ಮಂಗಳವಾರ, ಏಪ್ರಿಲ್ 7, 2026

ವಾಣಿಜ್ಯ ಸಿಲಿಂಡರ್, ಔಷಧ ಬೆಲೆ ಏರಿಕೆ: ಎಸ್‌ಯುಸಿಐ (ಸಿ) ತೀವ್ರ ವಿರೋಧ

ವಾಡಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಅಡುಗೆ ಅನಿಲ ಹಾಗೂ ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಿರುವುದನ್ನು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವಾಡಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಸ್ಥಳೀಯ ಕಾರ್ಯದರ್ಶಿ ಶರಣು ಹೇರೂರ್, ಕೇಂದ್ರದ ಬಿಜೆಪಿ ಸರ್ಕಾರವು ಸಾಮಾನ್ಯ ಜನರನ್ನು ಬೆಲೆ ಏರಿಕೆಯ ಸುಳಿಯಿಂದ ರಕ್ಷಿಸುವ ಬದಲು ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳಿಂದ ಜನ ಸಾಮಾನ್ಯರ ಮೇಲೆ ಬಿದ್ದಿರುವ ಹೊರೆಗಳಾದ ಕೇವಲ 25 ದಿನಗಳ ಅಂತರದಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 218 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಇದರ ಮಾರುಕಟ್ಟೆ ಬೆಲೆ 2208 ರೂಪಾಯಿ ಆಗಿದೆ.

ಕಳೆದ ತಿಂಗಳಷ್ಟೇ ಗೃಹಬಳಕೆಯ ಎಲ್‌ಪಿಜಿ ಬೆಲೆಯನ್ನು 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50 ರೂ. ಹೆಚ್ಚಿಸಲಾಗಿತ್ತು. ಸುಮಾರು 700 ರಿಂದ 900 ಅಗತ್ಯ ಔಷಧಿಗಳ ಬೆಲೆಯನ್ನು ಏರಿಕೆ ಮಾಡಿರುವುದು ರೋಗಿಗಳು ಮತ್ತು ಬಡ ಕುಟುಂಬಗಳಿಗೆ ಮರಣ ಶಾಸನವಾದಂತಿದೆ.

"ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ಮತ್ತು ಔಷಧಗಳ ಬೆಲೆ ಏರಿಸಿರುವುದು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ."

— ಶರಣು ಹೇರೂರ್, ಸ್ಥಳೀಯ ಕಾರ್ಯದರ್ಶಿ, SUCI(C)

ಈ ಕೂಡಲೇ ಏರಿಸಲಾದ ಬೆಲೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರದ ಈ ಜನವಿರೋಧಿ ಧೋರಣೆಯ ವಿರುದ್ಧ ಸಾರ್ವಜನಿಕರು ಸಂಘಟಿತರಾಗಿ ಧ್ವನಿ ಎತ್ತಬೇಕು ಮತ್ತು ಪ್ರತಿಭಟನೆಯ ಹಾದಿ ಹಿಡಿಯಬೇಕು ಎಂದು ಕರೆ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಸೋಲಿಸುವುದೇ ನನ್ನ ಅಜೆಂಡಾ: ಮಣಿಕಂಠ.

ಚಿತ್ತಾಪುರ: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಪೂರ್ಣ ಭರವಸೆ ಇದೆ. ಒಂದು ವೇಳೆ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೂ ಸಹ, ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಆದರೆ, ಈ ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ನನ್ನ ಏಕೈಕ ಗುರಿಯಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಘೋಷಿಸಿದರು.

ಪಟ್ಟಣದ ಲಾಡ್ಡಿಂಗ್ ಕ್ರಾಸ್ ಬಳಿ ರಾತ್ರಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ 26 ವರ್ಷದ ಸಣ್ಣ ವಯಸ್ಸಿನಲ್ಲೇ ಬಿಜೆಪಿ ನನಗೆ ಟಿಕೆಟ್ ನೀಡಿ ಆಶೀರ್ವದಿಸಿತ್ತು. ಚಿತ್ತಾಪುರ ಇತಿಹಾಸದಲ್ಲೇ ಬಿಜೆಪಿಗೆ ಅತಿ ಹೆಚ್ಚು ಅಂದರೆ 67,683 ಮತಗಳು ಲಭಿಸಿವೆ. ನಮ್ಮ ಕುಟುಂಬದಲ್ಲಿ ಯಾರೊಬ್ಬರೂ ಗ್ರಾಪಂ ಸದಸ್ಯರೂ ಆಗಿಲ್ಲದ ಕಾರಣ, ರಾಜಕೀಯ ಅನುಭವದ ಕೊರತೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರದಿಂದಾಗಿ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಗಡ್ಡ ಬಿಟ್ಟುಕೊಂಡು ಕುಟುಂಬದ ಹೆಸರಿನಲ್ಲಿ ಅವರು ರಾಜಕೀಯ ನಾಟಕವಾಡಿದರು ಎಂದು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ಹಗರಣಗಳನ್ನು ಬಯಲಿಗೆ ತರುವುದು ಹಾಗೂ ಕ್ಷೇತ್ರದಲ್ಲಿ ಅವರ ಬೆಂಬಲಿಗರ ದಾದಾಗಿರಿ ಮತ್ತು ಗುಂಡಾಗಿರಿಯನ್ನು ಮಟ್ಟಹಾಕುವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ಸುಳ್ಳು ಕೇಸುಗಳನ್ನು ಹಾಕಿ ನನ್ನನ್ನು 2024ರ ಡಿಸೆಂಬರ್‌ನಲ್ಲಿ ಗಡಿಪಾರು ಮಾಡಿಸಲಾಯಿತು. ಇದರಿಂದ ಕ್ಷೇತ್ರಕ್ಕೆ ಬರಲು ಅಡ್ಡಿಯಾಯಿತು. ಆದರೆ ಚಿತ್ತಾಪುರದ ಜನತೆ ನೀಡಿದ ಶಕ್ತಿಯಿಂದ ನಾನು ಮತ್ತೆ ಎದ್ದು ನಿಂತಿದ್ದೇನೆ.ಎಂದರು.

"ಇತ್ತೀಚೆಗೆ ತಂದೆ-ಮಗ (ಖರ್ಗೆ ಕುಟುಂಬ) ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದರೂ ಹಣ ಕೊಟ್ಟು ಜನರನ್ನು ಕರೆಯಿಸುವ ಪರಿಸ್ಥಿತಿ ಬಂದಿದೆ. ಆದರೆ ನಾನು ಹೋದ ಕಡೆಯಲ್ಲೆಲ್ಲ ಜನ ಸ್ವಯಂಪ್ರೇರಿತರಾಗಿ ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಮಗನಂತೆ ಕಾಣುತ್ತಿದ್ದಾರೆ," ಎಂದು ಭಾವುಕರಾದರು.

ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಬೇರೆ ಆಕಾಂಕ್ಷಿಗಳು ಬಂದರೆ ಪಕ್ಷ ಬಲಿಷ್ಠವಾಗುತ್ತದೆ ಹೊರತು ಅದಕ್ಕೆ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶ್ವಥ್ ರಾಠೋಡ, ಶ್ರೀಕಾಂತ್ ಸುಲೇಗಾಂವ, ಜಿ.ಎಸ್.ಹಿರೇಮಠ, ಶಂಭುಲಿಂಗ ವಿಶ್ವಕರ್ಮ, ಸುನೀಲ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭಾನುವಾರ, ಏಪ್ರಿಲ್ 5, 2026

ಸಮಾಜಮುಖಿ ಕಾರ್ಯಗಳಿಂದ ಜನ್ಮದಿನಕ್ಕೆ ಸಾರ್ಥಕತೆ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಜನ್ಮದಿನೋತ್ಸವವು ಕೇವಲ ಆಚರಣೆಯಾಗದೆ, ಬಡವರು, ದೀನದಲಿತರಿಗೆ ಹಾಗೂ ಸಮಾಜಕ್ಕೆ ಅನುಕೂಲವಾದಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ತಮ್ಮ 59ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಜನ್ಮದಿನದ ಅಂಗವಾಗಿ ಭಕ್ತರು ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಂಪತ್ತನ್ನು ಸತ್ಕಾರ್ಯಕ್ಕೆ ಬಳಸಿದಾಗ ಮಾತ್ರ ನಿಜವಾದ ತುಲಾಭಾರಕ್ಕೆ ಬೆಲೆ ಬರುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಹಾನಗಲ್ಲ ಕುಮಾರೇಶ್ವರರ ವಾಣಿಯಂತೆ, ಭಕ್ತರ ದೇಣಿಗೆ ಹಾಗೂ ಸರ್ಕಾರದ ಅನುದಾನದ ಸದ್ಬಳಕೆ ಮಾಡಿಕೊಂಡು ಶಿಥಿಲವಾಗಿದ್ದ ಮಠವನ್ನು ಇಂದು ಮಾದರಿಯಾಗಿ ಕಟ್ಟಲಾಗಿದೆ ಎಂದು ಸ್ಮರಿಸಿದರು.
ದಿಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ಸೋಮಶೇಖರ ಶ್ರೀಗಳು ಕಲ್ಯಾಣ ಕರ್ನಾಟಕದ ಅತ್ಯುತ್ತಮ ವಾಗ್ಮಿಗಳು ಎಂದು ಬಣ್ಣಿಸಿದರು. ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರು ಶ್ರೀಗಳ ಜನಪರ ಕಾರ್ಯಗಳನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಹಾಗೂ ಶಿವಶರಣಯ್ಯ ಪುರದಯ್ಯನಮಠ ಅವರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ನದಿಶಿನ್ನೂರು ಶ್ರೀ ಗುರುರಾಜೇಂದ್ರ ಮಹಾಶಿವಯೋಗಿಗಳು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ರೇಷ್ಮೆ ಸೇರಿದಂತೆ ನೂರಾರು ಭಕ್ತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರಾಗಿ ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಆಯ್ಕೆ.

ಚಿತ್ತಾಪುರ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ, ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಅವರನ್ನು ಬಸವ ಜಯಂತಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗರಾಜ ಭಂಕಲಗಿ ಅವರು ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಪಾಟೀಲ ಅವರನ್ನು ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ನಾಗರಾಜ ಭಂಕಲಗಿ ಅವರು, "ಏಪ್ರಿಲ್ 20 ರಂದು ಬೆಳಿಗ್ಗೆ 10 ಗಂಟೆಗೆ ತಹಸೀಲ್ ಕಚೇರಿಯಿಂದ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಆರಂಭವಾಗಲಿದೆ," ಎಂದು ತಿಳಿಸಿದರು.

ಮೆರವಣಿಗೆ ಮಾರ್ಗ: ತಹಸೀಲ್ ಕಚೇರಿ, ಸ್ಟೇಷನ್ ರಸ್ತೆ,ನಾಗಾವಿ ವೃತ್ತ,ಜನತಾ ವೃತ್ತ, ಚಿತ್ತಾವಲಿ ವೃತ್ತ, ಮತ್ತು ಹೋಳಿಕಟ್ಟಿ ಬಡಾವಣೆಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ. ನಂತರ ಪಾಲಪ್ ಗಲ್ಲಿ, ಕೇಳಗೇರಿ ರಸ್ತೆ, ಭುವನೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ, ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ಸಂಪನ್ನಗೊಳ್ಳಲಿದೆ.

ಬಸವ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಸಮಾಜದ ಮುಖಂಡರು, ಬಸವ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಈ ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸಾರೆಡ್ಡಿ ನಾಲವಾರ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಯುವ ಅಧ್ಯಕ್ಷ ಅನಿಲ್‌ ವಡ್ಡಡಗಿ, ಸಮಾಜದ ಹಿರಿಯ ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖ‌ರ್ ಪಾಟೀಲ ಬೆಳಗಂಪಾ, ಚಂದ್ರಶೇಖ‌ರ್ ಟೆಂಗಳಿ, ಡಾ. ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಮಲ್ಲರೆಡ್ಡಿ ಗೋಪಸೇನ್, ಓಂಕಾರ ರೇಷ್ಮೆ, ರವೀಂದ್ರ ಸಜ್ಜನಶೆಟ್ಟಿ, ಶಾಂತಪ್ಪ ಚಾಳಿಕಾರ, ಆನಂದ್ ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಸಂತೋಷ ಹಾವೇರಿ ಅವರು ನಿರೂಪಿಸಿದರು.

