ದಾದಾಗಿರಿಗೆ ಅಂಜುವ ಮೊಮ್ಮಗ ನಾನಲ್ಲ: ಪ್ರಿಯಾಂಕ್ ಖರ್ಗೆ.
ಚಿತ್ತಾಪೂರ: ದಾದಾಗಿರಿ ಶುರು ಮಾಡಿದರೆ ಕಾಂಗ್ರೆಸ್ ನವರು ಹೊರಗಡೆ ಬರುವುದಕ್ಕೆ ಆಗುವುದಿಲ್ಲ ಅಂತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳುತ್ತಾನೆ. ಎಂಎಲ್ಎ ಚುನಾವಣೆಗೆ ನಿಲ್ಲುವುದಕ್ಕೆ ಬಂದಿದ್ದಾನಾ? ಅಥವಾ ದಾದಾಗಿರಿ ಮಾಡುವುದಕ್ಕೆ ಬಂದಿದ್ದಾನಾ? ಅವನು ದಾದಾಗಿರಿ ಮಾಡಿದರೆ ಚಿತ್ತಾಪುರದ ಮೊಮ್ಮಗ ನಾನು ಸುಮ್ಮನೆ ಕೂತಿರುತ್ತೇನಾ ? ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮಾರುತ್ತರ ನೀಡಿದರು.
ತಾಲ್ಲೂಕಿನ ಮಹಾನಗರ ತಾಂಡಾ, ಮುಗಳನಾಗಂವ್, ಬೆಣ್ಣೋರ, ಸಂಗಾವಿ, ಪೇಠಶಿರೂರು, ಕಾಟಮದೇವರ ಹಳ್ಳಿ, ಬೆಳಗುಂಪಾ, ಇವಣಿ,ಭಾಗೋಡಿ, ಕದ್ದರ್ಗಿ, ಜೀವಣಗಿ, ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು ನಾನು ಈ ತಾಲೂಕಿನ ಮೊಮ್ಮಗ ನಮ್ಮ ಜನರ ಕಷ್ಟ ಸುಖಗಳ ಅರಿವು ನನಗಿದೆ. ಎಲ್ಲಿಂದಲೋ ಬಂದವರು ದಾದಾಗಿರಿ ಮಾಡಿದರೆ ನಾನು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು.
ಮಣಿಕಂಠ ಯಾರು ಅಂತ ನನಗೆ ಗೊತ್ತಿರಲಿಲ್ಲ. ಅವನು ನನಗೆ ಶೂಟ್ ಮಾಡುತ್ತೇನೆ ಎಂದು ಹೇಳಿದಾಗಲೇ ಅವನ ಬಗ್ಗೆ ಗೊತ್ತಾಗಿದ್ದು. " ಅಲ್ಲಪ್ಪ ನನಗೆ ಶೂಟ್ ಮಾಡುವುದಕ್ಕೆ ನಿಮ್ಮಪ್ಪನ ಗಂಟು ಏನಾದರೂ ತಿಂದಿದ್ದೇನಾ ? ಅಥವಾ ನಿನ್ನ ಗಂಟು ತಿಂದಿದ್ದೇನಾ? ಅಸಲಿಗೆ ನಿನ್ನ ಗಂಟು ಬೇಡ. ಯಾಕೆಂದರೆ ಅದು ಪಾಪದ ದುಡ್ಡು ಎಂದು ತೀಕ್ಷ್ಣವಾಗಿ ಹೇಳಿದರು.
ಮಣಿಕಂಠನನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಪ್ರಬುದ್ದತೆಯ ಸಂಕೇತವಾದ ಚಿತ್ತಾಪುರ ಮರ್ಯಾದೆಗೆ ರಾಜ್ಯ ಮಟ್ಟದಲ್ಲಿ ಧಕ್ಕೆಯಾಗಿದೆ. ಕಾನೂನು ಬಾಹಿರವಾಗಿ ಅಕ್ಕಿ ಹಾಗೂ ಹಾಲಿನ ಪುಡಿ ಸಾಗಾಣಿಕೆ ಮಾಡುವ ವ್ಯಕ್ತಿಯನ್ನು ಬಿಜೆಪಿಯವರು ತಮ್ಮ ನಾಯಕ ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬಂದಿರುವುದೇ ದುರಂತ ಎಂದರು.
ಈ ಸಲದ ಚುನಾವಣೆಯಲ್ಲಿ ನನಗೆ ಹೆಚ್ಚಿನ ಬಹುಮತದಿಂದ ಆರಿಸಿ ತರುವ ಮೂಲಕ ನಿಮ್ಮ ಸೇವೆ ಮಾಡಲು ಅನುಕೂಲ ಮಾಡಿಕೊಡಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಶಾಸಕ ವಿಶ್ವಜಿತ್ ಕದಂ, ಬೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ, ರಮೇಶ ಮರಗೋಳ, ಸಿದ್ದುಗೌಡ ಪಾಟೀಲ್, ಪ್ರಭು ಕುಂಬಾರ, ಪ್ರದೀಪ ಪೂಜಾರಿ, ದೇವಿಂದ್ರ ಗುಡ್ಡಪೂರ, ದಶರಥ ಕದ್ದರ್ಗಿ, ದೇವಿಂದ್ರ ಭಾಗೋಡಿ, ವಿಶ್ವನಾಥ ರೆಡ್ಡಿ ಯರಗಲ್, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