371(ಜೆ) ಕಲಂ ಕುರಿತು ಎನ್. ರವಿಕುಮಾರ್ ಹೇಳಿಕೆಗೆ ಮಲ್ಲಿಕಾರ್ಜುನ ಕಾಳಗಿ ಆಕ್ರೋಶ.

ಚಿತ್ತಾಪುರ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಪರ ಮತ ಯಾಚನೆ ಮಾಡುವ ವೇಳೆ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು "371(ಜೆ) ಕಲಂ ಜಾರಿಯಿಂದ ಈ ಭಾಗಕ್ಕೆ ನಯಾಪೈಸೆ ಉಪಯೋಗವಿಲ್ಲವೆಂದು ಹೇಳಿಕೆ ನೀಡಿರುವುದನ್ನು ಉಘ್ರವಾಗಿ ಖಂಡಿಸುತ್ತೇವೆ ಎಂದು  ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಗಂಧಗಾಳಿ ಗೋತ್ತರದ ರವಿಕುಮಾರ ಅವರು ಚುನಾವಣಾ ಗಿಮಿಕ್ ಗೋಸ್ಕರ ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ 371(ಜೆ) ಜಾರಿಯಾಗಿದ್ದರಿಂದ ಈ ಭಾಗದ ಕೆಎಎಸ್, ಪಿಎಸ್ಐ ಸೇರಿದಂತೆ ಉನ್ನತ ಹುದ್ದೆಗಳು ಮತ್ತು ನೂರಾರು ವಿದ್ಯಾರ್ಥಿಗಳ ವೈದ್ಯಕೀಯ, ಇಂಜಿನಿಯರಿಂಗ್ ಇಂತಹ ಕೋರ್ಸ್ ಗಳು ಪಡೆಯಲು ಸಾಧ್ಯವಾಗುತ್ತಿದೆ ಇದನ್ನು ಸಹಿಸದ ರವಿಕುಮಾರ ರವರು ಆರೋಪ ಮಾಡುವುದು ಅಲ್ಲದೆ  ಈ ಕಲಂನ ನೈಜ ಮಹತ್ವವನ್ನು ಅರಿಯದೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.

ಸಂವಿಧಾನದ 371(ಜೆ) ತಿದ್ದುಪಡಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಸಿಕ್ಕು ಉನ್ನತ ವ್ಯಾಸಂಗ ಮಾಡಲು ನೆರವಾಗಿದೆ. ಜೊತೆಗೆ, ನಿಯಮಾನುಸಾರ ಸ್ಥಳೀಯ ಯುವಕ-ಯುವತಿಯರಿಗೆ ಸರ್ಕಾರಿ ಹುದ್ದೆಗಳಲ್ಲಿ ಆದ್ಯತೆ ದೊರೆತು ಉದ್ಯೋಗಾವಕಾಶಗಳು ಲಭಿಸಿವೆ," ಎಂದು ಪ್ರತಿಪಾದಿಸಿದರು.

"ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ದಶಕಗಳ ಹಿಂದುಳಿತನವನ್ನು ನಿವಾರಿಸುವ ಸದುದ್ದೇಶದಿಂದ ಜಾರಿಗೆ ಬಂದ ಈ ಸಂವಿಧಾನಾತ್ಮಕ ಹಕ್ಕನ್ನು 'ಉಪಯೋಗವಿಲ್ಲದ್ದು' ಎಂದು ಕರೆಯುವುದು ಈ ಭಾಗದ ಜನರ ಆಶೋತ್ತರಗಳಿಗೆ ಮತ್ತು ಭವಿಷ್ಯಕ್ಕೆ ಎಸಗುವ ದ್ರೋಹ. ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗಬೇಕಿದೆ ನಿಜ. ಸಮಸ್ಯೆಗಳು ಸಂಪೂರ್ಣ ಬಗೆಹರಿದಿಲ್ಲ ಎಂದ ಮಾತ್ರಕ್ಕೆ, ಈ ಕಲಂನಿಂದ ದೊರೆತ ಬೃಹತ್ ಪ್ರಯೋಜನಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ," ಎಂದರು.

ಮುಂದುವರಿದು ಮಾತನಾಡಿದ ಕಾಳಗಿ, "ಈ ಭಾಗದ ಹಿರಿಯ ಹೋರಾಟಗಾರರ ಶ್ರಮ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಸತತ ಪ್ರಯತ್ನದ ಫಲವಾಗಿ 371(ಜೆ) ಜಾರಿಗೆ ಬಂದಿದೆ. ಹೀಗಿರುವಾಗ ಇದರ ಬಗ್ಗೆ ಹಗುರವಾಗಿ ಮಾತನಾಡಲು ಎನ್. ರವಿಕುಮಾರ್ ಅವರಿಗೆ ಯಾವುದೇ ನೈತಿಕತೆ ಇಲ್ಲ," ಎಂದು ಕಿಡಿಕಾರಿದರು.

"ಎನ್. ರವಿಕುಮಾರ್ ಅವರು ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆದು ಈ ಭಾಗದ ಜನರಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರು ಎಲ್ಲೇ ಕಂಡುಬಂದರೂ ಉಗ್ರ ಹೋರಾಟ ನಡೆಸಿ ಘೇರಾವ್ ಹಾಕಲಾಗುವುದು," ಎಂದು ಮಲ್ಲಿಕಾರ್ಜುನ ಕಾಳಗಿ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ರವರಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಮತ ನೀಡಿ ಗೆಲ್ಲಿಸಬೇಕು ಎಂದು ಇದೆ ಸಂದರ್ಭದಲ್ಲಿ ಮನವಿ ಮಾಡಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم