ನಿಯಮ ಗಾಳಿಗೆ ತೂರಿದ ಅಂಗಡಿಗಳು. ಪರವಾನಿಗೆ ಇಲ್ಲಾ. ರಾಜಾರೋಷವಾಗಿ ವ್ಯಾಪಾರ.
-ಜಗದೇವ ಎಸ್ ಕುಂಬಾರ.
ಚಿತ್ತಾಪುರ: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಇತ್ತೀಚಿನ ದಿನಗಳಲ್ಲಿ ನಬಾಯಿಯಂತೆ ಫಾಸ್ಟ್ ಫುಡ್ ಅಂಗಡಿಗಳು ಹಾಗೂ ಧಾಬಾಗಳು, ಖಾನಾವಳಿ, ಪಾನಿಪುರಿ, ಐಸ್ಕ್ರೀಮ್, ಚಹಾ, ಅಂಗಡಿಗಳು ತಲೆಎತ್ತಿವೆ. ಆದರೆ, ಇವುಗಳಲ್ಲಿ ಬಹುತೇಕ ಅಂಗಡಿಗಳು ಸ್ಥಳೀಯ ಪುರಸಭೆಯಿಂದ ಯಾವುದೇ ಅಧಿಕೃತ ಪರವಾನಿಗೆಯನ್ನು ಪಡೆಯದೆ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಕೆಲ ಮುಖ್ಯ ರಸ್ತೆಗಳ ಬದಿಯಲ್ಲಿ ಫುಟ್ಪಾತ್ಗಳನ್ನು ಅತಿಕ್ರಮಿಸಿಕೊಂಡು ಈ ಅಂಗಡಿಗಳನ್ನು ನಡೆಸಲಾಗುತ್ತಿದೆ. ಸಂಜೆ ವೇಳೆಯಾಗುತ್ತಿದ್ದಂತೆ ಗ್ರಾಹಕರ ವಾಹನಗಳು ರಸ್ತೆಯಲ್ಲೇ ನಿಲ್ಲುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಲು ಹರಸಾಹಸ ಪಡುವಂತಾಗಿದೆ.ಬುಧವಾರ ಸಂತೆಯಂದು ಜನರು ಪಡುವ ಕಷ್ಟ ಹೇಳತೀರದು.
ರಾಜಾಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ಬಿಹಾರ, ಹರಿಯಾಣ ಹೀಗೆ ನಾನಾ ರಾಜ್ಯಗಳ ಜನರು ಬಂದು ಇಲ್ಲಿ ವಿವಿಧ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಅಂಗಡಿಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಯಾರು ತಪಾಸಣೆ ಮಾಡುತ್ತಿಲ್ಲ. ತೆರೆದ ಜಾಗದಲ್ಲಿ ಅಡುಗೆ ಮಾಡುವುದು, ಬಳಸಿದ ನೀರನ್ನು ರಸ್ತೆಗೆ ಚೆಲ್ಲುವುದು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ರಾತ್ರಿಯಾದರೂ ಕೆಲ ಧಾಬಾಗಳು ಮತ್ತು ಕೆಲ ಹೋಟೆಲ್, ಪಾನ ಶಾಪ್, ಫಾಸ್ಟ್ ಫುಡ್ ಅಂಗಡಿಗಳು ತೆರೆದಿರುತ್ತವೆ, ಇದರಿಂದ ರಾತ್ರಿ ವೇಳೆ ಅಪರಿಚಿತರು ಯಾರು ಬೇಕಾದರು ಬರುತ್ತಿದ್ದು. ರಾತ್ರಿ ವೇಳೆ ಕಳ್ಳತನ ಕೂಡ ಜಾಸ್ತಿ ಆಗುತ್ತಿವೆ ಅಲ್ಲದೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಕನಿಷ್ಠ ಪರವಾನಿಗೆಯೂ ಇಲ್ಲದೆ ಇವರು ವ್ಯಾಪಾರ ಮಾಡುತ್ತಿದ್ದಾರೆ. ಇದು ಸ್ಥಳೀಯ ಆಡಳಿತದ ಕಣ್ಣಿಗೆ ಕಾಣಿಸುತ್ತಿಲ್ಲವೇ?" ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
"ಯಾವುದೇ ಹೊಸ ಉದ್ದಿಮೆ ಪ್ರಾರಂಭಿಸಲು ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ. ಆದರೆ ಚಿತ್ತಾಪುರ ಪಟ್ಟಣದಲ್ಲಿ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ. ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ, ಅನಧಿಕೃತವಾಗಿ ನಡೆಯುತ್ತಿರುವ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು".
-ನರಹರಿ ಕುಲ್ಕರ್ಣಿ
ತಾಲೂಕಾಧ್ಯಕ್ಷ, ಕರವೇ (ಪ್ರವೀಣ್ ಶೆಟ್ಟಿ ಬಣ) ಚಿತ್ತಾಪುರ.
"ಪುರಸಭೆಯಿಂದ ಪರವಾನಿಗೆ ಪಡೆಯದ ಅಂಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು".
ಮನೋಜಕುಮಾರ್ ಗುರಿಕಾರ್
ಮುಖ್ಯಾಧಿಕಾರಿಗಳು, ಪುರಸಭೆ ಚಿತ್ತಾಪುರ.