ಅಂಬೇಡ್ಕರ್ 135ನೇ ಜಯಂತೋತ್ಸವ ಸಡಗರದ ಆಚರಣೆ.
ಚಿತ್ತಾಪುರ: ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವು ಮತ್ತು ಕಷ್ಟಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಬಾರದು ಎಂಬ ಏಕೈಕ ಉದ್ದೇಶದಿಂದ ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ ಎಂದು ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹೀರೆಮಠ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬಾಬಾ ಸಾಹೇಬರ 135ನೇ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು "ಅಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳು ಇಂದಿಗೂ ಪ್ರಸ್ತುತ. ಶಿಕ್ಷಣದಿಂದ ಮಾತ್ರ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅಂಬೇಡ್ಕರ್ ಅವರು ಕಂಡ ಸಮಾನ ಸಮಾಜದ ಕನಸು ನನಸಾಗಬೇಕಾದರೆ ನಾವೆಲ್ಲರೂ ಸಂವಿಧಾನದ ದಾರಿಯಲ್ಲಿ ನಡೆಯಬೇಕು. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಸಿಗುವಂತಾಗಬೇಕು," ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿದ್ದ ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ವಿಷ್ಣುವರ್ಧನ್ ಮುಲಿಮನಿ ಅವರು ಅಂಬೇಡ್ಕರ್ ಅವರ ಬದುಕು ಮತ್ತು ಸಂವಿಧಾನದ ರಚನೆಯ ಹಾದಿಯ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಾ "ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಎದುರಿಸಿದ ದೈಹಿಕ ಶ್ರಮ ಮತ್ತು ಸಾಮಾಜಿಕ ವಿರೋಧಗಳು ಸಾಮಾನ್ಯವಾದುದಲ್ಲ. ಅಸಂಖ್ಯಾತ ಗ್ರಂಥಗಳನ್ನು ಓದಿ, ಜಗತ್ತಿನ ವಿವಿಧ ಸಂವಿಧಾನಗಳನ್ನು ಅಭ್ಯಾಸ ಮಾಡಿ ಭಾರತದಂತಹ ವೈವಿಧ್ಯಮಯ ದೇಶಕ್ಕೆ ಹೊಂದುವಂತಹ ಕಾನೂನು ರೂಪಿಸಿದರು."
"ಸಂವಿಧಾನ ಕೇವಲ ಒಂದು ದಾಖಲೆಯಲ್ಲ, ಅದು ಈ ದೇಶದ ಪ್ರತಿಯೊಬ್ಬ ನಾಗರಿಕನ ಆತ್ಮಗೌರವದ ಸಂಕೇತ. ಬಾಬಾ ಸಾಹೇಬರ ಸಂಕಷ್ಟದ ಹಾದಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ಸಂವಿಧಾನವನ್ನು ಗೌರವಿಸಲು ಸಾಧ್ಯ," ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಕಲಾ, ಕಾಮರ್ಸ್ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ರಕ್ತದಾನ ಶಿಬಿರದ ಮೂಲಕ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ, ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೇಣ್ಣೂರಕರ್, ದೇವಿಂದ್ರ ಕುಮಸಿ, ಗೋಫಸೇನ್ ರೆಡ್ಡಿ, ರಾಮಲಿಂಗ ಬಾನರ್, ಜಗದೀಶ ಚವ್ಹಾಣ್, ದೇವಿಂದ್ರಪ್ಪ ಅಣಕಲ್, ಶ್ರೀಕಾಂತ್ ಸಿಂಧೆ, ಮಲ್ಲಿಕಾರ್ಜುನ ಮೂಡಬುಳಕರ್, ಉದಯಕುಮಾರ್ ಸಾಗರ, ನಾಗೇಂದ್ರ ಬುರ್ಲಿ, ತಾಲೂಕು ಮಟ್ಟದ ಅಧಿಕಾರಿಗಳಾದ ಗ್ರೇಡ್- 2 ತಹಸೀಲ್ದಾರ್ ರಾಜಕುಮಾರ್ ಮರತೂರ, ಸಿಪಿಐ ಎಸ್ ಸಿ ಪಾಟೀಲ್, ತಾಪಂ ಇಓ ಮಹ್ಮದ್ ಆಕ್ರಂ ಪಾಶಾ, ಸಮಾಜ ಕಲ್ಯಾಣ ಇಲಾಖೆ ಚೇತನ್ ಗುರಿಕಾರ್, ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ್, ಪಿಎಸ್ಐ ಮಂಜುನಾಥ ರೆಡಿ, ಎಪಿಎಂಸಿ ಕಾರ್ಯದರ್ಶಿ ನರಸಿಂಹಲು, ಬಿಸಿಎಂ ಇಲಾಖೆ ಶ್ರೀಮತಿ ಸುನಿತಾ, ಸಿಡಿಪಿಒ ಇಲಾಖೆ ಶ್ರೀಮತಿ ಆರತಿ ತುಪ್ಪದ, ಅಬಕಾರಿ ಇಲಾಖೆ ವನೀತಾ ಸೀತಾಳೆ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸೇರಿದಂತೆ ಅನೇಕ ಮುಖಂಡರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ಕಣ್ಣಿ ಕಾರ್ಯಕ್ರಮ ನಿರೂಪಿಸಿದರೆ, ಶಿವಶರಣಪ್ಪ ಮಟ್ಟಾಳೆ ವಂದಿಸಿದರು.