ಚಿತ್ತಾಪುರ: ವಾಡಿ ಪಟ್ಟಣದ ರೈಲು ನಿಲ್ದಾಣದ ಬಳಿ ಸಾರ್ವಜನಿಕರ ಸಂಚಾರಕ್ಕೆ ಇದ್ದ ಹಳೆಯ ಕಾಲುದಾರಿಯನ್ನು ಏಕಾಏಕಿ ಬಂದ್ ಮಾಡಿದ್ದ ರೈಲ್ವೆ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ ಹಾಗೂ ಉಗ್ರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ತಕ್ಷಣವೇ ತಡೆಯನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಈ ಸಮಸ್ಯೆಯ ಕುರಿತು 'ಜೆ ಟಿವಿ ಕನ್ನಡ ನ್ಯೂಸ್' ವಾಹಿನಿಯು ಮೊಟ್ಟಮೊದಲ ಬಾರಿಗೆ ಸವಿಸ್ತಾರವಾದ ವರದಿ ಪ್ರಸಾರ ಮಾಡುವ ಮೂಲಕ ಸಾರ್ವಜನಿಕರ ಧ್ವನಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರೈಲ್ವೆ ಇಲಾಖೆ ಹಾಗೂ ಸಿಬ್ಬಂದಿ, ಸ್ಥಳದಲ್ಲಿದ್ದ ತಡೆಗೋಡೆ/ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಕಾಲುದಾರಿ ತೆರವುಗೊಳಿಸಿದ ಬೆನ್ನಲ್ಲೇ ಮಾತನಾಡಿದ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, "ಇದು ಜನಸಾಮಾನ್ಯರ ಧ್ವನಿಯಾಗಿ ನಾವೆಲ್ಲರೂ ಸಂಘಟಿತವಾಗಿ ನಡೆಸಿದ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾಗಿದೆ. ರೈಲ್ವೆ ಇಲಾಖೆಯು ಏಕಾಏಕಿ ದಾರಿ ಬಂದ್ ಮಾಡಿದ್ದರಿಂದ ಸುಮಾರು 20 ಸಾವಿರ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ನಾವು ಸ್ಥಳೀಯ ರೈಲು ನಿಲ್ದಾಣದ ಪ್ರಬಂಧಕರಿಗೆ, ಮುಂಬಯಿ ಮತ್ತು ಸೊಲ್ಲಾಪುರದ ಕೇಂದ್ರ ವಿಭಾಗದ ಅಧಿಕಾರಿಗಳಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಇ-ಮೇಲ್ ಮುಖಾಂತರ ಇಲ್ಲಿನ ಜನರ ಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಇಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ಇಲ್ಲದೆ ಜನರು ಅನುಭವಿಸುತ್ತಿರುವ ನರಕಯಾತನೆಯನ್ನು ವಿವರಿಸಿ, ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಲಾಗಿತ್ತು" ಎಂದರು.
ಮಾಧ್ಯಮಗಳು ಮತ್ತು ಸಂಘಟನೆಗಳಿಗೆ ಧನ್ಯವಾದ
"ನಮ್ಮ ಈ ಹೋರಾಟಕ್ಕೆ ಮಾದಿಗ ದಂಡೋರ ಹೋರಾಟ ಸಮಿತಿ, ಕರವೇ ಹಾಗೂ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಎದೆಯೊಡ್ಡಿ ನಿಂತಿದ್ದರಿಂದ ಜನರ ಕಷ್ಟ ನಿವಾರಣೆಯಾಗಿದೆ. ವಿಶೇಷವಾಗಿ ಈ ಸಮಸ್ಯೆಯನ್ನು ಮೊದಲಿಗೆ ಮುಂಚೂಣಿಗೆ ತಂದು, ನಮ್ಮ ಧ್ವನಿಗೆ ಮತ್ತಷ್ಟು ಶಕ್ತಿ ನೀಡಿದ 'ಜೆ ಟಿವಿ ಕನ್ನಡ ನ್ಯೂಸ್' ಸೇರಿದಂತೆ ಎಲ್ಲಾ ಪ್ರಮುಖ ದಿನಪತ್ರಿಕೆ ಹಾಗೂ ಟಿವಿ ಮಾಧ್ಯಮದವರಿಗೆ ಧನ್ಯವಾದಗಳು. ಆದರೆ, ಸಾರ್ವಜನಿಕರು ಈ ಕಾಲುದಾರಿಯಿಂದ ರೈಲ್ವೆ ಹಳಿ ದಾಟುವಾಗ ತುಂಬಾ ಜಾಗರೂಕರಾಗಿರಬೇಕು."
— ವೀರಣ್ಣ ಯಾರಿ, ಸ್ಥಳೀಯ ಬಿಜೆಪಿ ಅಧ್ಯಕ್ಷ ವಾಡಿ
ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಮುಕ್ಕನಾಳ, ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ವಿಶ್ವರಾಧ್ಯ ತಳವಾರ, ಮುಖಂಡ ಸುರೇಶ ನಾಯಕ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನೂರಾರು ನಿವಾಸಿಗಳು ಉಪಸ್ಥಿತರಿದ್ದು ಸಂಭ್ರಮಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