ಚಿತ್ತಾಪುರ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಹಾಗೂ ಬಂಜಾರ ಸಮಾಜದ ಶಾಸಕ ರುದ್ರಪ್ಪ ಲಂಬಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಬಂಜಾರ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಪಟ್ಟಣದ ಬಜಾಜ್ ಕಾಂಪ್ಲೆಕ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಜಂಟಿಯಾಗಿ ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ ಚವ್ಹಾಣ, "ಕ್ಷೇತ್ರದ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾಯಕ ಪ್ರಿಯಾಂಕ್ ಖರ್ಗೆ ಅವರು ಉಪಮುಖ್ಯಮಂತ್ರಿ ಆಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಬಂಜಾರ ಸಮುದಾಯದ ಮುಖಂಡರ ಮತ್ತು ಸಾರ್ವಜನಿಕರ ತೀವ್ರ ಆಶಯವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಪಕ್ಷ ಮತ್ತು ಸರ್ಕಾರವನ್ನು ಮತ್ತಷ್ಟು ಬಲಪಡಿಸಬೇಕು" ಎಂದು ಒತ್ತಾಯಿಸಿದರು.
ಬಳಿಕ ಸಮಾಜದ ಹಿರಿಯ ಮುಖಂಡರಾದ ಚಂದು ಜಾಧವ ಮಾತನಾಡಿ, "ಬಂಜಾರ ಸಮಾಜದ ಹಿರಿಯ ಶಾಸಕರಾದ ರುದ್ರಪ್ಪ ಲಂಬಾಣಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಲಂಬಾಣಿ ಅವರಿಗೆ ಸಚಿವ ಸ್ಥಾನ ಸಿಕ್ಕರೆ ನಮ್ಮ ಹಿಂದುಳಿದ ಬಂಜಾರ ಸಮುದಾಯದ ಹಾಗೂ ತಾಂಡಾಗಳ ಅಭಿವೃದ್ಧಿಗೆ ಮತ್ತು ಕಲ್ಯಾಣಕ್ಕೆ ಭಾರಿ ಸಹಕಾರಿಯಾಗುತ್ತದೆ" ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಬಂಜಾರ ಸಮಾಜದ ಪ್ರಮುಖ ಮುಖಂಡರಾದ ಭೀಮಸಿಂಗ್ ಚವ್ಹಾಣ, ದೇವಿದಾಸ್ ಚವ್ಹಾಣ, ಪ್ರವೀಣ್ ಪವಾರ್, ರಾಕೇಶ್ ಪವಾರ್, ಯಾಗಾಪುರದ ವಿಜಯಕುಮಾರ್ ಚವ್ಹಾಣ, ಗೋಪಾಲ ರಾಠೋಡ್ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