ಜನತೆಯ ಸುದ್ದಿ ವಾಹಿನಿ

ಗುರುವಾರ, ಮೇ 28, 2026

ಎಂಎಲ್‌ಸಿ ಸ್ಥಾನ ನೀಡಲು ಕೋಲಿ ಸಮಾಜದ ಮುಖಂಡರ ಆಗ್ರಹ.

ಚಿತ್ತಾಪುರ: ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ, ತಿಪ್ಪಣ್ಣಪ್ಪ ಕಮಕನೂರ ಅವರ ರಾಜೀನಾಮೆಯಿಂದ ತೆರವಾಗಿರುವ ಖಾಲಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ, ಹಿರಿಯ ಕಲ್ಯಾಣ ಕರ್ನಾಟಕದ ನಾಯಕ ಭೀಮಣ್ಣ ಸಾಲಿ ಅವರಿಗೆ ನಾಮನಿರ್ದೇಶನ ಮಾಡಬೇಕು ಎಂದು ತಾಲೂಕು ಕೋಲಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರಮುಖ ಕೇಂದ್ರವಾದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಕೋಲಿ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡರುಗಳು ಪಾಲ್ಗೊಂಡು ಭೀಮಣ್ಣ ಸಾಲಿ ಅವರ ರಾಜಕೀಯ ಹೋರಾಟ ಮತ್ತು ಅರ್ಹತೆಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿ, ಈ ಬಾರಿ ಚಿತ್ತಾಪುರ ತಾಲೂಕಿಗೆ ಹಾಗೂ ಕೋಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಲೇಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಿದ ಹಿರಿಯ ಮುಖಂಡ ಬಸವರಾಜ ಚಿನ್ನಮಳ್ಳಿ ಅವರು, "ಭೀಮಣ್ಣ ಸಾಲಿ ಅವರು ಕೇವಲ ನಾಯಕರಲ್ಲ, ಅವರು ಕಳೆದ 1976 ರಿಂದ ಇಂದಿನವರೆಗೆ ಸತತ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಪಕ್ಷದ ಸಂಘಟನೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ತಳಮಟ್ಟದ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅವರು ಪಕ್ಷದ ಸಾಮಾನ್ಯ ಸದಸ್ಯರಾಗಿ, ತಾಲೂಕು ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಹಗಲಿರುಳು ಶ್ರಮಿಸಿದ್ದಾರೆ. ಕಳೆದ 2009 ರಿಂದ ಸುದೀರ್ಘ ಅವಧಿಗೆ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂತಹ ಹಿರಿಯ ಜೀವದ ನಿಷ್ಠೆಯನ್ನು ಪರಿಗಣಿಸಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭೀಮಣ್ಣ ಸಾಲಿ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಲು (MLC) ತಕ್ಷಣವೇ ಅವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿದರು.

ಮತ್ತೊಬ್ಬ ಹಿರಿಯ ಮುಖಂಡ ಹಣಮಂತ ಸಂಕನೂರ ಮಾತನಾಡಿ, "ಕಳೆದ ಅರ್ಧ ಶತಮಾನದಿಂದ ಕಾಂಗ್ರೆಸ್ ತತ್ವ ಸಿದ್ಧಾಂತಗಳಲ್ಲೇ ಬದುಕುತ್ತಿರುವ ಸಾಲಿ ಅವರಿಗೆ ರಾಜಕಾರಣ ಮತ್ತು ಸಮಾಜ ಸೇವೆಯನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರು ಈ ಹಿಂದೆ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನದ ಸಮಿತಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ, ನಗರ ಆಶ್ರಯ ಸಮಿತಿ ಸದಸ್ಯರಾಗಿ ಮತ್ತು ಕೇಂದ್ರ ಸರ್ಕಾರದ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಜನಪರ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, 21 ತಿಂಗಳುಗಳ ಕಾಲ ಕೆ.ಕೆ.ಆರ್‌.ಟಿ.ಸಿ (KKRTC) ನಿಗಮದ ಅಧ್ಯಕ್ಷರಾಗಿ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೀರ್ತಿ ಅವರಿಗಿದೆ. ಇಂತಹ ರಾಜಕೀಯ ಮುತ್ಸದ್ದಿತನ ಮತ್ತು ಜನಪ್ರಿಯತೆ ಹೊಂದಿರುವ ನಾಯಕನಿಗೆ ಎಂಎಲ್‌ಸಿ ಸ್ಥಾನ ನೀಡುವುದು ಸೂಕ್ತ" ಎಂದರು.

 ತಾಲೂಕು ಗೌರವಾಧ್ಯಕ್ಷ ರಾಮಲಿಂಗ ಬಾನರ್ ಅವರು ಮಾತನಾಡಿ, ಭೌಗೋಳಿಕ ಮತ್ತು ರಾಜಕೀಯವಾಗಿ ಚಿತ್ತಾಪುರ ದೊಡ್ಡದಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ವಿಧಾನ ಪರಿಷತ್ತಿನಲ್ಲಿ ಸೂಕ್ತ ಅವಕಾಶ ಸಿಕ್ಕಿಲ್ಲ. ಆದರೆ ನೆರೆಯ ಕಾಳಗಿ ತಾಲೂಕಿನ ಹಿಂದುಳಿದ ಇಬ್ಬರು ನಾಯಕರಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಈ ಬಾರಿ ಅತ್ಯಂತ ಹಿಂದುಳಿದ ಕೋಲಿ ಸಮಾಜದ ಹಿರಿಯ ನಾಯಕರಾದ, ಎಲ್ಲಾ ಧರ್ಮ, ಜಾತಿ, ಜನಾಂಗದವರೊಂದಿಗೆ ಸೌಹಾರ್ದಯುತ ಉತ್ತಮ ಬಾಂಧವ್ಯ ಹೊಂದಿರುವ ಭೀಮಣ್ಣ ಸಾಲಿ ಅವರಿಗೆ ಕಮಕನೂರ ಅವರ ಖಾಲಿ ಸ್ಥಾನವನ್ನು ನೀಡಬೇಕು. ಆ ಮೂಲಕ ತಾಲೂಕಿನ ಇಡೀ ಕೋಲಿ ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಮಾತನಾಡಿ, "ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿಧಾನಸಭಾ, ವಿಧಾನ ಪರಿಷತ್ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗರಿಷ್ಠ ಲೀಡ್ (ಮತಗಳು) ಸಿಗುವಂತೆ ಮಾಡಿ, ಪಕ್ಷದ ವಿಜಯ ಪತಾಕೆ ಹಾರಿಸುವಲ್ಲಿ ಸಾಲಿ ಅವರ ಪಾತ್ರ ಅನನ್ಯವಾಗಿದೆ. ತಮ್ಮ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದಿಂದ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವರು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ವಿರೋಧ ಪಕ್ಷದವರೂ ಕೂಡ ಗೌರವಿಸುವಂತೆ ನಡೆದುಕೊಂಡು ನಿಜವಾದ 'ಅಜಾತಶತ್ರು' ಎನಿಸಿಕೊಂಡಿದ್ದಾರೆ. ಈ ಎಲ್ಲಾ ಅರ್ಹತೆಗಳನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಈ ಬಾರಿ ಅವರಿಗೆ ಟಿಕೆಟ್ ನೀಡಲೇಬೇಕು" ಎಂದು ಆಗ್ರಹಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಕಾಂಗ್ರೆಸ್ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ, ಪ್ರಮುಖ ಮುಖಂಡರುಗಳಾದ ಶರಣಪ್ಪ ನಾಶಿ, ರಾಜೇಂದ್ರಪ್ಪ ಅರಣಕಲ್‌, ಭೀಮರಾಯ ಹೊತಿನಮಡಿ, ಇಂದುಶೇಖರ ಬೆಂಕಿ, ಮುನಿಯಪ್ಪ ಕೊಳ್ಳಿ, ನಾಗೇಂದ್ರ ಜೈಗಂಗಾ, ಶ್ರೀಶೈಲ್ ಇಂಗಳಗಿ, ಲಕ್ಷ್ಮೀಕಾಂತ ಸಾಲಿ, ಸಿದ್ದಣ್ಣ ನಾಲವಾರ, ವಿಶ್ವನಾಥ ಕುಂಬಾರ, ಶರಣು ಡೋಣಗಾಂವ, ಕರಣಕುಮಾರ ಅಲ್ಲೂರ, ಬಸವರಾಜ ಜಕಾತಿ, ಸಂತೋಷ ಮಳಬಾ, ಸಿದ್ದು ದಂಡೋತಿ, ಅಶೋಕ ದ್ವಾರನಳ್ಳಿ, ಹಣಮಂತ ಕಟ್ಟಿ, ಗಂಗೂ ಡಿಗ್ಗಿ, ದೇವಿಂದ್ರ ಕದ್ದರ್ಗಿ, ಬಸವರಾಜ ಮೈನಾಳಕರ್, ಮಲ್ಲು ಸಂಗಾವಿ, ಬೀಮರಾಯ ಅಂಬಾರ, ಮಲ್ಲು ಬನಪೂರ, ಮಲ್ಲು ಕೋಳಕೂರ, ಕಿಶೋರ ಬೆಳಗುಂಪಾ, ಶರಣು ಹಾಸಬಾ ಸೇರಿದಂತೆ ಕೋಲಿ ಸಮಾಜ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಸಕ್ರಿಯ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿ ಭೀಮಣ್ಣ ಸಾಲಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಮಲ್ಲಿಕಾರ್ಜುನ ಬೆಣ್ಣೂರಕರ್ ಆಗ್ರಹ.

ಚಿತ್ತಾಪುರ: ರಾಜ್ಯ ಸರ್ಕಾರದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ದಲಿತ ಸಂಘರ್ಷ ಸಮಿತಿಯ ಕಲಬುರ್ಗಿ ಜಿಲ್ಲಾ ಅಧ್ಯಕ್ಷರು ಹಾಗೂ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬೆಣ್ಣೂರಕರ್ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, "ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ದೃಢ ಹಾಗೂ ದಕ್ಷ ನಾಯಕರಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ (IT-BT) ಸಚಿವರಾಗಿ ಅವರು ಕೈಗೊಂಡಿರುವ ಜನಪರ ಅಭಿವೃದ್ಧಿ ಕಾರ್ಯಗಳು, ಯುವ ಪೀಳಿಗೆಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಶೋಷಿತ ವರ್ಗಗಳ ಧ್ವನಿಯಾಗಿ ಅವರು ನಿರಂತರವಾಗಿ ಶ್ರಮಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ" ಎಂದು ಶ್ಲಾಘಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಸಿಗಲಿ ಸೂಕ್ತ ಪ್ರಾತಿನಿಧ್ಯ:
"ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಪ್ರಗತಿಗೆ ಮತ್ತು ದಲಿತ ಹಾಗೂ ಒಟ್ಟಾರೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಅತ್ಯಂತ ಸೂಕ್ತವಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷ ಹಾಗೂ ಸರ್ಕಾರವನ್ನು ಮತ್ತಷ್ಟು ಬಲಪಡಿಸಲು ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಈ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು" ಎಂದು ಬೆಣ್ಣೂರಕರ್ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಭಾನುವಾರ, ಮೇ 10, 2026

ವಿದ್ಯುತ್ ವ್ಯತ್ಯಯ: ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಸಾರ್ವಜನಿಕರ ಆಕ್ರೋಶ.

ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಗಾಳಿ, ಮಳೆ ಅಥವಾ ನೈಸರ್ಗಿಕ ವಿಕೋಪಗಳಿಲ್ಲದಿದ್ದರೂ ಏಕಾಏಕಿ ವಿದ್ಯುತ್ ಕಡಿತಗೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶನಿವಾರ ರಾತ್ರಿ 3:30 ಗಂಟೆಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಭಾನುವಾರ ಮಧ್ಯಾಹ್ನ ವರೆಗೆ ಸಂಪೂರ್ಣ ಸ್ಥಾಪನೆಯಾಗಿಲ್ಲ. ಇದರಿಂದಾಗಿ ಈ ಭಾಗದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ತೀವ್ರ ಉಷ್ಣತೆಯಿಂದಾಗಿ ಇಡೀ ರಾತ್ರಿ ನಿದ್ದೆಯಿಲ್ಲದೆ ಪರದಾಡುವಂತಾಯಿತು. ಯಾವುದೇ ಮುನ್ನೆಚ್ಚರಿಕೆ ನೀಡದೆ ವಿದ್ಯುತ್ ಕಡಿತಗೊಳಿಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಪತ್ರಕರ್ತರು ವಿದ್ಯುತ್ ಸರಬರಾಜು ಇಲಾಖೆಯ ಪಟ್ಟಣದ ಸೆಕ್ಷನ್ ಆಫೀಸರ್ (SO) ಮೋಹನ ರಾಠೋಡ ಅವರನ್ನು ಪ್ರಶ್ನಿಸಿದರೆ, "ತಾಂತ್ರಿಕ ದೋಷದಿಂದ ಕಡಿತವಾಗಿದೆ" ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಇನ್ನು ಉನ್ನತ ಅಧಿಕಾರಿಯಾದ ಎಇಇ (AEE) ಅವರಿಗೆ ಕರೆ ಮಾಡಿದರೂ, ಅವರ ಫೋನ್ ಮೂಲಕವೂ ಇದೇ ಎಸ್‌.ಓ ಉತ್ತರಿಸಿ, "ಒಮ್ಮೆ ಹೇಳಿದರೆ ಅರ್ಥವಾಗುವುದಿಲ್ಲವೇ? ಪದೇ ಪದೇ ಅದೇ ಸಮಸ್ಯೆ ಕೇಳುತ್ತಿದ್ದೀರಿ" ಎಂದು ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶನಿವಾರ ರಾತ್ರಿ ಪಟ್ಟಣದ ಪ್ರಸಿದ್ಧ ಚಿತ್ತಾವಲಿ ದರ್ಗಾದ ಜಾತ್ರಾ ಮಹೋತ್ಸವ ಹಾಗೂ ಗಂಧದ ಮೆರವಣಿಗೆ ಇತ್ತು. ಈ ಸಂದರ್ಭದಲ್ಲಿಯೂ ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ ಭಕ್ತಾದಿಗಳು ಕತ್ತಲಲ್ಲೇ ಸಂಚರಿಸುವಂತಾಯಿತು. ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸಮಸ್ಯೆಯ ಕುರಿತು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮಾಹಿತಿ ನೀಡಿದಾಗ, ಅವರು ತಕ್ಷಣ ಸ್ಪಂದಿಸಿ "ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆಗೆ ಮಾತನಾಡಿ ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.

"ಚಿತ್ತಾಪುರ ಪಟ್ಟಣದ ವಿದ್ಯುತ್ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿರುವ ಎಸ್.ಓ ಮೋಹನ ರಾಠೋಡ ಅವರನ್ನು ಕೂಡಲೇ ವರ್ಗಾವಣೆ ಮಾಡಿ, ಜನಸ್ನೇಹಿ ಅಧಿಕಾರಿಯನ್ನು ನೇಮಕ ಮಾಡಬೇಕು."

– ಸಾಬಣ್ಣ, ನಿವಾಸಿಗಳು, ಆಶ್ರಯ ಕಾಲೋನಿ.

=================================

"ಪಟ್ಟಣದಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ವರ್ತನೆ ಆಡಿದ್ದೇ ಆಟ ಎಂಬಂತಾಗಿದೆ. ಸಾರ್ವಜನಿಕರ ಮಾತಿಗೆ ಅವರು ಬೆಲೆ ಕೊಡುತ್ತಿಲ್ಲ. ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು."

– ಜಗದೀಶ ಸಾಗರ, ಸ್ಥಳೀಯ ನಿವಾಸಿ ಚಿತ್ತಾಪುರ

ಶನಿವಾರ, ಮೇ 9, 2026

ಬೆಥನಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.100 ಸಾಧನೆ.

ಚಿತ್ತಾಪೂರ : ತಾಲೂಕಿನ ಬೆಥನಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಥನಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಹಾಗೂ ಬೆಥನಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿವೆ.

ಕನ್ನಡ ಮಾಧ್ಯಮ ವಿಭಾಗದಲ್ಲಿ ಅಯಾನ್. 92.64%, ಪ್ರತಿಭಾ. 90.24%, ಕೀರ್ತನಾ. 89.44%, ಸೌಜನ್ಯ. 87.84%, ಮಹಾಲಕ್ಷ್ಮೀ. 85.44%, ಸುಷ್ಮಾ. 83.52%, ಸರ್ಫರಾಜ್ ಅಹ್ಮದ್. 82.72%, ಕಲ್ಪನಾ 82.24%, ಸಂಜನಾ. 81.76% ಹಾಗೂ ಸೌಭಾಗ್ಯ. 79.36% ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಹಾಗೂ ಇಂಗ್ಲಿಷ್ ಮಾಧ್ಯಮ ವಿಭಾಗದಲ್ಲಿ ಸಂಜನಾ ಎಸ್. 96%, ಸ್ಟೆಲ್ಲಾ ಡಿ. 92.16%, ರೇಣುಕಾ ಎನ್. 91.84%, ಕರಣ್ ವಿ. 91.68%, ಅಕ್ಷತಾ ಡಿ. 90.56%, ಗೋವಿಂದರಾಜು ಆರ್. 80.48%, ಎಂ.ಡಿ ಉಮರ್ ಫಾರೂಕ್ 80.32%, ಅಹಲ್ಯಾ ಸಿ. 79.84%, ಆರತಿ ಎಸ್. 79.20% ಹಾಗೂ ಸ್ವಾತಿ ಎ. 77.12% ಅಂಕಗಳನ್ನು ಪಡೆದು ಶಾಲೆಯ ಸಾಧನೆಗೆ ಮೆರುಗು ತಂದಿದ್ದಾರೆ.

ಶಾಲೆಯ ಈ ಅಭೂತಪೂರ್ವ ಸಾಧನೆಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಇದೇ ವೇಳೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ದಾಖಲಾತಿಗಳು ಪ್ರಾರಂಭವಾಗಿದ್ದು, ಉತ್ತಮ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬೋಧನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಬುಧವಾರ, ಮೇ 6, 2026

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಧೂಳಿಪಟವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಸೋಮವಾರ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ಚುನಾವಣಾ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಯಾರಿಗೂ ಎದೆಗುಂದದೆ ಧೈರ್ಯದಿಂದ ಚುನಾವಣೆ ಎದುರಿಸಿದ್ದರಿಂದ 15 ವರ್ಷಗಳ ಮಮತಾ ಆಡಳಿತ ಅಂತ್ಯಗೊಂಡಿದೆ. ಅದೇ ಮಾದರಿಯಲ್ಲಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಹ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ಪಕ್ಷವಾಗಿದ್ದು, ನಮ್ಮನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.

ಮಮತಾ ಬ್ಯಾನರ್ಜಿ ಸರ್ಕಾರವನ್ನು 'ರಾಕ್ಷಸಿ ರೂಪದ ಸರ್ಕಾರ' ಎಂದು ಟೀಕಿಸಿದ ಅವರು, "ಅಲ್ಲಿ ಸರ್ವಾಧಿಕಾರಿ ಧೋರಣೆ ಮತ್ತು ಭಯದ ವಾತಾವರಣವಿತ್ತು. ಮೋದಿ ಮತ್ತು ಅಮಿತ್ ಷಾ ಅವರು ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದರಿಂದಲೇ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ಬಿಜೆಪಿಯವರನ್ನು ರಸ್ತೆಗಿಳಿಯದಂತೆ ಮಾಡುವುದು ಹಾಗೂ ಆರ್‌ಎಸ್‌ಎಸ್ ಪಥಸಂಚಲನ ತಡೆಯುವ ಸಂಚು ನಡೆದಿತ್ತು. ಆದರೆ ಇಂದು ದೇಶವೇ ತಿರುಗಿ ನೋಡುವಂತೆ ಅದ್ದೂರಿ ಗೆಲುವು ಲಭಿಸಿದೆ," ಎಂದರು.

ಕ್ಷೇತ್ರದ ರಾಜಕೀಯದ ಕುರಿತು ಮಾತನಾಡಿದ ರಾಠೋಡ, "ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದ ಕಾರಣ ಸಾವಿರಾರು ಬೋಕಸ್ ಮತಗಳು ರದ್ದಾಗಿವೆ. ಅದೇ ರೀತಿ ಚಿತ್ತಾಪುರದಲ್ಲೂ ಎಸ್‌ಐಆರ್ ಪ್ರಕ್ರಿಯೆ ನಡೆಯಲಿದ್ದು, ಇಲ್ಲಿನ ಸುಮಾರು 18 ಸಾವಿರ ಬೋಕಸ್ ಮತಗಳು ಕಟ್ ಆಗಲಿವೆ. ಆಗ ಇಲ್ಲಿನ ಕಾಂಗ್ರೆಸ್ ಸರ್ಕಾರವೂ ಧೂಳಿಪಟವಾಗುವುದು ನಿಶ್ಚಿತ," ಎಂದು ಭವಿಷ್ಯ ನುಡಿದರು.

"ಬರುವ ದಿನಗಳಲ್ಲಿ ಇಲ್ಲಿನ ಶಾಸಕರಿಗೆ ಭವಿಷ್ಯವಿಲ್ಲ. ಅವರ ಹಿಂದೆ ಓಡಾಡುವುದನ್ನು ಬಿಡಿ. ನಮ್ಮವರೇ ಕೆಲವು ಮುಖಂಡರು ಶಾಸಕರನ್ನು ಭೇಟಿ ಮಾಡಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿರುವುದು ಪಕ್ಷದ ನಾಯಕರ ಗಮನದಲ್ಲಿದೆ."

— ಮಣಿಕಂಠ ರಾಠೋಡ, ಬಿಜೆಪಿ ಮುಖಂಡ.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಭಜಂತ್ರಿ, ಪುರಸಭೆ ಮಾಜಿ ಸದಸ್ಯ ಶಾಮ್ ಮೇಧಾ, ಅಶ್ವಥ್‌ ರಾಠೋಡ ಮಾತನಾಡಿದರು. ವೇದಿಕೆಯ ಮೇಲೆ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಯುವ ಅಧ್ಯಕ್ಷ ದೇವರಾಜ್ ತಳವಾರ ಸೇರಿದಂತೆ ಪ್ರಮುಖರಾದ ಬಸವರಾಜ ಸಂಕನೂರ, ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕರ್ತರು ಜೈಘೋಷಗಳನ್ನು ಕೂಗಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಸಡಗರದಿಂದ ಆಚರಿಸಿದರು.

ಗುರುವಾರ, ಏಪ್ರಿಲ್ 30, 2026

ದೇಶಿ ಗೋವಂಶ ‘ರಾಷ್ಟ್ರಮಾತೆ’ ಎಂದು ಘೋಷಿಸಲು ಶ್ರೀರಾಮ ಸೇನೆ ಆಗ್ರಹ.

ಚಿತ್ತಾಪುರ: ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಗೋವಿನ ಸಂತತಿಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ ದೇಶಿ ಗೋವಂಶವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ವಿಶೇಷ ಶಿಫಾರಸು ಕಳುಹಿಸಬೇಕು ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒತ್ತಾಯಿಸಿದರು.

ಪಟ್ಟಣದ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಂಘಟನೆಯ ಮುಖಂಡರು ಮಾತನಾಡಿದರು.

