ಕಾಮಗಾರಿ ಗುಣಮಟ್ಟದಲ್ಲಿ ಲೋಪವಾದರೆ ಸಹಿಸಲ್ಲ: ಮುಖ್ಯಾಧಿಕಾರಿ ಎಚ್ಚರಿಕೆ!

ಚಿತ್ತಾಪುರ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕಾಂಪೌಂಡ್ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟದಿಂದ ಕಾಯ್ದುಕೊಂಡು, ನಿಗದಿಪಡಿಸಿದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದರು.

ಪಟ್ಟಣದ ಪ್ರಮುಖ ಕೇಂದ್ರಸ್ಥಾನವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಗರೋತ್ಥಾನ ಫೇಸ್-4 ವಿಶೇಷ ಅನುದಾನ ಯೋಜನೆಯಡಿ ರೂ. 50 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಂಬೇಡ್ಕರ್ ಪುತ್ಥಳಿಯ ಸುತ್ತಲಿನ ಕಾಂಪೌಂಡ್ ನಿರ್ಮಾಣ ಹಾಗೂ ಸೌಂದರ್ಯೀಕರಣ ಕಾಮಗಾರಿಗೆ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡದ "ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರಮುಖವಾಗಿದ್ದು, ಸುಸಜ್ಜಿತ, ಅತ್ಯಂತ ಸುಂದರ ಹಾಗೂ ಬಾಳಿಕೆ ಬರುವಂತಹ ಕಾಂಪೌಂಡ್ ನಿರ್ಮಿಸಬೇಕು. ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ಕಳಪೆತನಕ್ಕೆ ಆಸ್ಪದ ನೀಡಬಾರದು" ಎಂದು ಅವರು ಎಚ್ಚರಿಸಿದರು.

ಇದೇ ವೇಳೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, "ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಸುತ್ತ ಹೊಸ ಕಾಂಪೌಂಡ್ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಕ್ಷೇತ್ರದ ಶಾಸಕರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಿಯಾಂಕ್ ಖರ್ಗೆ ಅವರಿಗೆ ನಾವು ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಸಚಿವರು ಅನುದಾನ ಮಂಜೂರು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳು" ಎಂದರು.

ಮುಂದುವರಿದು ಮಾತನಾಡಿದ ಅವರು, "ಪ್ರಸ್ತುತ ಇರುವ ಪುತ್ಥಳಿಯ ಜಾಗದಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಬೃಹತ್ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಸ್ಥಾಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶೀಘ್ರದಲ್ಲೇ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಮಾಡಲಾಗುವುದು. ಪ್ರಸ್ತುತ ಆರಂಭವಾಗಿರುವ ಕಾಂಪೌಂಡ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗದೆ ಅತ್ಯುನ್ನತ ಗುಣಮಟ್ಟದಲ್ಲಿ ಸಾಗಬೇಕು" ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ್ ಬೆಣ್ಣೂರಕರ್, ಪ್ರಮುಖರಾದ ಶ್ರೀಕಾಂತ್ ಸಿಂಧೆ, ಜಗನ್ನಾಥ್ ಮೂಡಬೂಳಕರ್, ದೇವೇಂದ್ರ ಕುಮಸಿ, ರಾಜಪ್ಪ ಹುಂಡೇಕರ್, ನಾಗು ಕಲ್ಲಕ್, ನಾಗೇಂದ್ರ ಬುರ್ಲಿ, ಮಲ್ಲಿಕಾರ್ಜುನ ಕಲ್ಮರಿ, ಬಸವರಾಜ್ ಮೂಡಬೂಳಕರ್, ಕಾರ್ತಿಕ್ ಕಲ್ಲಕ್, ಶಿವು ಅರಬೋಳ, ಪುರಸಭೆ ಜೆಯಿ ಭೀಮರಾವ್ ಪಾಟೀಲ, ಸಿಬ್ಬಂದಿಗಳಾದ ಲೋಹಿತ್ ಕಟ್ಟಿಮನಿ, ರಾಜಕುಮಾರ ಸೇರಿದಂತೆ ಹಲವು ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು