ಚಿತ್ತಾಪುರ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ '2025ರ ಊರ್ಜಿತಗೊಳಿಸುವಿಕೆ ಕಾಯ್ದೆ ಪಿಂಚಣಿದಾರರ ನಡುವೆ ತಾರತಮ್ಯ ಉಂಟು ಮಾಡುತ್ತಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ರೇವಣಸಿದ್ದಪ್ಪ ರೋಣದ ಅವರು, "ಮಾರ್ಚ್ 25, 2025 ರಂದು ಹಣಕಾಸು ಮಸೂದೆಯ ಭಾಗವಾಗಿ ಯಾವುದೇ ಪೂರ್ವ ಚರ್ಚೆ ಅಥವಾ ಸೂಚನೆ ಇಲ್ಲದೆ ಈ ಕಾಯ್ದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿ ಜಾರಿಗೆ ತರಲಾಗಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈ ಕಾಯ್ದೆಯು ನಿವೃತ್ತಿ ದಿನಾಂಕದ ಆಧಾರದ ಮೇಲೆ ಪಿಂಚಣಿದಾರರನ್ನು ವಿವಿಧ ವರ್ಗಗಳಾಗಿ ವಿಂಗಡಿಸುತ್ತದೆ. ಇದರಿಂದಾಗಿ ಹಳೆಯ ಪಿಂಚಣಿದಾರರು ಮುಂದಿನ ವೇತನ ಆಯೋಗಗಳ ಶಿಫಾರಸು ಮತ್ತು ಹೆಚ್ಚುವರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿರುವ ನಿವೃತ್ತ ನೌಕರರಿಗೆ ಆರ್ಥಿಕ ಹೊಡೆತ ನೀಡುವ ಈ ಕ್ರಮ ಅತ್ಯಂತ ಕಠಿಣವಾಗಿದೆ," ಎಂದು ಅವರು ವಿವರಿಸಿದರು.
"ಡಿ.ಎಸ್. ನಕಾರ ಮತ್ತು ಇತರರು ವಿರುದ್ಧ ಭಾರತ ಒಕ್ಕೂಟದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಪ್ರಕಾರ, ಪಿಂಚಣಿ ಎಂಬುದು ವೃದ್ಧಾಪ್ಯದ ಸಾಮಾಜಿಕ ಭದ್ರತೆಯಾಗಿದೆ. ಆದರೆ ಈ ಹೊಸ ಕಾಯ್ದೆಯು ನ್ಯಾಯಾಂಗದ ಘೋಷಣೆಗಳನ್ನು ಗಾಳಿಗೆ ತೂರಿದೆ. ಸರ್ಕಾರವು ತನ್ನ ನಾಗರಿಕರಿಗೆ ನ್ಯಾಯ ಒದಗಿಸುವ ಉದ್ದೇಶಕ್ಕೆ ಇದು ವಿರುದ್ಧವಾಗಿದೆ," ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಹಶೀಲ್ದಾರ್ ಅವರು ಮನವಿ ಪತ್ರವನ್ನು ಸ್ವೀಕರಿಸಿ, ಇದನ್ನು ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಶಿಧರ ಪಾಟೀಲ್, ಮಲ್ಲಣ್ಣ ಮಾಸ್ತರ್, ವಿಜಯಕುಮಾರ್ ಲೋಡೆನೂರ, ಮಹದೇವಪ್ಪ ಉಪ್ಪಾರ, ಕಿಶನ್ ರಾಠೋಡ್, ಸುಭಾಷ ಮೆಂಗಾಜಿ, ಸಿದ್ದಯ್ಯ ಸ್ಥಾವರಮಠ, ಬಾಬು ಕರದಾಳ, ಬಸವರಾಜ ಕಲಬುರ್ಗಿ, ಮಲ್ಲಿಕಾರ್ಜುನ, ಶಿವನಾಗಪ್ಪ, ದೇವಪ್ಪ ನಂದೂರಕರ್, ದೇವಿಂದ್ರ ಶಾಹಬಾದಕರ್, ತುಕಾರಾಂ ನಾಯಕ, ಶ್ರೀಮತಿ ಸರಳಾದೇವಿ, ಶ್ರೀಮತಿ ಶಾಂತಾ ಬಾಯಿ, ಶ್ರೀಮತಿ ಮಾಯಾದೇವಿ ರೋಣದ, ಶ್ರೀಮತಿ ಸರಸ್ವತಿ ಪಾಟೀಲ್, ಲಕ್ಷ್ಮಣ್ ಭಜಂತ್ರಿ, ಮೋನಯ್ಯ ವಿಶ್ವಕರ್ಮ, ಸಿದ್ದಣ್ಣ ಮೂಡಲಕರ್, ಮೈಬೂಬ್ ಅಲಿ ಅಲ್ಲೂರ, ನಬೀ ಸಾಬ ಸೇರಿದಂತೆ ಸಂಘದ ಅನೇಕ ನಿವೃತ್ತ ನೌಕರರು ಉಪಸ್ಥಿತರಿದ್ದರು.