ಚಿತ್ತಾಪೂರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಹಾಗೂ ತಾಲೂಕು ಆಡಳಿತದ ವತಿಯಿಂದ 2026-27ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 15, 2026ರಂದು ಬೆಳಿಗ್ಗೆ 9:00 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾಂಗಣ ವ್ಯವಸ್ಥಾಪಕರಾದ ಮರಿಯಪ್ಪ ಬೊಮ್ಮನಳಿಕರ್ ತಿಳಿಸಿದ್ದಾರೆ.
ಪುರುಷ ಮತ್ತು ಮಹಿಳೆಯರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಭಾಗವಹಿಸುವ ಕ್ರೀಡಾಪಟುಗಳು https://dasaracmcup.in/ ಜಾಲತಾಣದ ಮೂಲಕ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಿಗೆ ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ನೋಂದಣಿ ಆಗದ ಕ್ರೀಡಾಪಟುಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.
ಕ್ರೀಡಾಪಟುಗಳು ಸ್ವ-ಇಚ್ಛೆಯಿಂದ ಭಾಗವಹಿಸಬೇಕು ಹಾಗೂ ಕರ್ನಾಟಕದ ನಿವಾಸಿಗಳಾಗಿರಬೇಕು (ರಕ್ಷಣಾ ಪಡೆ ಮತ್ತು ಅರೆ ರಕ್ಷಣಾ ಪಡೆಗೆ ಸೇರಿದವರಿಗೆ ಅವಕಾಶವಿರುವುದಿಲ್ಲ). ಒಬ್ಬ ಕ್ರೀಡಾಪಟು ಅಥವಾ ತಂಡ ಒಂದು ಬಾರಿ ತಾಲೂಕು/ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ, ಮತ್ತೆ ಬೇರೆ ತಾಲೂಕು ಅಥವಾ ಜಿಲ್ಲೆಯಲ್ಲಿ ಭಾಗವಹಿಸುವಂತಿಲ್ಲ.
ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿದ್ದಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ಅಥವಾ ದಿನಭತ್ಯೆ ನೀಡಲಾಗುವುದಿಲ್ಲ. ಕ್ರೀಡಾಪಟುಗಳು ಆನ್‌ಲೈನ್ ನೋಂದಣಿ ಜೆರಾಕ್ಸ್ ಎರಡು ಪ್ರತಿಯನ್ನು ಆಯೋಜಕರಿಗೆ ಸಲ್ಲಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕ್ರೀಡಾಂಗಣ ವ್ಯವಸ್ಥಾಪಕ (ಮೊ.ಸಂ: 9945230160) ಅವರನ್ನು ಸಂಪರ್ಕಿಸಬಹುದಾಗಿದೆ.