ಯಾವುದೇ ಕಲೆ, ಉಳಿಸಿ ಬೆಳೆಸಲು ಪ್ರೋತ್ಸಾಹ ಅಗತ್ಯ: ದಿಗ್ಗಾಂವ ಶ್ರೀ.

​ಚಿತ್ತಾಪುರ: ಯಾವುದೇ ಕಲೆ ಇರಲಿ, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.  

​ಪಟ್ಟಣದ ಬಜಾಜ್ ಕಾಂಪ್ಲೆಕ್ಸ್‌ನಲ್ಲಿ  ಆಯೋಜಿಸಲಾಗಿದ್ದ ಕೆ.ಡಿ ಡ್ಯಾನ್ಸ್ ಸ್ಟುಡಿಯೋ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನೃತ್ಯ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರಸ್ತುತ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ನೃತ್ಯ ಕಲೆಯಲ್ಲಿ ಆಸಕ್ತರಾಗಿದ್ದಾರೆ ಎಂದು ತಿಳಿಸಿದರು. ಚಿತ್ತಾಪುರ ಪಟ್ಟಣದಲ್ಲಿ ಕುಮಾರ್ ಜಾಧವ್ ನೇತೃತ್ವದಲ್ಲಿ ಆರಂಭವಾಗಿರುವ ಡ್ಯಾನ್ಸ್ ತರಬೇತಿ ಕೇಂದ್ರದ ಬೆಳವಣಿಗೆಗೆ ಎಲ್ಲರೂ ಸಹಕರಿಸಿ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.  

​ಬಂಜಾರ ಸಮಾಜದ ಶ್ರೀ ಅನಿಲ್ ಮಹಾರಾಜ್ ಮಾತನಾಡಿ, ಡ್ಯಾನ್ಸ್ ಕಲೆಯು ಏಕಾಗ್ರತೆ ಮೂಡಿಸುವುದು ಹಾಗೂ ದೇಹದ ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಅತ್ಯಂತ ಸಹಕಾರಿಯಾಗಿದೆ ಎಂದರು.

​ಡ್ಯಾನ್ಸ್ ಮಾಸ್ಟರ್ ಕುಮಾರ್ ಜಾಧವ್ ಮಾತನಾಡಿ, ಚಿತ್ತಾಪುರ ಪಟ್ಟಣದಲ್ಲಿ ನೃತ್ಯ ತರಬೇತಿ ಕೇಂದ್ರದ ಕೊರತೆ ಇರುವುದನ್ನು ಮನಗಂಡು, ಸ್ಥಳೀಯ ಶಾಲಾ-ಕಾಲೇಜುಗಳ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಡ್ಯಾನ್ಸ್ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು. ಹೀಗಾಗಿ ತಾಲೂಕಿನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. 

​ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ, ಸಂತೋಷ್ ಚವ್ಹಾಣ, ವಿಶಾಲ್ ನಾಯಕ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಅನ್‌ಮೋಲ್ ಬಜಾಜ್, ಗೋಪಾಲ್ ಜಾಧವ್, ಸುಭಾಷ್ ಜಾಧವ್, ಅನಿಲ್ ಚವ್ಹಾಣ, ಬಸವರಾಜ ಪಾಟೀಲ್ ದಂಡಗುಂಡ, ಸುನೀಲ್ ರಾಠೋಡ ಬಾಹರಪೇಟೆ, ಸುಧೀರ್ ರಾಠೋಡ, ಶ್ಯಾಮ್ ಚವ್ಹಾಣ, ಮೋಹನ್ ಚವ್ಹಾಣ, ರವಿ ಕಾರಬಾರಿ, ಉಮೇಶ್ ರಾಠೋಡ, ವಿಕಾಸ್ ಜಾಧವ್, ಸುಭಾಷ್ ಬೆನಕನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶರಣು ಉದುಗಿ ನಿರೂಪಿಸಿ, ವಂದಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು