ಶುಕ್ರವಾರ, ಫೆಬ್ರವರಿ 20, 2026

ಕಂಬಳೇಶ್ವರ ಮಠಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಭೇಟಿ.


ಚಿತ್ತಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಂಬಳೇಶ್ವರ ಮಠಕ್ಕೆ ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದೇ ಫೆಬ್ರವರಿ 23ರಂದು ಭೇಟಿ ನೀಡಲಿದ್ದಾರೆ ಎಂದು ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.


ಅಂದು ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಆಗಮಿಸಲಿರುವ ಶ್ರೀಗಳು, ಮೊದಲು ಕಂಬಳೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ನಮನಗಳನ್ನು ಸಲ್ಲಿಸಲಿದ್ದಾರೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯರು ಗವಿಸಿದ್ದೇಶ್ವರ ಶ್ರೀಗಳಿಗೆ ನಾಗಾವಿ ನಾಡಿನ ಇತಿಹಾಸ ಸಾರುವ ಪುಸ್ತಕಗಳನ್ನು ನೀಡಿ, ಮಠದ ಪರವಾಗಿ ಭಕ್ತಿಪೂರ್ವಕವಾಗಿ ಸತ್ಕರಿಸಿ ಗೌರವಿಸಲಿದ್ದಾರೆ.

"ಅಪರೂಪದ ಪವಾಡ ಪುರುಷರು ಹಾಗೂ ಸಮಾಜಮುಖಿ ಚಿಂತಕರಾದ ಗವಿಸಿದ್ದೇಶ್ವರ ಶ್ರೀಗಳ ಆಗಮನವು ನಮ್ಮ ಭಾಗದ ಭಕ್ತರಿಗೆ ಸೌಭಾಗ್ಯದ ಸಂಗತಿಯಾಗಿದೆ. ಈ ಸುಸಂದರ್ಭದಲ್ಲಿ ತಾಲೂಕಿನ ಸಮಸ್ತ ಭಕ್ತಾದಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಶ್ರೀಗಳ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕು" ಎಂದು ಸೋಮಶೇಖರ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಶಿವಾಜಿ ಆಡಳಿತ ವೈಖರಿ ಇಂದಿಗೂ ಮಾದರಿ: ತಹಸೀಲ್ದಾರ್.

ಚಿತ್ತಾಪುರ: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೆ, ಅಪ್ರತಿಮ ದೇಶಪ್ರೇಮಿ ಹಾಗೂ ಜನಪರ ಆಡಳಿತಗಾರರಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಶಿವಾಜಿ ಮಹಾರಾಜರ ಕಾಲದ ಆಡಳಿತವು ಅತ್ಯಂತ ಶಿಸ್ತುಬದ್ಧವಾಗಿತ್ತು. ಸ್ವರಾಜ್ಯದ ಪರಿಕಲ್ಪನೆಯಡಿ ಅವರು ಜಾರಿಗೆ ತಂದ ಆಡಳಿತಾತ್ಮಕ ಸುಧಾರಣೆಗಳು ಇಂದಿನ ಪ್ರಜಾಪ್ರಭುತ್ವಕ್ಕೂ ಅಡಿಪಾಯದಂತಿವೆ ಎಂದು ತಹಸೀಲ್ದಾರ್ ಬಣ್ಣಿಸಿದರು.

ಪರಕೀಯರ ಆಳ್ವಿಕೆಯ ನಡುವೆ ಸ್ವಂತ ಸಾಮ್ರಾಜ್ಯ ಕಟ್ಟಿದ ಶಿವಾಜಿಯವರ ಸಾಹಸಗಾಥೆ ಹಾಗೂ ಮಾತೃಭೂಮಿಯ ಮೇಲಿದ್ದ ಅವರ ಭಕ್ತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿತ್ತು. ತಮ್ಮ ಆಡಳಿತದಲ್ಲಿ ಎಲ್ಲ ಸಮುದಾಯದವರನ್ನು ಸಮಾನವಾಗಿ ಕಂಡಿದ್ದ ಮಹಾರಾಜರು, ಮಹಿಳೆಯರ ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಜೀವನ ಚರಿತ್ರೆ ನಮಗೆ ಶೌರ್ಯ ಮತ್ತು ನೀತಿ ಎರಡನ್ನೂ ಕಲಿಸುತ್ತದೆ ಎಂದರು.

.ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ , ವಿಠ್ಠಲ್ ರಾವ್, ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಯೆಂದೆ, ಪ್ರಹ್ಲಾದ್ ವಿಶ್ವಕರ್ಮ, ಉಪಾಧ್ಯಕ್ಷ ಅನೂಪ್ ಉಬಾಳೆ, ರೋಹಿತ್ ಚವ್ಹಾಣ, ಕಾರ್ಯದರ್ಶಿ ಗುರುರಾಜ್ ಉಪ್ಪಾರ, ಸಹ ಕಾರ್ಯದರ್ಶಿ ಮನೋಜ್ ಹರಾಳೆ, ಸಂಯುಕ್ತ ಕಾರ್ಯದರ್ಶಿ ಅಂಬರೀಶ್ ಭೋವಿ, ಖಜಾಂಚಿ ನವೀನ್ ಚವ್ಹಾಣ್,  ಸದಸ್ಯರಾದ ರೋಹಿತ್ ಯೆಂದೆ, ಸಂತೋಷ್ ಗಾವಲ್ಕರ್, ಸಂಜೀವ್ ಸೂರ್ಯವಂಶಿ, ಆಕಾಶ ಸುಗಂಧಿ ಲಾಡ್, ಗಣೇಶ ಜೀತುರೆ, ಮಹೇಶ್ ಸುಗಂಧಿ, ನಿತೇಶ್ ಸುಗಂಧಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಅನೇಕರು ಉಪಸ್ಥಿತರಿದ್ದರು.

ತ್ಯಾಜ್ಯ ವಿಲೇವಾರಿ ಜ್ಞಾನದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ: ಮುಖ್ಯಾಧಿಕಾರಿ.

ಚಿತ್ತಾಪುರ: ಪಟ್ಟಣದ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕಕ್ಕೆ ತಾಲ್ಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಇತ್ತೀಚೆಗೆ ಶೈಕ್ಷಣಿಕ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪುರಸಭೆಯ ಮುಖ್ಯಾಧಿಕಾರಿಗಳಾದ ಮನೋಜ್ ಕುಮಾರ್ ಗುರಿಕಾರ್ ಅವರು ವಿಶೇಷ ಮಾಹಿತಿ ನೀಡಿದರು.

ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಹೇಗೆ ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸಿಕೊಡಲಾಯಿತು. ಮುಖ್ಯವಾಗಿ ಹಸಿ ಕಸದಿಂದ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಅದರ ಸಂರಕ್ಷಣೆಯ ಕುರಿತು ಮುಖ್ಯಾಧಿಕಾರಿಗಳು ವಿವರಿಸಿದರು.
ನಂತರ ಮಾತನಾಡಿದ ಅವರು, "ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಇಂದಿನಿಂದಲೇ ಸಂಕಲ್ಪ ಮಾಡಬೇಕು. ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಪುರಸಭೆಯ ವಾಹನಗಳಿಗೆ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು," ಎಂದು ಕರೆ ನೀಡಿದರು.
ನಂತರ ಮುಖ್ಯಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಧ್ಯಾರ್ಥಿಗಳ ಪ್ರಶ್ನೆ, ಪ್ಲಾಸ್ಟಿಕ್ ಭೂಮಿಯಲ್ಲಿ ಕರಗಲು ಎಷ್ಟು ವರ್ಷ ಬೇಕು? ಎಂದಗಾ ಉತ್ತರಿದ ಅವರು ಪ್ಲಾಸ್ಟಿಕ್ ವಿಧಗಳ ಆಧಾರದ ಮೇಲೆ ನೂರಾರು ವರ್ಷಗಳು ಬೇಕಾಗಬಹುದು, ಅದಕ್ಕಾಗಿಯೇ ನಾವು ಮರುಬಳಕೆ (Recycle) ಮಾಡುವುದನ್ನು ಕಲಿಯಬೇಕು ಎಂದರು. ನಂತರ ಮತ್ತೆ ಪ್ರಶ್ನಿದ ವಿದ್ಯಾರ್ಥಿಗಳು ನಾವು ಮನೆಯಲ್ಲಿ ಗಿಡಗಳಿಗೆ ಸಾವಯವ ಗೊಬ್ಬರವನ್ನು ಹೇಗೆ ಬಳಸಬಹುದು ಎಂದರು ಆಗ ಉತ್ತರಿಸಿ ಅವರು ಪುರಸಭೆಯಿಂದ ಸಿದ್ಧವಾದ ಗೊಬ್ಬರವನ್ನು ನೀವು ಪಡೆದು ಗಿಡಗಳಿಗೆ ಬಳಸಬಹುದು, ಇದರಿಂದ ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ. ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಮುಖ್ಯಾಧಿಕಾರಿಗಳು ಸರಳವಾಗಿ ಉತ್ತರಿಸುವ ಮೂಲಕ ಅವರಲ್ಲಿ ಪರಿಸರ ಪ್ರೇಮವನ್ನು ಜಾಗೃತಗೊಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರೋಹಿತ್ ಕಟ್ಟಿಮನಿ, ಶಾಲೆಯ ಮುಖ್ಯಗುರುಗಳಾದ ನಾಗಮ್ಮ ಕುಂಬಾರ, ಪುರಸಭೆ ಸಮುದಾಯ ಸಂಚಾಲಕರಾದ ಮೀನಾಕ್ಷಿ, ಅಕ್ಷತಾ, ರೇಣುಕಾ, ಶಿಕ್ಷಕ ಸೋಪನಗೌಡ ಪಾಟೀಲ್, ಅತಿಥಿ ಶಿಕ್ಷಕ ಜಗದೇವ ಕುಂಬಾರ, ಎಲ್ಎಲ್ಎಫ್ ಶಿಕ್ಷಕ ಹಣಮಂತ ಕುಂಬಾರ ಸೇರಿದಂತೆ ಇತರರು ಇದ್ದರು.

ಬುಧವಾರ, ಫೆಬ್ರವರಿ 18, 2026

ಜೆಜೆಎಂ ಕಾಮಗಾರಿ ಹೆಸರಲ್ಲಿ ಪರಿಸರ ಮಾರಣಹೋಮ; ನಿಯಮ ಉಲ್ಲಂಘಿಸಿ ಬೆಟ್ಟ ಕೊರೆಯುತ್ತಿರುವ ಗುತ್ತಿಗೆದಾರ!

ಚಿತ್ತಾಪೂರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ನಡುವೆ ಈಗ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ (JJM) ಯೋಜನೆಗೆ ಪರಿಸರ ಬಲಿಯಾಗುತ್ತಿದೆ. ವೈಜ್ಞಾನಿಕತೆ ಗಾಳಿಗೆ ತೂರಿ ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಗುತ್ತಿಗೆದಾರ ಕಂಪನಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಕಾರದ ಷರತ್ತುಗಳಿಗೆ ಕವಡೆ ಕಾಸಿನ ಬೆಲೆ ಇಲ್ಲವೇ?
ಸನ್ನತ್ತಿ ನದಿಯಿಂದ 70 ಗ್ರಾಮಗಳಿಗೆ ನೀರು ಪೂರೈಸುವ ಜೆಜೆಎಂ 4ನೇ ಹಂತದ ಯೋಜನೆಗಾಗಿ ಹುಳಂಡಗೇರಾ, ತರಕಸಪೇಟ, ರಾಮತೀರ್ಥ, ದಂಡಗುಂಡ ಮತ್ತು ಬನಹಟ್ಟಿಯಲ್ಲಿ ಟ್ಯಾಂಕ್‌ಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಆಗಸ್ಟ್ 2025ರಲ್ಲಿ ಭೂಮಿ ಮಂಜೂರು ಮಾಡಿದ್ದರು. ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಅಡಿಯಲ್ಲಿ ಸುಮಾರು 2 ಎಕರೆ 36 ಗುಂಟೆ ಜಮೀನನ್ನು ಜಿಲ್ಲಾ ಪಂಚಾಯತ್ ಹೆಸರಿಗೆ ಹಸ್ತಾಂತರಿಸುವಾಗ "ಸರ್ಕಾರಿ ಜಮೀನನ್ನು ವಿನಾಶಕಾರಿ ಅಥವಾ ಕಾಯಂ ಹಾನಿಕಾರಕ ರೀತಿಯಲ್ಲಿ ಬಳಸಬಾರದು" ಎಂಬ ಸ್ಪಷ್ಟ ಷರತ್ತು ವಿಧಿಸಲಾಗಿತ್ತು. ಆದರೆ, ಪ್ರಸ್ತುತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿಯು ಈ ನಿಯಮಗಳನ್ನು ಗಾಳಿಗೆ ತೂರಿ, ಬೆಟ್ಟದ ಮೂಲ ಸ್ವರೂಪವನ್ನೇ ನಾಶ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಆರೋಪಿಸಿದ್ದಾರೆ.

ರಾಮತೀರ್ಥ ಗ್ರಾಮದ ಸರಿಸುಮಾರು 1000 ಮೀಟರ್ ಉದ್ದದ ಭವ್ಯ 'ವಾರಿ ಬೆಟ್ಟ'ವು ಪ್ರಕೃತಿಯ ಸೌಂದರ್ಯಕ್ಕೆ ಹೆಸರಾಗಿತ್ತು. ಈಗ ಇಲ್ಲಿ ಜೆಜೆಎಂ ಟ್ಯಾಂಕ್ ನಿರ್ಮಾಣದ ಹೆಸರಿನಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಇಳಿಜಾರು ಪ್ರದೇಶದಲ್ಲಿ ಆಳವಾದ ಗುಂಡಿಗಳನ್ನು ತೋಡಲಾಗುತ್ತಿದೆ.
ನೂರಾರು ಗಿಡಮರಗಳು ಧರೆಗುರುಳುತ್ತಿವೆ.ಮಳೆಗಾಲದಲ್ಲಿ ಬೆಟ್ಟದ ಮಣ್ಣು ಸಡಿಲಗೊಂಡು ಇಡೀ ಟ್ಯಾಂಕ್ ಉರುಳಿ ಬೀಳುವ ಅಪಾಯವಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ" ಎಂದು ಕೈತೊಳೆದುಕೊಳ್ಳುತ್ತಿದ್ದರೆ, 
ಕೇಂದ್ರದ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಸದಾ ಟೀಕೆ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಕ್ರಮಗಳು ಕಾಣಿಸುತ್ತಿಲ್ಲವೇ?" ಎಂದು ಅಯ್ಯಪ್ಪ ರಾಮತೀರ್ಥ ಪ್ರಶ್ನಿಸಿದ್ದಾರೆ. ತರಾತುರಿಯಲ್ಲಿ ಕಾಮಗಾರಿ ನಡೆಸಿ ಹಣ ಲೂಟಿ ಮಾಡುವ ಉದ್ದೇಶ ಈ ಯೋಜನೆಯ ಹಿಂದಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.

ಕೂಡಲೇ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳ ಪರಿಶೀಲನೆ ನಡೆಸಬೇಕು.ಜಿಲ್ಲಾಧಿಕಾರಿಗಳ ಷರತ್ತು ಉಲ್ಲಂಘಿಸಿದ ಗುತ್ತಿಗೆದಾರ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ನೈಸರ್ಗಿಕ ಬೆಟ್ಟ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು.
ಮುಂದಾಗಬಹುದಾದ ಭೀಕರ ಅನಾಹುತವನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಫೆ. 23ಕ್ಕೆ 'ಅಭಿನಂದನ' ಪರ್ವ: ಗವಿಮಠದ ಶ್ರೀಗಳ ಪ್ರಪ್ರಥಮ ಆಗಮನ.

ಚಿತ್ತಾಪುರ: ಪಟ್ಟಣದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ಶ್ರೀ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ 16ನೇ ವಾರ್ಷಿಕೋತ್ಸವ ಹಾಗೂ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವು ಇದೇ ಫೆಬ್ರವರಿ 23ರಂದು ಬೆಳಗ್ಗೆ 10 ಗಂಟೆಗೆ ಎಂ.ಬಿ. ಪಾಟೀಲ ಪಬ್ಲಿಕ್ ಶಾಲಾ ಆವರಣದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ, "ಶತಮಾನದ ಶರಣ, ಅಭಿನವ ಅನ್ನದಾನಿ ಎಂದೇ ಖ್ಯಾತರಾದ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೊದಲ ಬಾರಿಗೆ ಚಿತ್ತಾಪುರ ಪಟ್ಟಣಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಶ್ರೀಗಳ ದರ್ಶನ ಹಾಗೂ ಆಶೀರ್ವಚನ ಆಲಿಸಲು ತಾಲೂಕಿನ ಜನತೆ ಕಾತರರಾಗಿದ್ದಾರೆ," ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ದಿವ್ಯ ಸಾನಿಧ್ಯವನ್ನು ಅಬ್ಬೆ ತುಮಕೂರಿನ ಡಾ. ಗಂಗಾಧರ ಮಹಾಸ್ವಾಮಿಗಳು, ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಹಾಗೂ ರಾವೂರ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಆಶೀರ್ವದಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಶಂಕ್ರಮ್ಮ ಡವಳಗಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆ
ಸಮಾರಂಭಕ್ಕೆ ಆಗಮಿಸುವ ಭಕ್ತರಿಗಾಗಿ ಮತ್ತು ಪೋಷಕರಿಗಾಗಿ ಸಂಸ್ಥೆಯ ವತಿಯಿಂದ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ,ಸುಮಾರು 3,000ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಸುಸಜ್ಜಿತ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸುಸಜ್ಜಿತ ಊಟದ ವ್ಯವಸ್ಥೆ ಮಾಡಲಾಗಿದೆ,ಪಟ್ಟಣದ ಪ್ರತಿಯೊಬ್ಬ ನಾಗರಿಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು," ಎಂದು ನಾಗರೆಡ್ಡಿ ಪಾಟೀಲರು ಕೋರಿದ್ದಾರೆ.

ಮಂಗಳವಾರ, ಫೆಬ್ರವರಿ 17, 2026

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದುಗೌಡ ಕುರಾಳ ನೇಮಕ.

ಚಿತ್ತಾಪುರ: ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ಸಂಘಟನಾ ಪರ್ವದ ಅಂಗವಾಗಿ, ಕಲಬುರಗಿ ಗ್ರಾಮಾಂತರ ಜಿಲ್ಲೆಯ ಚಿತ್ತಾಪುರ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಇದರಲ್ಲಿ ಬಿಜೆಪಿ ಯುವ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದುಗೌಡ ಕುರಾಳ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಜವಾಬ್ದಾರಿ ನೀಡಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಂಡಲ ಅಧ್ಯಕ್ಷರಾದ ರವೀಂದ್ರ ಸಜ್ಜನಶೆಟ್ಟಿ ಅವರು, ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸಮರ್ಥ ಹಾಗೂ ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಮ್ಮ ನೇಮಕಾತಿ ಕುರಿತು ಸಂತಸ ವ್ಯಕ್ತಪಡಿಸಿರುವ ಸಿದ್ದುಗೌಡ ಕುರಾಳ ಅವರು ಮಾತನಾಡುತ್ತಾ "ನನ್ನ ಮೇಲೆ ನಂಬಿಕೆಯಿಟ್ಟು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಿದ ಪಕ್ಷದ ಎಲ್ಲಾ ಹಿರಿಯ ನಾಯಕರಿಗೆ ಮತ್ತು ಮಂಡಲ ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದ ಯುವಕರಿಗೆ ತಲುಪಿಸುವುದು ನನ್ನ ಆದ್ಯತೆಯಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ಯುವಶಕ್ತಿಯನ್ನು ಸಂಘಟಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ," ಎಂದು ತಿಳಿಸಿದರು.

ಶಿವಾಜಿ ಮತ್ತು ಸರ್ವಜ್ಞ ಜಯಂತಿ: ತಾಲ್ಲೂಕು ಆಡಳಿತ ಸಜ್ಜು.

ಚಿತ್ತಾಪುರ: ಪಟ್ಟಣದ ಪ್ರಜಾಸೌಧದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಕವಿ ಸರ್ವಜ್ಞರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, "ಮಹಾನ್ ಪುರುಷರ ಜಯಂತಿಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ. ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಸಮಾಜದ ಮುಖಂಡರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು," ಎಂದು ತಿಳಿಸಿದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾದ ಅನಿಲ ಯೆಂದೆ ಅವರು ಮಾತನಾಡಿ, "ಬರುವ ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯು ತಾಲ್ಲೂಕಿನಲ್ಲಿ ಅತ್ಯಂತ ಅದ್ದೂರಿಯಾಗಿ ಮತ್ತು ಶಿಸ್ತುಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದೆ," ಎಂದರು.

ಇದೇ ವೇಳೆ ಕುಂಬಾರ ಸಮಾಜದ ಮಾಜಿ ಅಧ್ಯಕ್ಷರಾದ ಜಗದೇವ ಕುಂಬಾರ ಅವರು ಮಾತನಾಡಿ, "ಫೆಬ್ರವರಿ 20ರಂದು ಸರ್ವಜ್ಞ ಜಯಂತಿ ಇದ್ದು, ಅಂದು ಶಿಷ್ಟಾಚಾರದಂತೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸರಳವಾಗಿ ಆಚರಣೆಯಲ್ಲಿ ನಮ್ಮ ಸಮಾಜದ ಮುಖಂಡರು ಭಾಗವಹಿಸುತ್ತೆವೆ. ಮುಂದಿನ ಕೆಲವೇ ದಿನಗಳಲ್ಲಿ ಸಮಾಜದ ವತಿಯಿಂದ ಸರ್ವಜ್ಞ ಜಯಂತಿಯನ್ನು ಬೃಹತ್ ಪ್ರಮಾಣದಲ್ಲಿ ಆಚರಿಸಲು ಚಿಂತಿಸಲಾಗಿದೆ. ಆ ಸಂದರ್ಭದಲ್ಲಿ ತಾಲ್ಲೂಕು ಆಡಳಿತವು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು," ಎಂದು ಕೋರಿದರು.

ವಿವಿಧ ಜಯಂತೋತ್ಸವದಲ್ಲಿ ಮಹಾನ್ ಪುರುಷರ ಭಾವಚಿತ್ರಗಳಿಗೆ ಪ್ಲಾಸ್ಟಿಕ್ ಹಾರ ಹಾಕಿ ಜಯಂತಿ ಮಾಡುತ್ತಿರುವು ಕಂಡುಬರುತ್ತಿದೆ ಕೊಡಲೆ ತಹಸೀಲ್ದಾರರು ಎಲ್ಲಾ ಇಲಾಖೆಗಳಿಗೆ ಪ್ಲಾಸ್ಟಿಕ್ ಹಾರ ನಿಷೇಧ ಮಾಡಲು ಆದೇಶ ಹೊರಡಿಸಬೇಕು ಎಂದರು 

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ, ಶಿಕ್ಷಣ ಇಲಾಖೆಯ ಶಿವಶರಣಪ್ಪ, ರೋಹಿತ್ ಚವ್ಹಾಣ್, ಶಿವಪ್ರಕಾಶ್, ಅಮೃತ ಕ್ಷೀರ ಸಾಗರ, ರತ್ನ ಕುಮಾರ್, ಡಾ. ಶಾಂತಯ್ಯ, ಶ್ರೀಮತಿ ಸುನಿತಾ, ಸಂತೋಷ ಕುಮಾರ್, ರೋಹಿತ್ ಯೆಂದೆ, ಮನೋಜ್, ಮೋಹಿತ್ ಕಟ್ಟಿಮನಿ. ಆಕಾಶ್ ಸುಗಂಧಿ, ಶಶಿಕುಮಾರ್ ಕುಂಬಾರ ಇತರರು ಇದ್ದರು.

ಶುಕ್ರವಾರ, ಫೆಬ್ರವರಿ 13, 2026

ಮಾತಾ ಮಾಣಿಕೇಶ್ವರಿ ಭಕ್ತರಿಗೆ ರಾಜೇಶ್ ಹೋಳಿಕಟ್ಟಿ ತಂಡದಿಂದ ಅಲ್ಪಾಹಾರ ಸೇವೆ.

ಚಿತ್ತಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಯಾನಗುಂದಿಯ ಶ್ರೀ ಮಾತಾ ಮಾಣಿಕೇಶ್ವರಿ ದೇವಿಯ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತಾದಿಗಳಿಗೆ ತಾಲೂಕು ಕೋಲಿ ಸಮಾಜದ ಯುವ ಘಟಕದ ವತಿಯಿಂದ ಹಣ್ಣು-ಹಂಪಲು ಹಾಗೂ ಕುಡಿಯುವ ನೀರನ್ನು ವಿತರಿಸಲಾಯಿತು.

