ಜಯಂತಿ ನಿರ್ಲಕ್ಷಿಸಿದರೆ ಕ್ರಮ: ಕಚೇರಿಗಳಲ್ಲಿ ಆಚರಣೆಗೆ ಕಟ್ಟುನಿಟ್ಟಿನ ಸೂಚನೆ.

ಚಿತ್ತಾಪುರ: ಹನ್ನೆರಡನೇ ಶತಮಾನದ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿಯನ್ನು ನಿರ್ಲಕ್ಷಿಸದೇ, ಸರ್ಕಾರದ ಆದೇಶದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಎಂದು ಹಡಪದ ಸಮಾಜದ ತಾಲೂಕು ಅಧ್ಯಕ್ಷ ರಮೇಶ ಹಡಪದ ಕೊಲ್ಲೂರು ಆಗ್ರಹಿಸಿದರು.

ಪಟ್ಟಣದ ಪ್ರಜಾಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು 

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
"ತಾಲೂಕಿನ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಡಪದ ಅಪ್ಪಣ್ಣ ಜಯಂತಿ ಮಾತ್ರವಲ್ಲದೆ, ಬಹುತೇಕ ಎಲ್ಲಾ ಶರಣರ ಹಾಗೂ ರಾಷ್ಟ್ರನಾಯಕರ ಜಯಂತಿಗಳನ್ನು ಆಚರಿಸದೇ ಅವಮಾನ ಮಾಡಲಾಗುತ್ತಿದೆ. ಪದೇ ಪದೇ ಹೀಗಾಗುತ್ತಿದ್ದರೂ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ," ಎಂದು ರಮೇಶ ಕೊಲ್ಲೂರು ಬೇಸರ ವ್ಯಕ್ತಪಡಿಸಿದರು.

ಸಿಡಿಪಿಒ ಇಲಾಖೆ, ಅಂಗನವಾಡಿ ಕೇಂದ್ರಗಳು, ಸರ್ಕಾರಿ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗಳಲ್ಲಿ ಜಯಂತಿ ಆಚರಿಸುತ್ತಿಲ್ಲ ಎಂದ ಅವರು, ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಜಯಂತಿ ಆಚರಣೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಅನುದಾನದ ಕುರಿತು ಬಿಸಿಯೇರಿದ ಚರ್ಚೆ
ಜಯಂತಿಗೆ ಬರುವ ಅನುದಾನದ ಕುರಿತು ಸಮಾಜಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲವೆಂದು ಸಮಾಜದ ಮುಖಂಡರು ಸಭೆಯಲ್ಲಿ ಪ್ರಶ್ನಿಸಿದರು. ಕಳೆದ ಎರಡು ವರ್ಷಗಳಿಂದ ಬಜೆಟ್ ಬಂದರೂ ಜಯಂತಿಗೆ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಾಗ, ಗ್ರೇಡ್-೨ ತಹಸೀಲ್ದಾರ್ ಅವರು ಸರಿಯಾದ ಉತ್ತರ ನೀಡದೆ, ಗ್ರೇಡ್-೧ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಸಮಜಾಯಿಷಿ ನೀಡಿದರು.

ಜುಲೈ ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರಜಾಸೌಧದ ಆವರಣದಲ್ಲಿ ಸರ್ಕಾರಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ನಂತರ ಪ್ರತ್ಯೇಕ ದಿನಾಂಕ ನಿಗದಿಪಡಿಸಿ ಸಮುದಾಯ ಭವನದಲ್ಲಿ ಸಮಾಜದ ವತಿಯಿಂದ ಅದ್ದೂರಿಯಾಗಿ ನೆರವೇರಿಸಲಾಗುವುದು. ಆ ಸಮಯದಲ್ಲಿ ಕಳೆದ ಎರಡು ವರ್ಷದ ಅನುದಾನವನ್ನು ನೀಡಬೇಕೆಂದು ಸಮಾಜದ ಮುಖಂಡರು ಪಟ್ಟು ಹಿಡಿದರು.

ಕಡ್ಡಾಯ ಆಚರಣೆಗೆ ತಹಸೀಲ್ದಾರ್ ಸೂಚನೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-೨ ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಮಾತನಾಡಿ, "ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿ, ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಬೇಕು," ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಬೆಳಿಗ್ಗೆ ೧೦:೩೦ಕ್ಕೆ ತಮ್ಮ ಕಚೇರಿಗಳಲ್ಲಿ ಜಯಂತಿ ಆಚರಿಸಿ, ನಂತರ ತಾಲೂಕು ಆಡಳಿತದ ಪ್ರಜಾಸೌಧದಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.

ಭಾವಚಿತ್ರಕ್ಕೆ ಪ್ಲಾಸ್ಟಿಕ್ ಹಾರ ಬಳಸದೆ, ಕಡ್ಡಾಯವಾಗಿ ಹೂವಿನ ಹಾರವನ್ನೇ ಬಳಸಬೇಕು ಎಂದು ನಿರ್ದೇಶನ ನೀಡಿದರು. ಇದೇ ವೇಳೆ ಆಗಸ್ಟ್ ೧ ರಂದು ನಡೆಯಲಿರುವ ಮಹಾಂತ್ ಶಿವಯೋಗಿಗಳ ಜಯಂತಿ ಕುರಿತೂ ಚರ್ಚೆ ನಡೆಯಿತು.

ಪ್ರಮುಖರ ಉಪಸ್ಥಿತಿ
ಸಭೆಯಲ್ಲಿ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರುಹಾಜರಾಗಿದ್ದು ಕಂಡುಬಂದಿತು. ಬಿಸಿಎಂ ಅಧಿಕಾರಿ ಸುನೀತಾ ಉಡಗಿ, ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಶರಣಯ್ಯ ಗುತ್ತೇದಾರ, ಅರಣ್ಯಾಧಿಕಾರಿ ಜಾವೀದ್, ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ಗುಂಡಗುರ್ತಿ, ಉಪಾಧ್ಯಕ್ಷ ಶೇಖಣ್ಣ ದಂಡಗುಂಡ, ಭೀಮಾಶಂಕರ್ ಹಡಪದ, ನಗರಾಧ್ಯಕ್ಷ ಮುರುಳಿಕುಮಾರ್ ಸಾತನೂರು, ಸಮಾಜದ ಮುಖಂಡರಾದ ಅಶೋಕ್ ಚಿತ್ತಾಪುರ, ಶಿವಕುಮಾರ್ ನಾಲವಾರ, ಸಿದ್ದು ಬೀಮನಳ್ಳಿ, ಶಂಕರ್ ಡೋಣಗಾಂವ್, ಬಸವರಾಜ ಹಡಪದ, ಶ್ರೀನಿವಾಸ, ಸುನಿಲ್, ರಾಜಶೇಖರ್ ಮಲಕೂಡ, ಅಜಯಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆಯ ಶಿವಶರಣಪ್ಪ ಮಂಠಾಳೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم