ತಾಲೂಕು ಕುರುಬ ಸಮಾಜದ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ.
ಚಿತ್ತಾಪುರ: ಕುರುಬ ಸಮಾಜದ ಏಳಿಗೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೂ ಭೇದಭಾವ ಮರೆತು ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ಕುರುಬ ಸಮಾಜದ ಜಿಲ್ಲಾಧ್ಯಕ್ಷ ಬಗವಂತರಾಯ ಗೌಡ ಪಾಟೀಲ ಕರೆ ನೀಡಿದ್ದಾರೆ.
ಪಟ್ಟಣದ ಕನಕ ಭವನದಲ್ಲಿ ಶುಕ್ರವಾರ ಜರುಗಿದ ತಾಲೂಕು ಕುರುಬ ಸಮಾಜದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಸಮಾಜವನ್ನು ತುಳಿಯುವ ಅಥವಾ ಹಿಂಜರಿಯುವ ಕೆಲಸವನ್ನು ಯಾರೂ ಮಾಡಬಾರದು. ಒಳ್ಳೆಯದು ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಕೆಟ್ಟದ್ದನ್ನು ಮಾತ್ರ ಮಾಡಬೇಡಿ. ಮುಂಬರುವ ಜಿ.ಪಂ., ತಾ.ಪಂ., ಗ್ರಾ.ಪಂ. ಹಾಗೂ ಎಂಎಲ್‌ಸಿ ಸೇರಿದಂತೆ ಮುಂತಾದ ಚುನಾವಣೆಗಳಲ್ಲಿ ಕುರುಬ ಸಮಾಜಕ್ಕೆ ಸಿಗಬೇಕಾದ ಸೂಕ್ತ ಪಾಲು ಹಾಗೂ ಹಕ್ಕುಗಳನ್ನು ನಿರ್ಭಯವಾಗಿ ಕೇಳಿ ಪಡೆಯಬೇಕು. ಮೊದಲು ಸಮಾಜ, ನಂತರ ಪಕ್ಷ ಎಂಬುದನ್ನು ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು" ಎಂದು ತಿಳಿಸಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ಮುರತೂರ್ ಮಾತನಾಡಿ, "ಹಿಂದೊಮ್ಮೆ ಚಿತ್ತಾಪುರ ತಾಲೂಕಿನಲ್ಲಿ ಕುರುಬ ಸಮಾಜದ ಸಂಘಟನೆ ಸೂಕ್ತವಾಗಿ ಇಲ್ಲದಿದ್ದಾಗ ನಾವೆಲ್ಲರೂ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದೆವು. ಆ ಶ್ರಮದ ಫಲವಾಗಿ ಇಂದು ಸಮಾಜ ಮುಖ್ಯವಾಹಿನಿಗೆ ಬಂದಿದೆ. ಈಗಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅದೇ ಹುಮ್ಮಸ್ಸಿನಿಂದ ಸಂಘಟನೆಯನ್ನು ಮುಂದುವರಿಸಿಕೊಂಡು ಹೋಗಬೇಕು" ಎಂದರು.
ಹಿರಿಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಭಂಕೂರ ಮಾತನಾಡಿ, "ಸಂಘಟಿತರಾದರೆ ಮಾತ್ರ ಸಮಾಜಕ್ಕೆ ಶಕ್ತಿ ಹಾಗೂ ಬೆಲೆ ಬರಲಿದೆ. ನೂತನ ಅಧ್ಯಕ್ಷರು ಕೇವಲ ಮನೆಗೆ ಸೀಮಿತವಾಗದೆ ಹಳ್ಳಿಗಳಿಗೆ ತೆರಳಿ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರು ₹50 ಲಕ್ಷ ವೆಚ್ಚದಲ್ಲಿ ಕನಕ ಭವನ ನಿರ್ಮಿಸಿಕೊಟ್ಟಿದ್ದು, ಹೆಚ್ಚುವರಿಯಾಗಿ ಮತ್ತೂ ₹50 ಲಕ್ಷ ನೀಡಲು ಸಿದ್ಧರಿದ್ದಾರೆ" ಎಂದು ಮಾಹಿತಿ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು
ತಾಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಡಬ್ಬಿಗೇರ್ ಹಣಕೇರಾ, ಉಪಾಧ್ಯಕ್ಷ ನಾಗೇಶ್ ಪೂಜಾರಿ ಚಿತ್ತಾಪುರ, ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕದ್ದರಗಿ, ಕಾರ್ಯಾಧ್ಯಕ್ಷ ಯಲ್ಲಾಲಿಂಗ ಪೂಜಾರಿ ಕನಗನಹಳ್ಳಿ, ಖಜಾಂಚಿ ಹಂಪಯ್ಯ ಪೂಜಾರಿ ಆಳಹಳ್ಳಿ, ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಮುಖಂಡರು ಶಾಲೂ ಹೊದಿಸಿ ಸನ್ಮಾನಿಸಿದರು.
ಸಭೆಯಲ್ಲಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಹೊಸಳ್ಳಿ, ಮಾಜಿ ಅಧ್ಯಕ್ಷ ಜುಮ್ಮಣ್ಣ ಪೂಜಾರಿ ಮಾತನಾಡಿದರು. ಪ್ರಮುಖರಾದ ತಿಪ್ಪಣ್ಣ ವಗ್ಗರ್, ರವಿಗೌಡ ಕಟ್ಟಿಮನಿ, ನಿರ್ಮಲಾ ಬರಗಲಿ, ಯಲ್ಲಾಲಿಂಗ ಪೂಜಾರಿ ಮುಗುಟಿ, ಸೂರ್ಯಕಾಂತ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಜಗನ್ನಾಥ ಆಲೂರು, ಬಸವರಾಜ ಪೂಜಾರಿ ಮೊಗಲಾ, ಹಣಮಂತ ಪೂಜಾರಿ, ಶಾಂತಿಯಮ್ಮ ಹಣಕೇರಾ, ಈರಣ್ಣ ಪೂಜಾರಿ, ಬಸವರಾಜ ಕೇಶವಾರ, ಮಲ್ಲು ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂತೋಷ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.