ರಾಜೋಳ್ಳಾದಲ್ಲಿ ಏ. 7 ರಿಂದ ಹಜರತ್ ರಾಜಾಭಾಗಸವಾರರ ಜಾತ್ರಾ ಮಹೋತ್ಸವ.

ಚಿತ್ತಾಪುರ: ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಹಜರತ್ ರಾಜಾಭಾಗಸವಾರ ರಹೇಮತ್ ಉಲ್ ಅಲೈ ರವರ ಜಾತ್ರಾ ಮಹೋತ್ಸವವು ಏಪ್ರಿಲ್ 7 ರಿಂದ ಮೂರು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ದರ್ಗಾದ ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ತಿಳಿಸಿದ್ದಾರೆ.

ಏಪ್ರಿಲ್ 7 (ಸಂಜೆ) ಗಂಧ (ಸಂದಲ್) ಮೆರವಣಿಗೆ. ರಾತ್ರಿ 8.45 ಕ್ಕೆ ಶೇಖ್ ಇಮಾಮ್ ಸಾಬ್ ಮಹೇಬುಬ್ ಅಲಿ ಶೇಖಸಿಂದಿ ಅವರ ಮನೆಯಿಂದ ಗಂಧವು ಸಕಲ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರುದಿನ ಬೆಳಿಗ್ಗೆ 4 ಗಂಟೆಗೆ ದರ್ಗಾ ತಲುಪಲಿದೆ.
ಏಪ್ರಿಲ್ 8 ದೀಪೋತ್ಸವ (ಚಿರಾಗ್) ಹಾಗೂ ರಾತ್ರಿ 8.45 ರಿಂದ ಖ್ಯಾತ ಕಲಾವಿದರಿಂದ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 9 ಜೀಯಾರತ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ್ ಬಖಾದ್ರಿ (ಸಜ್ಜಾದ ಸಶಿನ) ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ಈ ಎಲ್ಲ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

"ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕು" ಎಂದು ಶೇಖ್ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಜಗಜೀವನರಾಮ್ ಜಯಂತಿ ಆಚರಣೆ: ಭೀಮಣ್ಣ ಸಾಲಿ ನೇತೃತ್ವದಲ್ಲಿ ಪುಷ್ಪಾರ್ಚನೆ.

ಚಿತ್ತಾಪುರ: ಭಾರತದ ಹಸಿರು ಕ್ರಾಂತಿಯ ಹರಿಕಾರ, ದಲಿತರ ಧ್ವನಿ, ರಾಷ್ಟ್ರದ ಮಹಾನ್ ನಾಯಕರಾದ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

 ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, "ಬಾಬು ಜಗಜೀವನರಾಮ್ ಅವರು ಕೇವಲ ಒಂದು ಸಮುದಾಯದ ನಾಯಕರಾಗಿರಲಿಲ್ಲ, ಬದಲಾಗಿ ಅವರು ಈ ದೇಶದ ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಕೃಷಿ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳು ಇಂದಿಗೂ ಭಾರತದ ಆಹಾರ ಭದ್ರತೆಗೆ ಬುನಾದಿಯಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು," ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳಿಕರ್, ನಾಗರೆಡ್ಡಿ ಗೋಪಸೇನ್, ಪುರಸಭೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ ಅವರು ಡಾ. ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಹೋರಾಟದ ಬದುಕನ್ನು ಸ್ಮರಿಸಿದರು.

