ಆರೋಗ್ಯಕರ ಜೀವನಶೈಲಿಯಿಂದ ಮೂಲವ್ಯಾಧಿ ತಡೆಗಟ್ಟಬಹುದು: ಡಾ. ರವೀಂದ್ರ ಹೂಗರ್

ಚಿತ್ತಾಪೂರು: ಆರೋಗ್ಯಕರ ಆಹಾರ ಪದ್ಧತಿ, ನಾರಿನಾಂಶಯುಕ್ತ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಹಾಗೂ ನಿಯಮಿತ ವ್ಯಾಯಾಮ ಮಾಡುವುದರಿಂದ ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಕಲಬುರಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ರವೀಂದ್ರ ಹೂಗರ್ ಹೇಳಿದರು.

ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ 'ಪೈಲ್ಸ್' ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂಲವ್ಯಾಧಿ, ಭಗಂದರ ಹಾಗೂ ಗುದನಾಳ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಅನೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಮೂಲವ್ಯಾಧಿ ಸಮಸ್ಯೆಯನ್ನು ಮುಜುಗರದಿಂದ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಮಲಬದ್ಧತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಈ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಿದಾನಂದಮೂರ್ತಿ ಮಾತನಾಡಿ, ಆಯುರ್ವೇದದಲ್ಲಿ ಮೂಲವ್ಯಾಧಿಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುವ ಆರೋಗ್ಯ ಸೇವೆಗಳು ಮತ್ತು ಆರೋಗ್ಯ ಶಿಬಿರಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ಕರೆ ನೀಡಿದರು.

ಶಿಬಿರದಲ್ಲಿ ತಜ್ಞ ವೈದ್ಯರದ ಡಾ.ಸರಸ್ವತಿ, ಡಾ.ನಿಖಿಲ್ 30ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಡಾ. ಸಂಜೀವ್ ಪಾಟೀಲ್, ಡಾ. ಶಶಿಕಲಾ, ಬಸವರಾಜ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಿಬ್ಬಂದಿಗಳಾದ ಚೆನ್ನಪ್ಪ, ನೂತನ್, ಸರ್ವೇಶ್, ಮುತ್ತಪ್ಪ ಮತ್ತು ಸೀಮಾ ಉಪಸ್ಥಿತರಿದ್ದರು. 

ಸತೀಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಡಾ.ಸರಸ್ವತಿ ವಂದನಾರ್ಪಣೆ ಸಲ್ಲಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم