ಅನಧಿಕೃತ ಮತದಾರರ ಫಾರ್ಮ್ ಭರ್ತಿ ಶಿಬಿರ: ತನಿಖೆಗೆ ಮಣಿಕಂಠ ರಾಠೋಡ್ ಆಗ್ರಹ.

ಚಿತ್ತಾಪುರ: ಭಾರತೀಯ ಚುನಾವಣಾ ಆಯೋಗದ ಯಾವುದೇ ಅನುಮತಿ ಇಲ್ಲದೆ, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಎಸ್‌ಐಆರ್ (SIR - ವಿಶೇಷ ತೀವ್ರ ಪರಿಷ್ಕರಣೆ) ಫಾರ್ಮ್ ಭರ್ತಿ ಮಾಡುವ ಶಿಬಿರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅಧಿಕೃತವಾಗಿ ಇಮೇಲ್ ಮೂಲಕ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

"ಜುಲೈ 5 ರಂದು ಚಿತ್ತಾಪುರದ ಮರ್ಕಜ್ ಮಸೀದಿ ಎದುರಿನ ಮದ್ರಸಾದಲ್ಲಿ 'ಜಮೀಯತ್-ಎ-ಅಹ್ಲೆ ಹದೀಸ್' ಎಂಬ ಖಾಸಗಿ ಸಂಸ್ಥೆಯು ಸಾರ್ವಜನಿಕವಾಗಿ ಎಸ್‌ಐಆರ್ ಫಾರ್ಮ್ ಭರ್ತಿ ಮಾಡುವ ಶಿಬಿರವನ್ನು ಆಯೋಜಿಸಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಫಾರ್ಮ್ ಸಂಗ್ರಹಣೆ ಎನ್ನುವುದು ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ನಡೆಯಬೇಕಾದ ಅತ್ಯಂತ ಜವಾಬ್ದಾರಿಯುತ ಮತ್ತು ಅಧಿಕೃತ ಪ್ರಕ್ರಿಯೆಯಾಗಿದೆ. ಆದರೆ, ನಾನು ಸ್ವತಃ ಈ ಶಿಬಿರಕ್ಕೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳಾಗಲಿ, ಬೂತ್ ಮಟ್ಟದ ಅಧಿಕಾರಿಗಳಾಗಲಿ (BLO) ಇರಲಿಲ್ಲ. ಕೇವಲ ಖಾಸಗಿ ವ್ಯಕ್ತಿಗಳು ಸೇರಿಕೊಂಡು ಸಾರ್ವಜನಿಕರಿಂದ ಮತದಾರರ ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು," ಎಂದು ಮಣಿಕಂಠ ರಾಠೋಡ್ ಆತಂಕ ವ್ಯಕ್ತಪಡಿಸಿದರು.

ಖಾಸಗಿ ವ್ಯಕ್ತಿಗಳು ಈ ರೀತಿ ಮತದಾರರ ಡೇಟಾ ಸಂಗ್ರಹಿಸುತ್ತಿರುವುದು ಕಾನೂನುಬಾಹಿರವಾಗಿದ್ದು, ಇದರ ಹಿಂದೆ ಮತದಾರರ ಮಾಹಿತಿ ದುರುಪಯೋಗ ಪಡಿಸಿಕೊಳ್ಳುವ ದೊಡ್ಡ ಸಂಚು ಇರುವ ಸಾಧ್ಯತೆ ಇದೆ ಎಂದು ಅವರು ಶಂಕಿಸಿದರು.

"ಈ ಶಿಬಿರಕ್ಕೆ ಚುನಾವಣಾ ಆಯೋಗದ ಅಧಿಕೃತ ಅನುಮತಿ ಇತ್ತೇ? ಖಾಸಗಿ ವ್ಯಕ್ತಿಗಳಿಗೆ ಇಂತಹ ಸೂಕ್ಷ್ಮ ದಾಖಲೆಗಳನ್ನು ಸಂಗ್ರಹಿಸಲು ಯಾರು ಅಧಿಕಾರ ನೀಡಿದ್ದಾರೆ? ಈ ಚಟುವಟಿಕೆಗಳು ಜನಪ್ರತಿನಿಧಿ ಕಾಯ್ದೆ 1950 ರ ನಿಯಮಗಳನ್ನು ಉಲ್ಲಂಘಿಸುತ್ತವೆಯೇ? ಎಂಬ ಮುಂತಾದ ಅಂಶಗಳ ಕುರಿತು ಚುನಾವಣಾ ಆಯೋಗವು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಪೋಸ್ಟರ್ ಆಧಾರಗಳನ್ನು ಈಗಾಗಲೇ ಅಧಿಕಾರಿಗಳಿಗೆ ನೀಡಲಾಗಿದೆ," ಎಂದು ಅವರು ತಿಳಿಸಿದರು.

ಒಂದು ವೇಳೆ ಇದರಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಆಯೋಜಕರ ವಿರುದ್ಧ ಕಠಿಣ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮಣಿಕಂಠ ರಾಠೋಡ್ ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ರವಿಂದ್ರ ಸಜ್ಜನ್ ಶೆಟ್ಟಿ, ವಕೀಲರಾದ ಅಶ್ವಥ್ ರಾಠೋಡ್, ಮಹ್ಮದ್ ಯುನೂಸ್, ವಿಜಯ ಪಾಟೀಲ್, ಪಾಂಡು ಚವ್ಹಾಣ್ ಇತರರು ಇದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم