪೂರ್ವ ತಯಾರಿ ಮಾಡಿಕೊಂಡು ಮಾತನಾಡುವುದನ್ನು ಕಲಿಯಿರಿ" ಎಂದು ಕಿವಿಮಾತು ಹೇಳಿದರು. ಇದೇ ವೇಳೆ, ಚಿತ್ತಾವಲಿ ವೃತ್ತದಿಂದ ಹೊಸ ಕೋರ್ಟ್ ರಸ್ತೆ ಕಾಮಗಾರಿ ಒಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ ಮಾತನಾಡಿ, "ಸ್ಟೇಷನ್‌ ತಾಂಡಾದಲ್ಲಿ 'ಚೇಂಜ್ ಆಫ್ ವರ್ಕ್' (ಕೆಲಸದ ಮಾರ್ಪಾಡು) ನಿಂದಾಗಿ ಸಿಸಿ ರಸ್ತೆ ಹಾಗೂ ಸೇವಾಲಾಲ್‌ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ತಾಂತ್ರಿಕ ಕಾರಣದಿಂದಾಗಿ ಕೆಲಸ ಸ್ವಲ್ಪ ವಿಳಂಬವಾಗಿದೆ ಅಷ್ಟೆ. ಚಿತ್ತಾಪುರದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ಕಾರಿ ಕನ್ಯಾ ಪ್ರೌಢ ಶಾಲೆ, ದಂಡೋತಿ ಬ್ರಿಜ್ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತಿವೆ" ಎಂದು ಸ್ಪಷ್ಟಪಡಿಸಿದರು.

ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ಬುಳಕರ್‌ ಮಾತನಾಡಿ, "ಆಡು ಮುಟ್ಟದ ಸೊಪ್ಪಿಲ್ಲ, ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡದ ಕೆಲಸಗಳಿಲ್ಲ ಎನ್ನುವಂತೆ ಚಿತ್ತಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸಿದ್ದಾರೆ. 'ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ' ಎನ್ನುವುದಕ್ಕೆ ಸಾಕ್ಷಾತ್ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯೇ ನಮ್ಮ ಕಣ್ಣಮುಂದಿದೆ" ಎಂದು ಶ್ಲಾಘಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم