ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಅಖಿಲ ಭಾರತ ಕುಂಬಾರರ ಮಹಾಸಭಾ ವತಿಯಿಂದ ತಾಲೂಕು ಮಟ್ಟದ ಕುಂಬಾರ ಸಮುದಾಯದ ಪ್ರಮುಖ ಸಭೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಕುಂಬಾರರ ಮಹಾಸಭಾ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ಜರುಗಿತು. ಸಂಘದ ನೂತನ ಉಪಾಧ್ಯಕ್ಷರಾಗಿ ರಾಜಶೇಖರ್ ಕುಂಬಾರ ಮಲಕೂಡ, ಕಾರ್ಯದರ್ಶಿಯಾಗಿ ಕಾಶಿನಾಥ್ ಕುಂಬಾರ್ ಬೆಣ್ಣೂರ (ಬಿ), ಸದಸ್ಯರಾಗಿ ಮಲ್ಲಿಕಾರ್ಜುನ ಕುಂಬಾರ ಅಲ್ಲೂರ (ಬಿ) ಹಾಗೂ ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ಭೀಮು ಕುಂಬಾರ ಇಟಗಿ ಅವರು ಅಧಿಕಾರ ವಹಿಸಿಕೊಂಡರು. ನೂತನ ಪದಾಧಿಕಾರಿಗಳಿಗೆ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಕುಂಬಾರ ಅವರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
ಸಂಘಟನೆ ಬಲಪಡಿಸಲು ಕರೆ:
ಬಳಿಕ ಮಾತನಾಡಿದ ತಾಲೂಕು ಅಧ್ಯಕ್ಷ ವಿಶ್ವನಾಥ ಕುಂಬಾರ ಅವರು, "ಸಮುದಾಯದ ಅಭಿವೃದ್ಧಿಗೆ ಸಂಘಟನೆಯೇ ಜೀವಾಳ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಾಲೂಕಿನಾದ್ಯಂತ ಇರುವ ಕುಂಬಾರ ಬಾಂಧವರನ್ನು ಒಗ್ಗೂಡಿಸಿ, ಸಂಘವನ್ನು ಮತ್ತಷ್ಟು ಬಲಪಡಿಸಬೇಕಿದೆ," ಎಂದು ತಿಳಿಸಿದರು.
ಅದ್ದೂರಿ ಕುಂಬಾರ ಸಮಾವೇಶದ ಸಿದ್ಧತೆ:
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಜಗದೇವ ಕುಂಬಾರ ಅವರು ಮಾತನಾಡಿ, "ಸಮುದಾಯದ ಹಕ್ಕುಗಳು ಮತ್ತು ಸೌಲಭ್ಯಗಳಿಗಾಗಿ ನಾವು ಸಂಘಟಿತವಾಗಿ ಹೋರಾಡಬೇಕಿದೆ. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಅತ್ಯಂತ ಅದ್ದೂರಿಯಾಗಿ 'ಕುಂಬಾರ ಸಮಾವೇಶ'ವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆಯನ್ನು ವ್ಯವಸ್ಥಿತವಾಗಿ ಕಟ್ಟುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ," ಎಂದು ಕರೆ ನೀಡಿದರು.
ಈ ಪ್ರಮುಖ ಸಭೆಯಲ್ಲಿ ಸಮುದಾಯದ ಮುಖಂಡರಾದ ಶ್ರೀಮಂತ ಕುಂಬಾರ, ಮಹಾದೇವ ಕುಂಬಾರ, ಬಸವರಾಜ ಕುಂಬಾರ, ಶರಣಪ್ಪ ಕುಂಬಾರ, ಜಗದೀಶ್ ಕುಂಬಾರ, ಮಲ್ಲಿಕಾರ್ಜುನ ಕುಂಬಾರ ಚಿತ್ತಾಪೂರ, ಸಿದ್ದು ಕುಂಬಾರ, ಸುಭಾಷ್ ಕುಂಬಾರ, ರೇವಣಸಿದ್ದಪ್ಪ ಕುಂಬಾರ ಮಲಕೂಡ, ಚಿತ್ರಶೇಖರ ಕುಂಬಾರ, ಜಗನ್ನಾಥ ಕುಂಬಾರ, ಗುರುಪಾದಪ್ಪ ಕುಂಬಾರ ಸೇರಿದಂತೆ ಸಮುದಾಯದ ನೂರಾರು ಬಂಧುಗಳು ಉಪಸ್ಥಿತರಿದ್ದರು.