ಚಿತ್ತಾಪುರ: ಪಟ್ಟಣದ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕಕ್ಕೆ ತಾಲ್ಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಇತ್ತೀಚೆಗೆ ಶೈಕ್ಷಣಿಕ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪುರಸಭೆಯ ಮುಖ್ಯಾಧಿಕಾರಿಗಳಾದ ಮನೋಜ್ ಕುಮಾರ್ ಗುರಿಕಾರ್ ಅವರು ವಿಶೇಷ ಮಾಹಿತಿ ನೀಡಿದರು.
ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಹೇಗೆ ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸಿಕೊಡಲಾಯಿತು. ಮುಖ್ಯವಾಗಿ ಹಸಿ ಕಸದಿಂದ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಅದರ ಸಂರಕ್ಷಣೆಯ ಕುರಿತು ಮುಖ್ಯಾಧಿಕಾರಿಗಳು ವಿವರಿಸಿದರು.
ನಂತರ ಮಾತನಾಡಿದ ಅವರು, "ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಇಂದಿನಿಂದಲೇ ಸಂಕಲ್ಪ ಮಾಡಬೇಕು. ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಪುರಸಭೆಯ ವಾಹನಗಳಿಗೆ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು," ಎಂದು ಕರೆ ನೀಡಿದರು.
ನಂತರ ಮುಖ್ಯಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಧ್ಯಾರ್ಥಿಗಳ ಪ್ರಶ್ನೆ, ಪ್ಲಾಸ್ಟಿಕ್ ಭೂಮಿಯಲ್ಲಿ ಕರಗಲು ಎಷ್ಟು ವರ್ಷ ಬೇಕು? ಎಂದಗಾ ಉತ್ತರಿದ ಅವರು ಪ್ಲಾಸ್ಟಿಕ್ ವಿಧಗಳ ಆಧಾರದ ಮೇಲೆ ನೂರಾರು ವರ್ಷಗಳು ಬೇಕಾಗಬಹುದು, ಅದಕ್ಕಾಗಿಯೇ ನಾವು ಮರುಬಳಕೆ (Recycle) ಮಾಡುವುದನ್ನು ಕಲಿಯಬೇಕು ಎಂದರು. ನಂತರ ಮತ್ತೆ ಪ್ರಶ್ನಿದ ವಿದ್ಯಾರ್ಥಿಗಳು ನಾವು ಮನೆಯಲ್ಲಿ ಗಿಡಗಳಿಗೆ ಸಾವಯವ ಗೊಬ್ಬರವನ್ನು ಹೇಗೆ ಬಳಸಬಹುದು ಎಂದರು ಆಗ ಉತ್ತರಿಸಿ ಅವರು ಪುರಸಭೆಯಿಂದ ಸಿದ್ಧವಾದ ಗೊಬ್ಬರವನ್ನು ನೀವು ಪಡೆದು ಗಿಡಗಳಿಗೆ ಬಳಸಬಹುದು, ಇದರಿಂದ ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ. ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಮುಖ್ಯಾಧಿಕಾರಿಗಳು ಸರಳವಾಗಿ ಉತ್ತರಿಸುವ ಮೂಲಕ ಅವರಲ್ಲಿ ಪರಿಸರ ಪ್ರೇಮವನ್ನು ಜಾಗೃತಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರೋಹಿತ್ ಕಟ್ಟಿಮನಿ, ಶಾಲೆಯ ಮುಖ್ಯಗುರುಗಳಾದ ನಾಗಮ್ಮ ಕುಂಬಾರ, ಪುರಸಭೆ ಸಮುದಾಯ ಸಂಚಾಲಕರಾದ ಮೀನಾಕ್ಷಿ, ಅಕ್ಷತಾ, ರೇಣುಕಾ, ಶಿಕ್ಷಕ ಸೋಪನಗೌಡ ಪಾಟೀಲ್, ಅತಿಥಿ ಶಿಕ್ಷಕ ಜಗದೇವ ಕುಂಬಾರ, ಎಲ್ಎಲ್ಎಫ್ ಶಿಕ್ಷಕ ಹಣಮಂತ ಕುಂಬಾರ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