ಚಿತ್ತಾಪುರ ಮತಕ್ಷೇತ್ರದ ಬೆಣ್ಣೂರ್ (ಬಿ) ಗ್ರಾಮದ ಮಾತಾ ಮಾಣಿಕೇಶ್ವರಿಯ ಭಕ್ತರು ಯಾನಗುಂದಿ ಜಾತ್ರಾ ಮಹೋತ್ಸವದ ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ಮಾರ್ಗಮಧ್ಯೆ ತಾಲೂಕು ಕೋಲಿ ಸಮಾಜದ ಯುವ ಘಟಕದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಭಕ್ತರಿಗೆ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡುವ ಮೂಲಕ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಹೋಳಿಕಟ್ಟಿ ರವರು ಮಾತನಾಡಿ ಅವ "ಶಿವನ ಆರಾಧನೆಯ ಪವಿತ್ರ ಮಾಸದಲ್ಲಿ ಮಾತಾ ಮಾಣಿಕೇಶ್ವರಿಯ ದರ್ಶನಕ್ಕೆ ನೂರಾರು ಕಿಲೋಮೀಟರ್ ಪಾದಯಾತ್ರೆ ಬೆಳೆಸುವ ಭಕ್ತರ ಶ್ರದ್ಧೆ ಅಪಾರವಾದದ್ದು. ಇಂತಹ ಭಕ್ತಾದಿಗಳಿಗೆ ಅಲ್ಪಪ್ರಮಾಣದ ಸೇವೆಯನ್ನು ಸಲ್ಲಿಸುವುದು ನಮ್ಮ ಸಮಾಜದ ಭಾಗ್ಯವಾಗಿದೆ. ಪಾದಯಾತ್ರಿಗಳ ಹಸಿವು-ನೀರಿಕೆ ನೀಗಿಸುವ ಮೂಲಕ ಅವರ ಪವಿತ್ರ ಕಾರ್ಯಕ್ಕೆ ಕೈಜೋಡಿಸುವುದು ನಮ್ಮ ಉದ್ದೇಶ," ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪೊಲೀಸ್ ದತ್ತು ಜಾನೆ, ಶಂಕರ್ ತಳವಾರ್, ಸಾಬಣ್ಣ ಹೋಳಿಕಟ್ಟಿ, ದೇವರಾಜ್ ತಳವಾರ್, ಕರಣಕುಮಾರ್, ರಾಜೇಶ್ ಬೆನಕನಹಳ್ಳಿ, ಬೆಳ್ಳಪ್ಪ ಇಂಗನ್ಕಲ್, ನಾಗರಾಜ್ ಮೈನಾಳ್ಕರ್, ಮಹದೇವ್ ಬೆನ್ನೂರುಕಾರ್, ಬಸವರಾಜ, ವಿಕ್ರಂಕುಮಾರ್, ಗೂಳಿ ಡಿಗ್ಗಿ, ಶಾಮರಾವ್, ಗಣೇಶ್ ಇಟಗಿ, ನಾಗರಾಜ್ ಬೋವಿ, ಸುಭಾಷ ಬೋವಿ, ಶಿವು ಸೇರಿದಂತೆ ಅನೇಕ ಭಕ್ತಾದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸೇವಾಲಾಲ್ ಜಯಂತೋತ್ಸವ: ಭವ್ಯ ಮೆರವಣಿಗೆಯ ಸಿದ್ಧತೆ.

ಚಿತ್ತಾಪುರ: ಪಟ್ಟಣದಲ್ಲಿ ಫೆಬ್ರವರಿ 15ರ ಭಾನುವಾರದಂದು ತಾಲೂಕು ಆಡಳಿತ ಹಾಗೂ ಸೇವಾಲಾಲ್ ಜಯಂತೋತ್ಸವ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಗೋಪಾಲ್ ರಾಠೋಡ್ ತಿಳಿಸಿದರು.

ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ತಾಲೂಕಿನ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ತಹಶೀಲ್ದಾರ್ ಕಾರ್ಯಾಲಯದಿಂದ ಭವ್ಯ ಮೆರವಣಿಗೆ ಆರಂಭವಾಗಿ ರೈಲ್ವೆ ಸ್ಟೇಷನ್ ಹತ್ತಿರವಿರುವ ಸೇವಾಲಾಲ್ ವೃತ್ತಕ್ಕೆ ತಲುಪಿ ಅಲ್ಲಿ ವಿಶೇಷ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಮೆರವಣಿಗೆಯು ಸ್ಟೇಷನ್ ಮಾರ್ಗವಾಗಿ ನಾಗಾವಿ ಚೌಕ್, ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ ಹಾಗೂ ಲಾಡ್ಜಿಂಗ್ ಕ್ರಾಸ್ ಮುಖಾಂತರ ಸಾಗಿ ಪುನಃ ತಾಲೂಕು ಆಡಳಿತ ಕಾರ್ಯಾಲಯದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.

ಮೆರವಣಿಗೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರವಿರುವ ಪಲ್ಲಕ್ಕಿ ಪ್ರಮುಖ ಆಕರ್ಷಣೆಯಾಗಿರಲಿದೆ. ಬಂಜಾರ ಸಮಾಜದ ಸಾಂಪ್ರದಾಯಿಕ ವೇಷಭೂಷಣಗಳು, ಡೊಳ್ಳು ಕುಣಿತ, ಡಿಜೆ ಸೌಂಡ್ ಸಿಸ್ಟಮ್ ಸೇರಿದಂತೆ ಸಕಲ ವಾದ್ಯಗೋಷ್ಠಿಗಳು ಮೆರವಣಿಗೆಗೆ ಮೆರುಗು ನೀಡಲಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಚಂದು ಜಾಧವ, ಪ್ರಮುಖರಾದ ಭೀಮಸಿಂಗ್ ಚವ್ಹಾಣ, ಆಕಾಶ್ ಚವ್ಹಾಣ, ಸುನಿಲ್ ರಾಠೋಡ್, ದೇವಿದಾಸ್ ಚವ್ಹಾಣ, ಶಂಕರ್ ನಾಯಕ ಚೋಕಿ ತಾಂಡಾ, ನೀಲಕಂಠ ಪವಾರ್, ಗೋಪಿ ರಾಠೋಡ್, ರವಿ ಜಾಧವ, ರಾಜು ರಾಠೋಡ್, ಜಗದೀಶ್ ಪವಾರ್, ಶ್ರೀಕಾಂತ್ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಸ್ಥಾನ ನಿರ್ಮಾಣ: ಜೀರ್ಣೋದ್ಧಾರಕ್ಕೆ ಭಕ್ತರ ಸಾಥ್.

ಚಿತ್ತಾಪುರ: ತಾಲೂಕಿನ ದಂಡಗುಂಡ ಗ್ರಾಮದಲ್ಲಿರುವ ಪುರಾತನ ಹಳೆಯ ಬಸವಣ್ಣ ದೇವಸ್ಥಾನವನ್ನು ತೆರವುಗೊಳಿಸಿ, ಭಕ್ತರ ಆಶಯದಂತೆ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮಾದರಿಯಲ್ಲೇ ಭವ್ಯ ನೂತನ ಕಟ್ಟಡವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ತಿಳಿಸಿದರು.

ಗ್ರಾಮದ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಅವರು ತಯಾರಿಸಿದ 10 ಕೋಟಿ ರೂಪಾಯಿ ವೆಚ್ಚದ ನೀಲಿ ನಕ್ಷೆಯಂತೆ ಕಾಮಗಾರಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಭಕ್ತರ ಸ್ವಯಂ ಪ್ರೇರಿತ ದೇಣಿಗೆಯಿಂದಲೇ ಕೆಲಸ ಸಾಗಿದ್ದು, ಇದುವರೆಗೂ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳಿಗೆ ಹಣದ ಹೊಂದಾಣಿಕೆ ಮಾಡಲು ಟ್ರಸ್ಟ್ ಹಾಗೂ ಗ್ರಾಮಸ್ಥರು ತಂಡಗಳಾಗಿ ವಿವಿಧ ಗ್ರಾಮಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಲು ಸಜ್ಜಾಗಿದ್ದೇವೆ ಎಂದು ಅವರು ವಿವರಿಸಿದರು.

ದೇವಸ್ಥಾನದ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ತಲಾ 50 ಲಕ್ಷ ರೂ. ನೀಡಿದ್ದಾರೆ. ಇದಲ್ಲದೆ, 9 ಜನ ಭಕ್ತರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ವಂತ ಖರ್ಚಿನಲ್ಲಿ 9 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, "ಜೀರ್ಣೋದ್ಧಾರ ಕಾರ್ಯಕ್ಕೆ ಕೆಲವರು ಅಡೆತಡೆ ಒಡ್ಡಲು ಪ್ರಯತ್ನಿಸಿದ್ದರು. ಆದರೆ ಭಕ್ತರು ಅವರ ಕುತಂತ್ರಕ್ಕೆ ಮಣಿಯದೆ ಬೆಂಬಲ ನೀಡಿದ್ದರಿಂದ ದೇವಸ್ಥಾನದ ಚಿತ್ರಣವನ್ನೇ ಬದಲಾಯಿಸಲು ಸಾಧ್ಯವಾಗುತ್ತಿದೆ" ಎಂದರು.

ಟ್ರಸ್ಟ್ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ ದೇವಸ್ಥಾನಕ್ಕೆ ಭಕ್ತರು 80 ಕೆಜಿ ಬೆಳ್ಳಿಯ ಪಲ್ಲಕ್ಕಿ ಕಾಣಿಕೆಯಾಗಿ ನೀಡಿದ್ದಾರೆ. ಅಲ್ಲದೆ 50 ತೊಲೆ ಬಂಗಾರದ ಕಿರೀಟವೂ ಇದೆ. ಭಕ್ತರು ನೀಡಿದ ಬೆಳ್ಳಿಯ ಸಣ್ಣ ಪುಟ್ಟ ವಸ್ತುಗಳನ್ನು ಕರಗಿಸಿ ಗರ್ಭಗುಡಿಯಲ್ಲಿ ಸುಂದರ ಕಮಾನು ನಿರ್ಮಿಸಲು ಚಿಂತಿಸಲಾಗಿದೆ. ದೇವಸ್ಥಾನಕ್ಕೆ ಭಕ್ತರು ಹರಕೆಯ ರೂಪದಲ್ಲಿ ಹೋರಿಗಳನ್ನು ನೀಡುವ ಸಂಪ್ರದಾಯವಿದೆ. ಆದರೆ ಅವುಗಳ ನಿರ್ವಹಣೆ ಕಷ್ಟವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಭಕ್ತರು ಹೋರಿಗಳ ಬದಲಿಗೆ ಹಣವನ್ನು ದೇಣಿಗೆಯಾಗಿ ನೀಡಬೇಕು. ಈಗಿರುವ ಹೋರಿಗಳನ್ನು ರಶೀದಿ ಮೂಲಕ ಪಡೆದು ಭಕ್ತರು ಹರಕೆ ತೀರಿಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ ನ ಪ್ರಮುಖರಾದ ಮಹಾಂತಗೌಡ ಪಾಟೀಲ್ ಹಾಗೂ ರಾಜಶೇಖರ ಗೌಡ ಉಪಸ್ಥಿತರಿದ್ದರು

ಬುಧವಾರ, ಫೆಬ್ರವರಿ 11, 2026

ಚಿತ್ತಾಪುರ ಬಸ್ ನಿಲ್ದಾಣದ ದುಸ್ಥಿತಿ: ಸಾರ್ವಜನಿಕರ ಆಕ್ರೋಶ.

