ಚಿತ್ತಾಪುರ: ಪಟ್ಟಣದ ಬಸವೇಶ್ವರ ವೃತ್ತ ಹಾಗೂ ಎಪಿಎಂಸಿ ಆವರಣದಲ್ಲಿ ಏಪ್ರಿಲ್ 20ರಂದು ಹಮ್ಮಿಕೊಳ್ಳಲಾಗಿರುವ 893ನೇ ಬಸವ ಜಯಂತಿ ಉತ್ಸವದ ಪೂರ್ವಭಾವಿಯಾಗಿ ಇಂದು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ, ಪ್ರಚಾರದ ವಾಹನಕ್ಕೆ ಚಾಲನೆ ನೀಡಲಾಯಿತು.
ಜಯಂತೋತ್ಸವದ ಅಂಗವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಬುರ್ಗಿಯ ಮೆಡಿಕೇರ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ಬೆಳಗುಂಪ, "ಶಿಬಿರದಲ್ಲಿ ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ವಿವಿಧ ವಿಭಾಗದ ವೈದ್ಯರು ಲಭ್ಯವಿರುತ್ತಾರೆ. ಕೀಲು ನೋವು, ಮಧುಮೇಹ, ರಕ್ತದೊತ್ತಡ, ಕಣ್ಣು ಮತ್ತು ಕಿವಿ ಪರೀಕ್ಷೆ ಹಾಗೂ ಸೀಳು ತುಟಿಗಳ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಗುವುದು. ತಾಲೂಕಿನ ಸಮಸ್ತ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ನಾಗರಾಜ್ ಭಂಕಲಗಿ ಅವರು ಮಾತನಾಡಿ "ಜಗಜ್ಯೋತಿ ಬಸವಣ್ಣನವರ ತತ್ವಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅವು ವಿಶ್ವಮಾನ್ಯವಾದವುಗಳು. ಶ್ರಮ ಸಂಸ್ಕೃತಿ ಮತ್ತು ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ಜಯಂತಿಯನ್ನು ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕೇವಲ ಮೆರವಣಿಗೆಗೆ ಸೀಮಿತವಾಗದೆ, ಬಡವರಿಗೆ ಮತ್ತು ಅಸಹಾಯಕರಿಗೆ ಆರೋಗ್ಯ ಸೇವೆಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ್ ನಿಪ್ಪಾಣಿ, ಆನಂದ್ ಪಾಟೀಲ ನರಬೂಳ, ಚಂದ್ರಶೇಖರ್ ಉಟಗೋರು, ಅನಿಲ್ ಕುಮಾರ್ ವಡ್ಡಡಗಿ, ಶ್ರೀಮಂತ್ ಕುಂಬಾರ್, ವಿಶ್ವರಾಧ್ಯ ಪಾಟೀಲ್ ಕರದಾಳ, ನೆಹಲ್ ಪಾಟೀಲ್, ಅಂಬರೀಶ್ ಸುಲೆಗಾಂವ್, ಮಹಾದೇವ ಅಂಗಡಿ, ರಾಚು ಬೊಮ್ನಳ್ಳಿ, ಬಸವರಾಜ್ ಸಂಕನೂರ್, ರಮೇಶ್ ಕಾಳನೂರ ಸೇರಿದಂತೆ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.