ಸಂವಿಧಾನದ 48ನೇ ವಿಧಿಗೆ ಅಗತ್ಯ ತಿದ್ದುಪಡಿ ತಂದು ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದರ ಜೊತೆಗೆ, ರಾಜ್ಯ ಮಟ್ಟದಲ್ಲೂ ದೇಶಿ ಗೋವಂಶವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಬೇಕು. ಗೋ ಕಳ್ಳಸಾಗಣೆ ಮತ್ತು ಹತ್ಯೆಯನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಬೇಕು. ತಪ್ಪಿತಸ್ಥರಿಗೆ ಆಜೀವ ಕಾರಾಗೃಹ ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಶ್ರೀರಾಮ ಸೇನೆಯ ಮುಖಂಡ ವಿಶ್ವಾರಾಧ್ಯ ತಳವಾರ ಮಾತನಾಡಿ, "ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ನಂದಿಶಾಲೆ’ ಹಾಗೂ ಜಿಲ್ಲಾ ಮಟ್ಟದಲ್ಲಿ ಕನಿಷ್ಠ ಒಂದು ಮಾದರಿ ‘ಗೋ ಅಭಯಾರಣ್ಯ’ ಸ್ಥಾಪಿಸಬೇಕು. ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಗೋವುಗಳ ಚಿಕಿತ್ಸೆಗಾಗಿ ಪ್ರತಿ 50 ರಿಂದ 100 ಕಿ.ಮೀ ಅಂತರದಲ್ಲಿ ‘ಗೋ-ವಾಹಿನಿ’ ಆಂಬುಲೆನ್ಸ್ ಮತ್ತು ಟ್ರಾಮಾ ಸೆಂಟರ್‌ಗಳ ವ್ಯವಸ್ಥೆ ಕಲ್ಪಿಸಬೇಕು," ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಮುಖಂಡರಾದ ವಾಲ್ಮೀಕ ಚವ್ಹಾಣ, ಸಂಜಯ ರಾಠೋಡ, ವೆಂಕಟೇಶ ಚವ್ಹಾಣ, ಆಕಾಶ, ಗುರುರಾಜ, ರೋಹನ್ ಜಾಧವ್, ಅರುಣ ಪವಾರ, ಈಶ್ವರ ರಾಠೋಡ, ಆದಿತ್ಯ, ಕುಮಾರ ರಾಠೋಡ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಚಿತ್ತಾಪುರ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಪ್ರಮುಖ: ಗುತ್ತೇದಾರ 

ಚಿತ್ತಾಪುರ: ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಬಹಳ ಪ್ರಮುಖವಾಗಿದೆ ಎಂದು ಹಿರಿಯ ಪತ್ರಕರ್ತ ಕಾಶಿನಾಥ ಹೇಳಿದರು.

ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕ ಆಸ್ಪತ್ರೆ ಚಿತ್ತಾಪುರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತೀಯ ರೆಡ್ ಕ್ರಾಸ್ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಶೈಕ್ಷಣಿಕ ಸಾಲಿನ ಒಂದು ದಿವಸದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆರೋಗ್ಯಯುತ ಸಮಾಜ ನಿರ್ಮಾಣ ಆಗಬೇಕಾದರೆ ಅದು ಯುವಕ ಯುವತಿಯರ ಮೇಲಿದೆ ಎಂದರು.

ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ದೇವಸ್ಥಾನಗಳು ಹಾಗೂ ದಾವಖಾನೆಗಳು ಹೌಸ್ ಫುಲ್ ಆಗಿವೆ, ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಾಗಿವೆ ಇದೇ ದುರಂತ ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಂತ ಆರೋಗ್ಯ ಅಧಿಕಾರಿ ಡಾ. ಖನಿಜ್ ಫಾತಿಮಾ ಮಾತನಾಡಿ, ಜೀವನ ಶೈಲಿ ಹೇಗೆ ಇರುತ್ತದೆ ಹಾಗೆ ಆರೋಗ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಯುವಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಅದರಲ್ಲೂ ಹಲ್ಲಿನ ಸುರಕ್ಷೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸುಜ್ಞಾನಿ ಪಾಟೀಲ್ ಮಾತನಾಡಿ, ಇಂದಿನ ಯುವಕರೇ ಮುಂದಿನ ಪ್ರಜೆಗಳು ಎಂದು ಹೇಳಿದ ಅವರು ಪ್ರಮುಖವಾಗಿ ಎಚ್ಐವಿ ಸೋಂಕಿನ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವ ಸಂದೇಶವನ್ನು ಅರಿತುಕೊಂಡು ಇಂದಿನ ಯುವ ಜನಾಂಗ ಸಾಗಬೇಕು. ಈ ನಿಟ್ಟಿನಲ್ಲಿ ದೇವರು ಕೊಟ್ಟ ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಶಶಿಧರ್ ಯಡ್ರಾಮಿ, ಆಸ್ಮಾ ನಿಖತ್, ಪ್ರಾಧ್ಯಾಪಕರಾದ ಪ್ರೋ.ಮಲ್ಲಪ್ಪ ಮಾನೇಗಾರ್, ಶರಣಬಸಪ್ಪ ರಾಯ್ಕೋಟಿ, ರೋಹಿಣಿ ಕಲ್ಮಟ್, ನಾಗವೇಣಿ, ಲಕ್ಷ್ಮೀಪುತ್ರ ಪಾಸೋಡಿ, ಕೈಲಾಸಪತಿ ವಿಶ್ವಕರ್ಮ, ಶರಣಪ್ಪ ದಿಗ್ಗಾಂವ, ಮರೇಪ್ಪ ಮೇತ್ರೆ, ಶ್ರೀಕಾಂತ್, ಅಭಿಷೇಕ್, ವಿಜಯಲಕ್ಷ್ಮೀ ರಾಠೋಡ, ಮಂಜುನಾಥ ದೇಶಪಾಂಡೆ, ಆಸ್ಪತ್ರೆಯ ನಿಜಾಮುದ್ದೀನ್, ಗುರುರಾಜ್ ಮುಗುಳಿ, ಪತ್ರಕರ್ತ ಸಂತೋಷಕುಮಾರ ಕಟ್ಟಿಮನಿ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎನ್ಎಸ್ಎಸ್ ಅಧಿಕಾರಿ ಡಾ. ಸಂಗಪ್ಪ ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಗುರೇಶ್ವರ ಆರ್ ಮಠಪತಿ ಸ್ವಾಗತಿಸಿದರು, ಮಲ್ಲಪ್ಪ ತೊಟ್ನಳ್ಳಿ ನಿರೂಪಿಸಿದರು, ಡಾ. ವಿಲಾಸ್ ವಂದಿಸಿದರು. ನಂತರ ಆರೋಗ್ಯ ತಪಾಸಣೆ ನಡೆಯಿತು. ವಿದ್ಯಾರ್ಥಿಗಳು ಶಿಬಿರದ ಸಂಪೂರ್ಣ ಸದುಪಯೋಗ ಪಡಿಸಿಕೊಂಡರು.

ಸೋಮವಾರ, ಏಪ್ರಿಲ್ 27, 2026

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ: ವಿದ್ಯಾರ್ಥಿಗಳ ಭರ್ಜರಿ ಸಾಧನೆ

jtvkannada
ಚಿತ್ತಾಪುರ: ಪಟ್ಟಣದ ನಾಗಾವಿ ಕ್ಯಾಂಪಸ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಸ್.ಸಿ) 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ತಾಲ್ಲೂಕಿನ ಗಮನ ಸೆಳೆದಿದೆ.

ಶಾಲೆಯ ಈ ಸಾಧನೆಯ ಕುರಿತು ಪ್ರಾಚಾರ್ಯರಾದ ಬಸವರಾಜ ಅವಂಟಿ ಅವರು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು  ಒಟ್ಟು ಹಾಜರಾದವರು 43 ವಿದ್ಯಾರ್ಥಿಗಳು,ತೇರ್ಗಡೆಯಾದವರು 43 ವಿದ್ಯಾರ್ಥಿಗಳು (ಶೇ.100 ಫಲಿತಾಂಶ) ಉನ್ನತ ಶ್ರೇಣಿ (Distinction) 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ 29 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿ: 02 ವಿದ್ಯಾರ್ಥಿಗಳು, ಸಾಮಾನ್ಯ ಶ್ರೇಣಿ:,02 ವಿದ್ಯಾರ್ಥಿಗಳು ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಹರ್ಷಾನಂದ್: 625ಕ್ಕೆ 594 ಅಂಕಗಳನ್ನು (95.04%) ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಕೇಶವ್ ನಾಯ್ಯೋಡಿ: 591 ಅಂಕಗಳನ್ನು (94.56%) ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

"ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಹಾಗೂ ಶಿಕ್ಷಕ ವೃಂದದ ಸೂಕ್ತ ಮಾರ್ಗದರ್ಶನದಿಂದಾಗಿ ಈ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದೆ. ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು." 

— ಬಸವರಾಜ ಅವಂಟಿ, ಪ್ರಾಚಾರ್ಯರು

ಈ ಗಮನಾರ್ಹ ಸಾಧನೆಗೆ ಶಾಲೆಯ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಪೊಲೀಸರ ಮಿಂಚಿನ ಕಾರ್ಯಾಚರಣೆ: 'ಡಾನ್'ಗಳಿಗೆ ಬೆಳ್ಳಂಬೆಳಗ್ಗೆ ಖಾಕಿ ಶಾಕ್!

​ಗಲ್ಲಿಗಳಲ್ಲಿ ದಾದಾಗಿರಿ ನಡೆಸುವ ಕಿಡಿಗೇಡಿಗಳಿಗೆ ಡಿವೈಎಸ್‌ಪಿ ಖಡಕ್ ಎಚ್ಚರಿಕೆ; 

50ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ.

​ಚಿತ್ತಾಪುರ: ಪಟ್ಟಣದಲ್ಲಿ ತಾವೇ ‘ಡಾನ್’ಗಳೆಂದು ಮೆರೆಯುತ್ತಾ ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿದ್ದ ಕಿಡಿಗೇಡಿಗಳಿಗೆ ಚಿತ್ತಾಪುರ ಮತ್ತು ವಾಡಿ ಪೊಲೀಸರು ಸದ್ದಿಲ್ಲದೆ ಶಾಕ್ ನೀಡಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ರೌಡಿಗಳ ಮನೆಗಳಿಗೆ ಲಗ್ಗೆ ಇಟ್ಟ ಪೊಲೀಸರು, "ಇನ್ಮುಂದೆ ದಾದಾಗಿರಿ ನಡೆಸಿದರೆ ಅಟ್ಟಾಡಿಸಿ ಹೊಡೆಯುತ್ತೇವೆ" ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

​ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಎಷ್ಟು ಆಕಸ್ಮಿಕವಾಗಿತ್ತೆಂದರೆ, ನಿದ್ರೆಯಲ್ಲಿದ್ದ ಹಳೆ ಕದೀಮರು ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಚಿತ್ತಾಪುರ ವೃತ್ತದ ವ್ಯಾಪ್ತಿಯಲ್ಲಿ ಬರುವ ಸುಮಾರು 50ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳನ್ನು ಪೊಲೀಸರು ಇಂಚಿಂಚಾಗಿ ಜಾಲಾಡಿದ್ದಾರೆ.

​ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರಬಹುದಾದ ಮಾರಕಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳಿಗಾಗಿ ಹದ್ದಿನ ಕಣ್ಣಿನಿಂದ ತಪಾಸಣೆ ನಡೆಸಲಾಯಿತು. ಈ ವೇಳೆ ಪ್ರತಿಯೊಬ್ಬ ರೌಡಿಯ ಇತ್ತೀಚಿನ ಚಟುವಟಿಕೆಗಳು, ಅವರು ಯಾರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಅವರ ಸಂಪರ್ಕದಲ್ಲಿರುವವರು ಯಾರು ಎಂಬ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.


​"ರಸ್ತೆಯಲ್ಲಿ ತಲೆ ಎತ್ತಿ ಓಡಾಡಬೇಕಿರುವುದು ಜನಸಾಮಾನ್ಯರೇ ಹೊರತು ರೌಡಿಗಳಲ್ಲ. ಕಾನೂನಿಗೆ ಗೌರವ ಕೊಡದವರಿಗೆ ಪೊಲೀಸ್ ಲಾಠಿಯೇ ಉತ್ತರ ನೀಡಲಿದೆ."
— ಪೊಲೀಸ್ ಇಲಾಖೆಯ ಖಡಕ್ ಎಚ್ಚರಿಕೆ.

​ಸಮಾಜಘಾತುಕ ಶಕ್ತಿಗಳ ಎಡೆಮುರಿ ಕಟ್ಟಲು ಫೀಲ್ಡಿಗಿಳಿದಿರುವ ಖಾಕಿ ಪಡೆ, ಈಗಾಗಲೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಪಟ್ಟಿಯನ್ನು ಸಿದ್ಧಪಡಿಸಿದೆ. ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕರ ನೆಮ್ಮದಿ ಕೆಡಿಸುವವರ ಅಡ್ಡಾಗಳನ್ನು ಧೂಳೀಪಟ ಮಾಡುವುದಾಗಿ ಪೊಲೀಸರು ಈ ದಾಳಿಯ ಮೂಲಕ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಮಿಂಚಿನ ದಾಳಿಯಲ್ಲಿ ಚಿತ್ತಾಪುರ ಪಿಎಸ್‌ಐ ಮಂಜುನಾಥ ರೆಡ್ಡಿ, ವಾಡಿ ಪಿಎಸ್‌ಐ ತಿರುಮಲೇಶ್ ಕೆ. ಸೇರಿದಂತೆ ಎರಡೂ ಠಾಣೆಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪೊಲೀಸರ ಈ ಧೀರ ನಡೆಯನ್ನು ಕಂಡು ಪಟ್ಟಣದ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಅನುಭವ ಮಂಟಪವೇ ವಿಶ್ವದ ಪ್ರಪ್ರಥಮ ಸಂಸತ್ತು: ಲೇಖಕಿ ಪೂಜಾ ಭಂಕಲಗಿ.

ಚಿತ್ತಾಪುರ: "ಬ್ರಿಟನ್ ದೇಶದವರು ತಮ್ಮ ಸಂಸತ್ತೇ ಮೊದಲನೆಯದು ಎಂದು ಪ್ರತಿಪಾದಿಸುತ್ತಾರೆ. ಆದರೆ, ಅದಕ್ಕಿಂತಲೂ ಶತಮಾನಗಳ ಹಿಂದೆ ಕರುನಾಡಿನಲ್ಲಿ ವಿವಿಧ ವರ್ಗದ ಶರಣರನ್ನು ಒಗ್ಗೂಡಿಸಿ, ಎಲ್ಲರಿಗೂ ಸಮಾನ ಮಾನ್ಯತೆ ನೀಡಿದ ಬಸವಣ್ಣನವರು ಸ್ಥಾಪಿಸಿದ 'ಅನುಭವ ಮಂಟಪ'ವೇ ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್," ಎಂದು ಲೇಖಕಿ ಪೂಜಾ ಆರ್. ಭಂಕಲಗಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಭಾಗೋಡಿ ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. "ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ಜಾತಿ ಪದ್ಧತಿ ಹಾಗೂ ಅಸಮಾನತೆಯ ವಿರುದ್ಧ ನಿರಂತರ ಹೋರಾಡಿದವರು. ಆದರೆ ಇಂದಿಗೂ ಸಮಾಜದಲ್ಲಿ ಅಸಮಾನತೆ ಚಾಲ್ತಿಯಲ್ಲಿರುವುದು ದುರ್ದೈವದ ಸಂಗತಿ," ಎಂದು ಬೇಸರ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಗುರುಮಿಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿ, "ವಚನ ಸಾಹಿತ್ಯವೆಂಬ ಮಹಾನ್ ಸಂಪತ್ತನ್ನು ಜಗತ್ತಿಗೆ ನೀಡಿದ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಮಾಡಿದ ಕ್ರಾಂತಿ ಇತಿಹಾಸದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿತು," ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪದ್ಮಣ್ಣಗೌಡ ಪಾಟೀಲ ಮಾತನಾಡಿ, "ಬಸವಣ್ಣನವರ ತತ್ವಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಅವು ನಮ್ಮ ದೈನಂದಿನ ಜೀವನದ ಹಾದಿಯಾಗಬೇಕು. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿದಾಗ ಮಾತ್ರ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ. ಗ್ರಾಮದ ಯುವಜನತೆ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು," ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ನಾಗರಾಜ ಭಂಕಲಗಿ, ದೇವಿಂದ್ರ ಅರಣಕಲ್, ಬಸವರಾಜ ಪಾಟೀಲ್ ದಳಪತಿ, ರಾಮಲಿಂಗ ಬಾನಾರ್‌, ಭೀಮಣ್ಣ ಹೋತಿನಮಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಹಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಎಂಬತ್ನಾಳ ಸ್ವಾಗತಿಸಿದರು, ಮಾಲಾಶ್ರೀ ನಿರೂಪಿಸಿ, ವಂದಿಸಿದರು.

ಭಾನುವಾರ, ಏಪ್ರಿಲ್ 26, 2026

ಕಲಬುರಗಿ ಜಿಲ್ಲೆಗೆ ಚಿತ್ತಾಪುರ ತಾಲೂಕು ದ್ವಿತೀಯ: ಶೇ. 87.89 ಸಾಧನೆ.

ಚಿತ್ತಾಪುರ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಚಿತ್ತಾಪುರ ತಾಲೂಕು ಅಭೂತಪೂರ್ವ ಸುಧಾರಣೆ ಕಂಡಿದೆ. ಕಳೆದ ಬಾರಿ ಕೇವಲ ಶೇ. 40.88 ಫಲಿತಾಂಶ ಪಡೆದಿದ್ದ ತಾಲೂಕು, ಈ ಬಾರಿ ಶೇ. 87.89 ರಷ್ಟು ಅಂಕಗಳನ್ನು ಗಳಿಸುವ ಮೂಲಕ ಕಲಬುರಗಿ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನ ಅಲಂಕರಿಸಿದೆ.

ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಂಬ ಭೇದವಿಲ್ಲದೆ ಎಲ್ಲಾ ಶಾಲೆಗಳು ಉತ್ತಮ ಸಾಧನೆ ತೋರಿವೆ ಸರ್ಕಾರಿ ಶಾಲೆಗಳು, ಹಾಜರಾದ 2952 ವಿದ್ಯಾರ್ಥಿಗಳಲ್ಲಿ 2601 ಮಂದಿ ಉತ್ತೀರ್ಣರಾಗಿದ್ದು, ಶೇ. 87.81 ಫಲಿತಾಂಶ ಬಂದಿದೆ.ಅನುದಾನಿತ ಶಾಲೆಗಳು, ಹಾಜರಾದ 734 ವಿದ್ಯಾರ್ಥಿಗಳಲ್ಲಿ 639 ಮಂದಿ ಉತ್ತೀರ್ಣರಾಗಿದ್ದು, ಶೇ. 87.6 ಸಾಧನೆಯಾಗಿದೆ.
ಅನುದಾನರಹಿತ ಶಾಲೆಗಳು, ಹಾಜರಾದ 1401 ವಿದ್ಯಾರ್ಥಿಗಳಲ್ಲಿ 1240 ಮಂದಿ ಉತ್ತೀರ್ಣರಾಗಿದ್ದು, ಶೇ. 88.51 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ ತಾಲೂಕಿನ 5097 ವಿದ್ಯಾರ್ಥಿಗಳ ಪೈಕಿ 4480 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.

ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಗಳು
ತಾಲೂಕಿನ ಒಟ್ಟು 23 ಶಾಲೆಗಳು ಶೇ. 100 ರಷ್ಟು ಫಲಿತಾಂಶ ದಾಖಲಿಸಿವೆ. ಅವುಗಳಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯ ಚಿತ್ತಾಪುರ, ಆಲ್ ಅಮೀನ್ ಉರ್ದು ಪ್ರೌಢ ಶಾಲೆ ವಾಡಿ, ಬೆಥನಿ ಶಾಲೆ, ಅಂಬೇಡ್ಕರ್ ಶಾಲೆ, ಕಂದಗೋಳ, ದಂಡೋತಿ, ಹೆಬ್ಬಾಳ, ನಾಲವಾರ, ಚಿನಚೋಳಿ ಎಚ್, ಶೆಳ್ಳಗಿಯ ಸರ್ಕಾರಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು (ಗುಂಡಗುರ್ತಿ, ವಾಡಿ), ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ವಿದ್ಯಾನಿಕೇತನ ಪ್ರೌಢ ಶಾಲೆ ಪ್ರಮುಖವಾಗಿವೆ.

ತಾಲೂಕಿನ ಟಾಪ್ 10 ಪ್ರತಿಭಾವಂತ ವಿದ್ಯಾರ್ಥಿಗಳಾದ ಹೆಬ್ಬಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶ್ವೇತಾ (619) ಅತಿ ಹೆಚ್ಚು ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉಳಿದಂತೆ ಸುಮಂತ್ (614), ನಿವೇದಿತಾ ನಂದಾ (612), ಅಕ್ಷತಾ (612), ಚೈತನ್ಯ (610), ಶುಭಂ (609), ಖುಷಿ (608), ಎಂ.ಡಿ. ಅಮೀನ್ ಪಟೇಲ (608), ಶ್ರೀಲಕ್ಷ್ಮಿ (608) ಹಾಗೂ ಮದನ್ (607) ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಫಲಿತಾಂಶ ಸುಧಾರಣೆಗೆ ಕಾರಣವಾದ ಅಂಶಗಳು
"ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 47 ರಷ್ಟು ಫಲಿತಾಂಶ ಏರಿಕೆಯಾಗಿದೆ. ಇದಕ್ಕೆ ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒದಗಿಸಿದ 'ಅರಿವೆ ಗುರು' ಪುಸ್ತಕ (4 ಮಾದರಿ ಪ್ರಶ್ನೆ ಪತ್ರಿಕೆಗಳು), ಮಿಷನ್-40+, ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಸಿಇಒ ಅವರ ಮಾರ್ಗದರ್ಶನ ಕಾರಣ," ಎಂದು ಬಿಇಒ ಶಶಿಧರ ಬಿರಾದಾರ ಹೇಳಿದ್ದಾರೆ.

ಜೊತೆಗೆ ಜನವರಿ 2025 ರಿಂದ ಶನಿವಾರ ಮತ್ತು ಭಾನುವಾರ ವಿಶೇಷ ತರಗತಿ, 'ವೇಕ್ ಅಪ್ ಕಾಲ್', ಮಕ್ಕಳ ಮನೆ ಭೇಟಿ, ಡಯಟ್ ತಂಡದ ದತ್ತು ಯೋಜನೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನೀಡಿದ ವಿಶೇಷ ಆದ್ಯತೆ ಈ ಯಶಸ್ಸಿಗೆ ನಾಂದಿ ಹಾಡಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಈಗಿನಿಂದಲೇ ಯೋಜನೆ ರೂಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋಶಾಲೆಗೆ ಮೇವು, ದೇಣಿಗೆ ನೀಡಿದ ಮುಸ್ಲಿಂ ಕುಟುಂಬ: ಶ್ರೀಗಳ ಶ್ಲಾಘನೆ.

ಚಿತ್ತಾಪುರ: ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇಲ್ಲಿನ ಮುಸ್ಲಿಂ ಸಮುದಾಯದ ಕುಟುಂಬವೊಂದು ಪಟ್ಟಣದ ಗೋಶಾಲೆಗೆ ಮೇವು ಮತ್...