ಶುಕ್ರವಾರ, ಏಪ್ರಿಲ್ 3, 2026

ಶ್ರೀಗಳ ಜನ್ಮದಿನದ ಸವಿನೆನಪು: ಗೋಶಾಲೆಗೆ ಕಣಕಿ ದೇಣಿಗೆ

ಚಿತ್ತಾಪುರ: ಪಟ್ಟಣದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಕಂಬಳೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ 59ನೇ ಜನ್ಮದಿನದ ಏಪ್ರಿಲ್ 4ರಂದು ಇದ್ದು. ಒಂದು ದಿನ ಮುಂಚಿತವಾಗಿ ಶುಕ್ರವಾರ ಪಟ್ಟಣದ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ಜನ್ಮದಿನದ ಸವಿನೆನಪಿಗಾಗಿ ಸಮಾಜ ಸೇವಕ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಲೋಡ್ ಕಣಕಿಯನ್ನು ಕಾಣಿಕೆಯಾಗಿ ನೀಡಿದರು

ಶ್ರೀಗಳು ತಮ್ಮ ಜನ್ಮದಿನದ ಅಂಗವಾಗಿ ಪಟ್ಟಣದ ಗೋಶಾಲೆಗೆ ಭೇಟಿ ನೀಡಿದ ಶ್ರೀ ಸೋಮಶೇಖರ ಶಿವಾಚಾರ್ಯರು, ಗೋವುಗಳಿಗೆ ಸ್ವತಃ ಮೇವು (ಕಣಕಿ) ತಿನ್ನಿಸುವ ಮೂಲಕ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, "ಗೋವುಗಳು ಭಾರತೀಯ ಸಂಸ್ಕೃತಿಯ ಜೀವಾಳ. ಗೋಸೇವೆಯು ಈಶ್ವರನ ಸೇವೆಗೆ ಸಮಾನವಾದುದು. ಭಕ್ತರು ಇಂತಹ ಪುಣ್ಯ ಕಾರ್ಯಗಳ ಮೂಲಕ ಗೋವುಗಳ ಹಸಿವು ನೀಗಿಸುತ್ತಿರುವುದು ಸಂತಸದ ವಿಷಯ," ಎಂದು ಆಶೀರ್ವದಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ್ ಬಂಕಲಗಿ ರವರು ಮಾತನಾಡಿ "ಶ್ರೀಗಳ ಹುಟ್ಟುಹಬ್ಬದ ಸವಿನೆನಪಿಗಾಗಿ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಕಣಕಿ ಕಾಣಿಕೆ ನೀಡಿರುವುದು ಶ್ಲಾಘನೀಯ. ಗೋವುಗಳ ಪಾಲನೆಗೆ ಇಂತಹ ದಾನಿಗಳು ಪ್ರೇರಣೆಯಾಗಿದ್ದಾರೆ," ಎಂದು ತಿಳಿಸಿದರು.

"ನಮ್ಮ ಗುರುಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ ಜನ್ಮದಿನವನ್ನು ಆಡಂಬರವಿಲ್ಲದೆ, ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಗೋವುಗಳಿಗೆ ಮೇವು ನೀಡುವ ಸಂಕಲ್ಪ ಮಾಡಿದೆ. ಗೋವುಗಳಿಗೆ ಹಸಿವು ನೀಗಿಸುವುದು ಕೋಟಿ ಪುಣ್ಯಕ್ಕೆ ಸಮಾನ. ಶ್ರೀಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಈ ಸೇವೆಯನ್ನು ಅರ್ಪಿಸುತ್ತಿದ್ದೇನೆ," ಎಂದು ಭಕ್ತಿಪೂರ್ವಕವಾಗಿ ನುಡಿದರು.

- ಅಂಬರೀಷ್ ಕಲಶೆಟ್ಟಿ (ಸಮಾಜ ಸೇವಕರು ಚಿತ್ತಾಪೂರ )
ಈ ಸಂದರ್ಭದಲ್ಲಿ ಹಿರಿಯರಾದ ಅನ್ನದಾನ ಶಾಸ್ತ್ರಿಗಳು ಹಿರೇಮಠ್, ಶಾಂತನಂದ ಗವಾಯಿಗಳು, ವೀರಶೈವ ಸಮಾಜದ ಕಾರ್ಯದರ್ಶಿ ಆನಂದ್ ಪಾಟೀಲ್ ನರಬೂಳ್ಳಿ, ಹಾಗೂ ಗೋಶಾಲೆ ಅಧ್ಯಕ್ಷ ರಮೇಶ್ ಬೊಮ್ನಳ್ಳಿ, ವೀರಶೈವ ಸಮಾಜದ ಮುಖಂಡರಾದ ಶಿವಾನಂದ ಸ್ವಾಮಿ ಗಚ್ಚಿನಮಠ, ಸಂಜು ರೆಡ್ಡಿ ಪಾಲಪ್, ಅನಿಲ್ ವಡ್ಡಡಗಿ, ವಿಶ್ವನಾಥ್ ಕುಂಬಾರ್, ಬಸವರಾಜ್ ಹೂಗಾರ್, ಶಾಂತಕುಮಾರ್ ಹತ್ತಿ, ಪ್ರಸಾದ್ ಅವಂಟಿ, ಸುರೇಶ್ ಅಲ್ಲೂರು, ಜಗದೇವ ದಿಗ್ಗಾವ್ಕಾರ್, ಸುನಿಲ್ ಲಕ್ಕುಂಡಿ, ಮಲ್ಲಿಕಾರ್ಜುನ್ ಪೂಜಾರಿ, ಸಾಹೇಬ್ ಗೌಡ ಬಂಗಿ, ಚಂದ್ರು ಉಟ್ಗೂರು, ಸಂತೋಷ್ ಹಾವೇರಿ, ಸಾಗರ್ ಮಾಡಗಿ, ಶರಣು ಜಡಿ, ಅಂಬರೀಶ್ ಸಾತನೂರು, ಶೇಸಪ್ಪ ಬಡಿಗೇರ್ ಸೇರಿದಂತೆ ಅನೇಕ ಭಕ್ತಾದಿಗಳು ಮತ್ತು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

ಬುಧವಾರ, ಏಪ್ರಿಲ್ 1, 2026

ಈಶ್ವರ ಖಂಡ್ರೆ ಅವರಿಗೆ ತಾಲ್ಲೂಕು ವೀರಶೈವ ಸಮಾಜದಿಂದ ಸನ್ಮಾನ.

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಚಿತ್ತಾಪುರ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ತಾಲ್ಲೂಕು ವೀರಶೈವ ಸಮಾಜದ ಗೌರವಾಧ್ಯಕ್ಷರಾದ ಲಿಂಗಾರೆಡ್ಡಿ ಬಾಸರೆಡ್ಡಿ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಮುಖಂಡರು, ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆ ಮತ್ತು ಸಂಘಟನಾತ್ಮಕ ಕಾರ್ಯಗಳನ್ನು ಶ್ಲಾಘಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಲಿಂಗಪ್ಪ ವಾಡೇದ್, ಸೋಮಶೇಖರ ಪಾಟೀಲ ಬೆಳಗುಂಪಾ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ಶಾಂತಣ್ಣ ಚಾಳೀಕಾರ, ಅಣ್ಣಾರಾವ ಬಾಳಿ, ಆನಂದ ಪಾಟೀಲ ನರಿಬೋಳ, ಮಲ್ಲಿನಾಥ ಭಾಗೋಡಿ, ರವೀಂದ್ರರೆಡ್ಡಿ ಭಂಕಲಗಿ, ಸಿದ್ದಣ್ಣಗೌಡ ದಳಪತಿ ಹಾಗೂ ರವೀಂದ್ರ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಮಾಜದ ಸಂಘಟನೆ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಈ ವೇಳೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಏಪ್ರಿಲ್ 4ಕ್ಕೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ.

ಚಿತ್ತಾಪುರ: ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ 59ನೇ ಜನ್ಮದಿನದ ಅಂಗವಾಗಿ, ಸಾರ್ವಜನಿಕರಿಗಾಗಿ ಬೃಹತ್ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರವನ್ನು ಆಯೋಜಿಸಲಾಗಿದೆ.

ಯಾದಗಿರಿಯ ವೇದಾ ಕಣ್ಣಿನ ಆಸ್ಪತ್ರೆ ಹಾಗೂ ಕಲಬುರಗಿಯ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ, ಏಪ್ರಿಲ್ 4 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರಾದ ಮಲ್ಲು ಇಂದೂರ ಹಾಗೂ ನಾಗರೆಡ್ಡಿ ಗೋಪಸೇನ್ ಅವರು ತಿಳಿಸಿದ್ದಾರೆ.

ಕಂಬಳೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನುರಿತ ವೈದ್ಯರಿಂದ ಕಣ್ಣಿನ ಪರೀಕ್ಷೆಯ ಜೊತೆಗೆ ಬಿಪಿ (ರಕ್ತದೊತ್ತಡ) ಮತ್ತು ಶುಗರ್ (ಮಧುಮೇಹ) ತಪಾಸಣೆಯನ್ನೂ ಮಾಡಲಾಗುವುದು.ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು.ಅಂದು ಸಂಜೆ 5:00 ಗಂಟೆಗೆ ಕಂಬಳೇಶ್ವರ ಶ್ರೀಗಳ 59ನೇ ಜನ್ಮ ದಿನೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ

"ತಾಲ್ಲೂಕಿನ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು." 

— ಮಲ್ಲು ಇಂದೂರ ಹಾಗೂ ನಾಗರೆಡ್ಡಿ ಗೋಪಸೇನ್, ಆಯೋಜಕರು.

ಮಕ್ಕಳ ಕೈಗೆ ಮೊಬೈಲ್ ಬದಲಾಗಿ ಪುಸ್ತಕ ನೀಡಿ: ಕಂಬಳೇಶ್ವರ ಶ್ರೀಗಳು

ಚಿತ್ತಾಪುರ: "ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವುದು ಹತ್ತು ಆನೆಗಳನ್ನು ಸಾಕಿದಂತೆ. ದೇಶದ ಭವಿಷ್ಯ ರೂಪಿಸುವ ಅತಿದೊಡ್ಡ ಶಕ್ತಿ ಶಾಲೆಗಳಲ್ಲಿದೆ," ಎಂದು ಕಂಬಳೇಶ್ವರ ಮಠದ  ಸೋಮಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಪಟ್ಟಣದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 15ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಅವರು "ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಮಾತೋಶ್ರೀ ಶಾಲೆಯ ಕಾರ್ಯ ಶ್ಲಾಘನೀಯ. ಪಾಲಕರು ಮಕ್ಕಳಿಗೆ ಮೊಬೈಲ್ ನೀಡಿ ಅವರ ಭವಿಷ್ಯ ಹಾಳು ಮಾಡಬಾರದು. ಅದರ ಬದಲಾಗಿ ಪುಸ್ತಕಗಳನ್ನು ನೀಡಿ ಅವರ ಬದುಕನ್ನು ಸಾರ್ಥಕಗೊಳಿಸಬೇಕು," ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಿಎಲ್‌ಡಿ ಬ್ಯಾಂಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, "ಹಿಂದುಳಿದ ಪ್ರದೇಶದ ಬಡ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಪುಣ್ಯದ ಕೆಲಸ. ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮುಂಬರುವ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ಬೆಂಬಲ ನೀಡಲಾಗುವುದು," ಎಂದು ಭರವಸೆ ನೀಡಿದರು.
ಶಾಲೆಯ ಮುಖ್ಯಗುರುಗಳಾದ ಜಗದೇವ ಕುಂಬಾರ ಅವರು ವಾರ್ಷಿಕ ವರದಿ ವಾಚಿಸಿ, "2025-26ನೇ ಸಾಲಿನಲ್ಲಿ ಶಾಲೆಯು ಅತ್ಯುತ್ತಮ ಫಲಿತಾಂಶ ಪಡೆದಿದೆ. ಮಕ್ಕಳಲ್ಲಿ ಕೌಶಲ ಬೆಳೆಸಲು 'ನಿರಂತರ ಕಲಿಕೆ' ಎಂಬ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಕರ ಅವಿರತ ಶ್ರಮದಿಂದ ಶಾಲೆಯು ಪ್ರಗತಿಯ ಪಥದಲ್ಲಿ ಸಾಗುತ್ತಿದೆ," ಎಂದರು.

ಕಸಾಪ ಮಾಜಿ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ, ಪ್ರಗತಿ ಪರ ರೈತ ಅಂಬರೀಶ್ ಕಲ್ಲಶೆಟ್ಟಿ, ಮಾಜಿ ಪುರಸಭೆ ಸದಸ್ಯ ವಿಶ್ವನಾಥ ಕಾಶಿ, ಪತ್ರಕರ್ತ ಚಂದ್ರಶೇಖರ ಬಳ್ಳಾ, ಕೊಲಿ ಸಮಾಜ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್, ವೇದಿಕೆಯಲ್ಲಿ ಇದ್ದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಅಂಬರೀಶ್ ಭೋವಿ, ವಿಶ್ವನಾಥ ಕುಂಬಾರ, ಶೇಷಪ್ಪ ಬಡಿಗೇರ್, ಕಾಸಿಂ ಅಲಿ, ಶ್ರೀಮತಿ ಫೈಮುದ್ ಬೇಗಂ, ಶ್ರೀಮತಿ ಸುಜಾತಾ ಜೆ ಕುಂಬಾರ, ಶ್ರೀಮತಿ ಸುನಿತಾ, ಶಮರಿನ್ ಬೇಗಂ, ಶ್ರೀದೇವಿ, ಇದ್ದರು. ನಿರೂಪಣೆ ಶಿಕ್ಷಕ ನರಸಪ್ಪ ಚಿನ್ನಕಟ್ಟಿ ನೆರವೇರಿಸಿದರು.

ಕಾರ್ಯಕ್ರಮ ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ, ನಾಟಕ, ನಡೆದವು ನೃತ್ಯಗಳು ಪಾಲಕರ ಕಣ್ಮನ ಸೆಳೆದವು,

ಶುಕ್ರವಾರ, ಮಾರ್ಚ್ 27, 2026

ಅರಣಕಲ್ ಅವರಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗೌರವ ಸಮರ್ಪಣೆ.

ಚಿತ್ತಾಪುರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ದೇವಿಂದ್ರ ಅರಣಕಲ್‌ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರನ್ನು ಬೆಂಗಳೂರಿನ ಸರ್ಕಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಬುದ್ಧನ ಪ್ರತಿಮೆ ನೀಡಿ ಸನ್ಮಾನಿಸಿ ಆಶೀರ್ವಾದ ಪಡೆದರು.

ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಂಘದ ಅಭಿವೃದ್ಧಿಗೆ ಮತ್ತು ರೈತರ ಹಿತರಕ್ಷಣೆಗೆ ಶ್ರಮಿಸುವಂತೆ ಹಾರೈಸಿ ಶುಭ ಕೋರಿದರು.

​ಈ ಸಂದರ್ಭದಲ್ಲಿ ಮಾತನಾಡಿದ ದೇವಿಂದ್ರ ಅರಣಕಲ್ ಅವರು, ಸಚಿವರ ಮಾರ್ಗದರ್ಶನದಲ್ಲಿ ಚಿತ್ತಾಪುರ ತಾಲೂಕಿನ ರೈತರಿಗೆ ಸಹಕಾರ ಸಂಘದ ಮೂಲಕ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾ‌ರ್, ಪಿಎಲ್ಲಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನ‌ರ್, ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಭಾಗೋಡಿ, ಎಪಿಎಂಸಿ ಮಾಜಿ ಸದಸ್ಯ ಹಣಮಂತ ಸಂಕನೂರ, ಮುಖಂಡರಾದ ಇಂದುಶೇಖರ್ ಬೆಂಕಿ, ಪ್ರಭು ಹಲಕರ್ಟಿ, ಬಸವರಾಜ ಚಿನ್ನಮಳ್ಳಿ, ನಾಗೇಂದ್ರ ಜೈಗಂಗಾ, ಬಸವರಾಜ ಪಾಟೀಲ ದಳಪತಿ, ಮಲ್ಲಪ್ಪ ಮಳಖೇಡ, ಪಾಶಾ ಶಿರೂರು ಸೇರಿದಂತೆ ಸಹಕಾರ ಸಂಘದ ಪ್ರಮುಖರು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ: ಭೀಮಣ್ಣ ಸಾಲಿ

ಚಿತ್ತಾಪುರ: ಪಟ್ಟಣದ ಪ್ರಮುಖ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್...