 ಕುಡಿಯಲು ಶುದ್ಧ ನೀರಿಲ್ಲ, ಸ್ವಚ್ಛತೆಯೂ ಇಲ್ಲ.

ಚಿತ್ತಾಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ನಿಲ್ದಾಣದ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ಕುಡಿಯುವ ನೀರು ಮತ್ತು ನೈರ್ಮಲ್ಯ
ನಿಲ್ದಾಣದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವು ಹೆಸರಿಗಷ್ಟೇ ಇದೆ. ಇಲ್ಲಿ ಸರಬರಾಜಾಗುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಮತ್ತು ಕೊಳಚೆ ತುಂಬಿಕೊಂಡಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಇನ್ನು ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಹೇಳತೀರದಾಗಿದೆ. ದುರ್ನಾತದಿಂದಾಗಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕವಿಗಳ ಚಿತ್ರಗಳಿಗೆ ಅಪಮಾನ, ನಿರ್ವಹಣೆಯಿಲ್ಲದ ಫ್ಯಾನ್‌ಗಳು ನಿಲ್ದಾಣದ ಗೋಡೆಗಳ ಮೇಲೆ ಅಳವಡಿಸಲಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾನ್ ಕವಿಗಳ ಭಾವಚಿತ್ರಗಳು ಧೂಳು ಹಿಡಿದು ಅನಾಥವಾಗಿವೆ. ವರ್ಷಗಳಿಂದ ಇವುಗಳನ್ನು ಸ್ವಚ್ಛಗೊಳಿಸುವ ಕನಿಷ್ಠ ಸೌಜನ್ಯವನ್ನೂ ಸಾರಿಗೆ ಇಲಾಖೆ ತೋರಿಲ್ಲ. ಅಳವಡಿಸಲಾದ ಫ್ಯಾನ್‌ಗಳು ಧೂಳಿನಿಂದ ತುಂಬಿ ನಿಷ್ಪ್ರಯೋಜಕವಾಗಿವೆ. ನಿಲ್ದಾಣಕ್ಕೆ ಸುಣ್ಣ-ಬಣ್ಣ ಬಳಿದು ವರ್ಷಗಳು ಕಳೆದಂತಿದ್ದು, ಕಟ್ಟಡವು ಭಣಗುಡುತ್ತಿದೆ.
ಸಾರಿಗೆ ವ್ಯವಸ್ಥಾಪಕರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕೂಡಲೇ ಈ ಸಮಸ್ಯೆಗಳತ್ತ ಗಮನಹರಿಸಿ, ಬಸ್ ನಿಲ್ದಾಣದ ನವೀಕರಣಕ್ಕೆ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.

"ನಾವು ಪ್ರತಿದಿನ ಹಳ್ಳಿಗಳಿಂದ ಶಾಲಾ-ಕಾಲೇಜಿಗೆ ಬರಲು ಇದೇ ನಿಲ್ದಾಣವನ್ನು ಅವಲಂಬಿಸಿದ್ದೇವೆ. ಇಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಕೂರಲು ಸರಿಯಾದ ಖುರ್ಚಿಗಳಿಲ್ಲ ಇದ್ದರು ಕಡಿಮೆ ಇವೆ. ಧೂಳು ಮತ್ತು ಗಲೀಜಿನ ನಡುವೆ ಬಸ್‌ಗಾಗಿ ಕಾಯಬೇಕಿದೆ. ಅಧಿಕಾರಿಗಳಿಗೆ ನಮ್ಮ ಕಷ್ಟ ಕಾಣುತ್ತಿಲ್ಲವೇ?"
  -ವಿಧ್ಯಾರ್ಥಿನಿ ಶೃತಿ 

"ವ್ಯಾಪಾರ-ವಹಿವಾಟುಗಳಿಗೆ ನೂರಾರು ಹಳ್ಳಿಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಬಸ್ ನಿಲ್ದಾಣದ ದುಸ್ಥಿತಿ ನೋಡಿದರೆ ವಾಕರಿಕೆ ಬರುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತು ನಿಲ್ದಾಣಕ್ಕೆ ಸುಣ್ಣ-ಬಣ್ಣ ಬಳಿಯಬೇಕು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು."
— ಮಲ್ಲಿಕಾರ್ಜುನ ಅಲ್ಲೂರಕರ್ 
ಕನ್ನಡ ಪರ ಹೋರಾಟಗಾರು ಚಿತ್ತಾಪೂರ 

ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಯಾಗಬೇಡಿ": ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ.

•ಕಳಪೆ ಕಾಮಗಾರಿ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ.  •ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ. ಚಿತ್ತಾಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಉಷ್ಣ...